More

    ಯೋಗಾಸನದಿಂದ ಹಿಂದೆ ಭಾರತೀಯರು- ನ್ಯಾಯಾಧೀಶ ಮಹಾವೀರ್ ವಿಷಾದ

    ದಾವಣಗೆರೆ: ಋಷಿ ಮುನಿಗಳಿಂದ ಪುರಾತನ ಕಾಲದಿಂದ ಬಂದಿರುವ ಯೋಗ ಪದ್ಧತಿಗೆ ಪಾಶ್ಚಿಮಾತ್ಯರು ಮಾರುಹೋಗಿ ಅದನ್ನು ಅನುಸರಿಸುತ್ತಿದ್ದಾರೆ. ಭಾರತೀಯರಾದ ನಾವು ಮರೆತಿದ್ದೇವೆ ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಸಿವಿಲ್ ನ್ಯಾಯಾಧೀಶ ಮಹಾವೀರ್ ವಿಷಾದಿಸಿದರು.
    ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದಿಂದ ಇಲ್ಲಿನ ಜಿಲ್ಲಾ ಕಾರಾಗೃಹದ ವಿಚಾರಣಾಧೀನ ಕೈದಿಗಳಿಗೆ ಹಮ್ಮಿಕೊಂಡಿದ್ದ ಯೋಗ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
    ಬುದ್ಧಿಮತ್ತೆಯಲ್ಲಿ ಹಿರಿಯರೆನಿಸಿಕೊಂಡ ಐರೋಪ್ಯ ರಾಷ್ಟ್ರಗಳು ಯೋಗ ಕಲೆಯನ್ನು ಅನುಸರಿಸುತ್ತಿವೆ. ಯೋಗ ಬಿತ್ತರಿಸುವ ಟಿವಿ ವಾಹಿನಿಗಳನ್ನು ಪಾಶ್ಚಿಮಾತ್ಯರೇ ಹೆಚ್ಚು ವೀಕ್ಷಿಸುತ್ತಿದ್ದಾರೆ. ನಾವೂ ಸಹ ನಿತ್ಯ ಯೋಗ, ಪ್ರಾಣಾಯಾಮ ಹಾಗೂ ನಡಿಗೆಗೆ ಒತ್ತು ನೀಡುವುದು ಅಗತ್ಯವಿದೆ ಎಂದರು.
    ನಾವಿಂದು ರಾಸಾಯನಿಕ ಔಷಧ ಬಳಸಿ ಬೆಳೆ ಬೆಳೆಯುತ್ತಿದ್ದೇವೆ. ಈ ವಿಷಯುಕ್ತ ಆಹಾರಸೇವನೆಯ ಜೀವನಶೈಲಿಯಿಂದಾಗಿ ಆರೋಗ್ಯ ಕಳೆದುಕೊಳ್ಳುತ್ತಿದ್ದೇವೆ. ನಮ್ಮ ದೇಹ ಮತ್ತು ಮನಸ್ಸಿನ ನಿಯಂತ್ರಣಕ್ಕೆ ಯೋಗ ಮಾಡಬೇಕಿದೆ. ಸರ್ಕಾರಿ ನೌಕರರು, ಸಿಬ್ಬಂದಿ ಕೂಡ ಇದ್ದಲ್ಲಿಯೇ ದೈಹಿಕ ಚಟುವಟಿಕೆಯಲ್ಲಿ ತೊಡಗಬೇಕಿದೆ ಎಂದು ಆಶಿಸಿದರು.
    ಯೋಗ ಗುರು ವೈದ್ಯಶ್ರೀ ಚನ್ನಬಸವಣ್ಣ ಮಾತನಾಡಿ ಒತ್ತಡದಿಂದಾಗಿ 3 ಕೋಟಿಯಷ್ಟು ಜನರು ರಕ್ತದೊತ್ತಡ, ಮಧುಮೇಹಕ್ಕೆ ಒಳಗಾಗುತ್ತಿದ್ದಾರೆ. ಅವರೆಲ್ಲರೂ ನಿತ್ಯ ಕೋಟ್ಯಂತರ ಹಣವನ್ನು ಔಷಧಕ್ಕಾಗಿ ನೀಡುತ್ತಿರುವುದು ಬೇಸರದ ಸಂಗತಿ. ಒತ್ತಡ ಮುಕ್ತಿಗಾಗಿಯೋಗಕ್ಕೆ ಮಹತ್ವ ನೀಡಬೇಕಿದೆ ಎಂದರು.
    ಕಾರಾಗೃಹದ ಕೈದಿಗಳು ಪರಿವರ್ತನೆಗೊಂಡು ಸಮಾಜಕ್ಕೆ ಮರಳಬೇಕು. ಯಾವುದೋ ಅನಗತ್ಯ ವಿಚಾರಗಳಿಗೆ ಮನಸ್ಸನ್ನು ಹರಿಬಿಟ್ಟು ವಿಚಲಿತರಾಗಬಾರದು. ಮತ್ತೊಬ್ಬರ ಬಗ್ಗೆ ಕೇಡು ಬಯಸಬಾರದು ಎಂದು ಕಿವಿಮಾತು ಹೇಳಿದರು.
    ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ, ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಎಲ್. ಭಾಗೀರಥಿ, ಕೆ.ಎಸ್.ಮಾನವಿ, ಯೋಗದಿಂದ ಪರಿವರ್ತನೆಗೊಂಡು ಕಾರಾಗೃಹದಿಂದ ಬಿಡುಗಡೆಯಾಗಿದ್ದ ಚಂದ್ರಶೇಖರ್, ಜಿಲ್ಲಾ ಯೋಗ ಒಕ್ಕೂಟದ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts