More

    ಯೇಸುಕ್ರಿಸ್ತ ಪ್ರತಿಮೆ ಭಗ್ನ: ಸೂಸೆಪಾಳ್ಯದಲ್ಲಿ ಕಿಡಿಗೇಡಿಗಳ ಕೃತ್ಯ ಕೋಮು ಸೌಹಾರ್ದತೆ ಕದಡುವ ಯತ್ನ

    ಚಿಕ್ಕಬಳ್ಳಾಪುರ: ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ (ಮತಾಂತರ ನಿಷೇಧ) ಕಾಯ್ದೆ ಜಾರಿಗೆ ವಿರೋಧ ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಗಡಿ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಘಟನೆ ನಡೆದಿದೆ. ತಾಲೂಕಿನ ಸೂಸೆಪಾಳ್ಯದ ಕಲ್ಲಿನ ಮೇಲೆ ಪ್ರಾರ್ಥನೆಗಾಗಿ ಗಾಜಿನ ಪೆಟ್ಟಿಗೆಯಲ್ಲಿರಿಸಿದ್ದ ಯೇಸು ಪ್ರತಿಮೆಯನ್ನು ಕಿಡಿಗೇಡಿಗಳು ಭಗ್ನಗೊಳಿಸಿರುವುದು ಗುರುವಾರ ಬೆಳಕಿಗೆ ಬಂದಿದೆ.

    ಗ್ರಾಮದ ರಂಗಧಾಮ ಕೆರೆ-ಕಟ್ಟೆ ಸಮೀಪದ ರಸ್ತೆ ಪಕ್ಕದ ಕಲ್ಲಿನ ಮೇಲೆ ಹಲವು ವರ್ಷಗಳ ಹಿಂದೆ ಯೇಸು ಮೂರ್ತಿ ಮತ್ತು ಶಿಲುಬೆಯನ್ನು ಪ್ರತಿಷ್ಠಾಪಿಸಿದ್ದು ಪ್ರಾರ್ಥನೆ ಪೂಜೆ ಸಲ್ಲಿಸಲಾಗುತ್ತಿದೆ. ಪ್ರತಿಮೆ ಭಗ್ನಗೊಂಡಿರುವ ಸ್ಥಿತಿಯಲ್ಲಿರುವುದು ಗುರುವಾರ ಬೆಳಗ್ಗೆ ಕಂಡು ಬಂದಿದೆ.
    ಪ್ರತಿಮೆ ಇರುವ ರಸ್ತೆಯಲ್ಲಿ ಅನೇಕರು ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡುತ್ತಾರೆ. ಗುರುವಾರ ಬೆಳಗ್ಗೆ ಸ್ಥಳೀಯರು ಪ್ರತಿಮೆ ಭಗ್ನಗೊಂಡಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಕ್ರೈಸ್ತ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಕೋಮು ಸೌಹಾರ್ದತೆ ಕದಡುವ ದುರುದ್ದೇಶದಿಂದ ಮೂರ್ತಿಯನ್ನು ಭಗ್ನಗೊಳಿಸಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂತ ಅಥೋನಿ ಡ್ಯಾನಿಯಲ್ ದೂರಿನಲ್ಲಿ ಒತ್ತಾಯಿಸಿದ್ದಾರೆ.

    ತನಿಖಾ ತಂಡ ರಚನೆ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಚಿಕ್ಕಬಳ್ಳಾಪುರ ಡಿವೈಎಸ್ಪಿ ನೇತೃತ್ವದಲ್ಲಿ ಮೂರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಜತೆಗೆ ಘಟನಾ ಸ್ಥಳದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಸ್ಥಳ ಪರಿಶೀಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಈ ನಿಟ್ಟಿನಲ್ಲಿ ಎಲ್ಲ ಧರ್ಮಿಯರು ಶಾಂತಿ ಕಾಪಾಡಲು ಸಹಕರಿಸಬೇಕೆಂದು ಮನವಿ ಮಾಡಿದರು.

    ಮತ್ತೊಂದು ಮೂರ್ತಿ ಪ್ರತಿಷ್ಠಾಪನೆ: ಪ್ರತಿಮೆ ಭಗ್ನದಿಂದ ಆಕ್ರೋಶಗೊಂಡ ಕ್ರೈಸ್ತ ಸಮುದಾಯದವರು ಪ್ರತಿಭಟನೆಗೆ ಮುಂದಾಗಿದ್ದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪೊಲೀಸರ ಮನವೊಲಿಕೆಯಿಂದ ಶಾಂತರಾದ ಮುಖಂಡರು ಪ್ರತಿಭಟನೆ ನಿರ್ಧಾರವನ್ನು ಕೈಬಿಟ್ಟು ಮತ್ತೊಂದು ಹೊಸ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ಪ್ರತಿಷ್ಠಾಪಿಸಿದರು.

    ಮರುಕಳಿಸಿದ ಪ್ರಕರಣ: ಕೆಲ ವರ್ಷಗಳಿಂದ ರಾಜ್ಯಾದ್ಯಂತ ಚರ್ಚ್‌ಗಳ ಮೇಲೆ ದಾಳಿ ಪ್ರಕರಣಗಳು ಸಂಚಲನ ಮೂಡಿಸಿದ್ದ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕಕಾಡಿಗೇನಹಳ್ಳಿಯ ಚರ್ಚ್ ಮೇಲೆಯೂ ದಾಳಿಯಾಗಿತ್ತು. ಈಗ ಮತಾಂತರ ನಿಷೇಧ ಕಾಯ್ದೆ ಜಾರಿಯ ಚರ್ಚೆ ಸಂದರ್ಭದಲ್ಲಿ ದುಷ್ಕೃತ್ಯ ನಡೆದಿದೆ.

    ಚಿಕ್ಕಬಳ್ಳಾಪುರ ತಾಲೂಕಿನ ಸೂಸೆಪಾಳ್ಯದಲ್ಲಿ ದೇವರ ಪ್ರತಿಮೆ ಭಗ್ನಗೊಳಿಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕಿಡಿಗೇಡಿಗಳನ್ನು ಬಂಧಿಸಲು ತಂಡವನ್ನು ರಚಿಸಲಾಗಿದೆ.
    ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

     

    ದೇವರ ಪ್ರತಿಮೆ ಭಗ್ನವು ಶಾಂತಿ ಕದಡುವ, ಜನರ ನಡುವೆ ಒಡುಕು ಮೂಡಿಸುವ ದುಷ್ಕೃತ್ಯ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಿರ್ದಾಕ್ಷಿನ್ಯ ಕ್ರಮ ಕೈಗೊಳ್ಳಬೇಕು.
    ಸಗಾಯ್ ರಾಜ್, ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts