More

    ಯೂರಿಯಾ ಕೊರತೆ ಆಗದಿರಲಿ

    ರಾಣೆಬೆನ್ನೂರ: ಜಿಲ್ಲೆಯಲ್ಲಿ ಈ ಹಿಂದೆ ಗೊಬ್ಬರಕ್ಕಾಗಿ ದೊಡ್ಡ ಗಲಾಟೆಯಾಗಿತ್ತು. ಅಂಥ ಪರಿಸ್ಥಿತಿ ಮರುಕಳಿಸದಂತೆ ನೋಡಿಕೊಳ್ಳಬೇಕು. ಯೂರಿಯಾ ಗೊಬ್ಬರ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಅಧಿಕಾರಿಗೆ ಶಾಸಕ ಅರುಣಕುಮಾರ ಪೂಜಾರ ಸಲಹೆ ನೀಡಿದರು.

    ನಗರದ ಶಿಕ್ಷಕರ ಸಂಘದ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಹಲಗೇರಿ ಗ್ರಾಮದಲ್ಲಿ ಖಾಸಗಿ ಅಗ್ರೋ ಕೇಂದ್ರದವರು ಯೂರಿಯಾ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ರೈತರಿಗೆ ಸೊಸೈಟಿಯಲ್ಲಿ ಗೊಬ್ಬರ ಖರೀದಿಸುವಂತೆ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

    ಕೃಷಿ ಸಹಾಯಕ ನಿರ್ದೇಶಕ ಎಚ್.ಬಿ. ಗೌಡಪ್ಪಳವರ ಪ್ರತಿಕ್ರಿಯಿಸಿ, ಆ ವಿಷಯ ನನ್ನ ಗಮನಕ್ಕೆ ಬಂದ ನಂತರ ಗ್ರಾಮಕ್ಕೆ ತೆರಳಿ ಎಲ್ಲ ರೈತರಿಗೂ ಗೊಬ್ಬರ ಮಾರಾಟ ಮಾಡುವಂತೆ ಖಾಸಗಿ ಅಗ್ರೋ ಕೇಂದ್ರದವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ತಾಲೂಕಿನಲ್ಲಿ 6875 ಟನ್ ಯೂರಿಯಾ ಗೊಬ್ಬರ ಬೇಡಿಕೆ ಇದೆ. 6475 ಟನ್ ಪೂರೈಕೆ ಮಾಡಲಾಗಿದೆ. ಇತ್ತೀಚೆಗೆ ಮಳೆ ಹೆಚ್ಚಾಗಿ ಸುರಿದ ಕಾರಣ ರೈತರು ಎರಡೆರಡು ಬಾರಿ ಯೂರಿಯಾ ಗೊಬ್ಬರ ಬಳಸಿದ್ದರಿಂದ ಸ್ವಲ್ಪ ಕೊರತೆಯಾಗಿದೆ. ಈ ವಾರದಲ್ಲಿ ಮತ್ತೆ ಗೊಬ್ಬರ ಬರಲಿದೆ ಎಂದು ತಿಳಿಸಿದರು.

    ತಾಲೂಕಿನಲ್ಲಿ ಜಲಜೀವನ ಮಿಷನ್​ನಡಿ ಕೈಗೊಳ್ಳುವ ಕೆಲಸದಲ್ಲಿ ಹಳೇ ಪೈಪ್​ಗಳನ್ನು ಬಳಸಬೇಡಿ. ಹೀಗಾದಲ್ಲಿ ಯೋಜನೆ ಯಶಸ್ವಿಯಾಗುವುದಿಲ್ಲ ಎಂದು ಶಾಸಕ ವಿರೂಾಕ್ಷಪ್ಪ ಬಳ್ಳಾರಿ ಅವರು ಅಧಿಕಾರಿಗೆ ಸಲಹೆ ನೀಡಿದರು. ಅದಕ್ಕೆ ಶಾಸಕ ಅರುಣಕುಮಾರ ಪೂಜಾರ ಸಹ ಧ್ವನಿಗೂಡಿಸಿದರು.

    ತಾಲೂಕು ಆರೋಗ್ಯಾಧಿಕಾರಿ ಡಾ. ಸಂತೋಷ ಮಾತನಾಡಿ, ತಾಲೂಕಿನಲ್ಲಿ ಸದ್ಯ 10 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಇದುವರೆಗೆ 68,803 ಜನರಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್, 13109 ಜನರಿಗೆ ಎರಡನೇ ಡೋಸ್ ನೀಡಲಾಗಿದೆ. ಇದಲ್ಲದೆ, 7614 ಕಾಲೇಜ್ ವಿದ್ಯಾರ್ಥಿಗಳು, ಸಿಬ್ಬಂದಿಗೆ ಲಸಿಕೆ ಹಾಕಲಾಗಿದೆ ಎಂದರು.

    ತಾಪಂ ಇಒ ಟಿ.ಆರ್. ಮಲ್ಲಾಡದ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಚೋಳಪ್ಪ ಕಸವಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts