More

    ಯೂರಿಯಾ ಕಳ್ಳ ಸಾಗಣೆ ಇಲ್ಲ


    ಕೃಷಿ ಇಲಾಖೆ ಅಧಿಕಾರಿ ಮಾಹಿತಿ

    ಹುಣಸೂರು: ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಯೂರಿಯಾ ತಾಲೂಕಿಗೆ ಪೂರೈಕೆಯಾಗಿದ್ದು, ಹೊರ ರಾಜ್ಯಕ್ಕೆ ಕಳ್ಳ ಸಾಗಣೆ ಮಾಡಿರುವ ಕುರಿತು ಯಾವುದೇ ಪ್ರಕರಣ ಈವರೆಗೆ ಕಂಡುಬಂದಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯ ತಾಂತ್ರಿಕ ಅಧಿಕಾರಿ ಹರೀಶ್ ತಿಳಿಸಿದರು.

    ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಪಂ ಆಡಳಿತಾಧಿಕಾರಿ ಎಚ್.ಇ.ನಂದ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಹುಣಸೂರು ತಾಲೂಕಿಗೆ ಒಟ್ಟು 2300 ಮೆಟ್ರಿಕ್ ಟನ್ ಯೂರಿಯಾ ಬೇಡಿಕೆಯಿತ್ತು. ಆದರೆ ಈಗಾಗಲೇ ನಿಗದಿತ ಪ್ರಮಾಣಕ್ಕೂ ಮೀರಿ 2400 ಮೆ.ಟನ್ ಪೂರೈಸಲಾಗಿದೆ ಎಂದರು.

    ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಭೂಮಿಗೆ ಹಾಕಿದ ರಸಗೊಬ್ಬರ ಮಳೆನೀರಿನಲ್ಲಿ ಕೊಚ್ಚಿ ಹೋಗುತ್ತಿದೆ. ಹಾಗಾಗಿ ರೈತರು ಪದೇ ಪದೆ ಯೂರಿಯಾ ಖರೀದಿಸುತ್ತಿದ್ದಾರೆ. ಹೊಸದಾಗಿ ಆವಿಷ್ಕಾರಗೊಂಡಿರುವ ದ್ರವರೂಪದ ನ್ಯಾನೋ ಯೂರಿಯಾ ಬಳಸಲು ರೈತರಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ತಾಲೂಕಿನಿಂದ ಕೇರಳಕ್ಕೆ ಯೂರಿಯಾವನ್ನು ಕದ್ದುಮುಚ್ಚಿ ಸಾಗಿಸಲಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನಲೆಯಲ್ಲಿ ತಾಲೂಕಿನ ಗಡಿಭಾಗಗಳಲ್ಲಿ ಚೆಕ್‌ಪೋಸ್ಟ್‌ನಲ್ಲಿ ನಿಗಾ ವಹಿಸಲಾಗಿದೆ. ಈವರೆಗೆ ಅಂತಹ ಪ್ರಕರಣ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

    ವರ್ಷಗಳೇ ಸಂದರೂ ಕಾಮಗಾರಿ ಪೂರ್ಣಗೊಂಡಿಲ್ಲ ಏಕೆ?: ಆಡಳಿತಾಧಿಕಾರಿ ನಂದ ಮಾತನಾಡಿ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ವತಿಯಿಂದ 2016-17ರಲ್ಲಿ ಅನುಮೋದನೆಗೊಂಡ ಅಭಿವೃದ್ಧಿ ಕಾಮಗಾರಿಗಳು ಇಂದಿಗೂ ಪೂರ್ಣಗೊಂಡಿಲ್ಲ. ಸಮಸ್ಯೆಗಳನ್ನು ಪರಿಹರಿಸಿಕೊಂಡು ಕಾಮಗಾರಿ ಪೂರ್ಣಗೊಳಿಸುವುದು ನಿಮ್ಮ ಕರ್ತವ್ಯವಲ್ಲವೇ? 1 ಕೋಟಿ ರೂ.ವೆಚ್ಚದ ಕಾಮಗಾರಿ ನಾಲ್ಕಾರು ವರ್ಷಗಳಿಂದ ಮುಂದುವರಿದಿದೆ ಎಂದರೆ ಏನರ್ಥ ಎಂದು ನಿಯಮಿತದ ಸಹಾಯಕ ಇಂಜಿನಿಯರ್ ವಿನಯ್ ಅವರನ್ನು ತರಾಟೆಗೆ ತೆಗೆದುಕೊಂಡರು.

    ಚಿಕ್ಕಹುಣಸೂರು ಕೆರೆ ಅಭಿವೃದ್ಧಿ ಕಾಮಗಾರಿ ನಾಲ್ಕು ವರ್ಷಗಳೇ ಸಂದರೂ ಪೂರ್ಣಗೊಂಡಿಲ್ಲ. ವಾಕಿಂಗ್ ಪಾಥ್‌ನಲ್ಲಿ ಗಿಡಗಂಟಿಗಳು ಬೆಳೆದು ಇಡೀ ಸ್ಥಳ ಅಕ್ರಮಚಟುವಟಿಕೆಗಳ ತಾಣವಾಗಿದೆ ಎಂಬ ದೂರು ಬಂದಿದೆ. ಹೀಗ್ಯಾಕೆ ಮಾಡುತ್ತಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದಾಗ, ಕೆಲವು ಕಾವಗಾರಿಗಳಿಗೆ ಸರ್ಕಾರದ ಅನುದಾನದ ಕೊರತೆ, ಮತ್ತೆ ಕೆಲವಡೆ ಯೋಜನೆಯಲ್ಲಿನ ಬದಲಾವಣೆಗಳೂ ವಿಳಂಬಕ್ಕೆ ಕಾರಣವಾಗಿದ್ದು, ಶೀಘ್ರ ಪೂರ್ಣಗೊಳಿಸುವುದಾಗಿ ತಿಳಿಸಿದರು.

    180 ಬಿಪಿಎಲ್ ಕಾರ್ಡ್ ವಜಾ; ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಶಿರಸ್ತೇದಾರ್ ರಾಮಚಂದ್ರ ಮಾತನಾಡಿ, ತಾಲೂಕಿನಲ್ಲಿ ಈವರೆಗೆ ಒಟ್ಟು 180 ಬಿಪಿಎಲ್ ಕಾರ್ಡ್‌ಗಳನ್ನು ವಜಾಗೊಳಿಸಲಾಗಿದೆ. ಸಾರ್ವಜನಿಕರಿಂದ ದೂರು ಬಂದಿದ್ದ ಪ್ರಕರಣಗಳ ಪೈಕಿ 60 ಕಾರ್ಡ್‌ಗಳನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾಯಿಸಲಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಇತರ ವಸ್ತುಗಳನ್ನು ಖರೀದಿಸಬೇಕೆಂಬ ಒತ್ತಾಯಪೂರ್ವಕ ಪ್ರಕರಣಗಳು ದಾಖಲಾಗಿಲ್ಲ. ತೂಕ ಮತ್ತು ಅಳತೆಯಲ್ಲಿ ನಿಖರತೆ ಮತ್ತು ಪಾರದರ್ಶಕತೆ ಅನುಸರಿಸಲಾಗಿದೆ ಎಂದರು.

    ಸ್ವಚ್ಛತೆ ಕಾಪಾಡಿ“: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸುಪರ್ದಿಯಲ್ಲಿರುವ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ತಾವು ಭೇಟಿ ನೀಡಿದ್ದ ಸಂದರ್ಭದಲ್ಲಿ ಶುಚಿತ್ವದ ಕೊರತೆ ಎದ್ದು ಕಂಡಿತು. ವಿದ್ಯಾರ್ಥಿಗಳಿಗೆ ಉಣಬಡಿಡುವ ಅನ್ನ ಮುದ್ದೆಯಂತಾಗಿತ್ತು. ಅಲ್ಲಿನ ವಾರ್ಡನ್ ಏನು ಮಾಡುತ್ತಿದ್ದಾರೆ ಎಂದು ಆಡಳಿತಾಧಿಕಾರಿ ನಂದ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜು ಅವರನ್ನು ಪ್ರಶ್ನಿಸಿದರು.

    ಶುಚಿತ್ವ ಕಾಯ್ದುಕೊಳ್ಳಬೇಕಲ್ವೇನ್ರೀ? : ಭೇಟಿ ವೇಳೆ ವಾರ್ಡ್‌ನ್ ಇರಲಿಲ್ಲ. ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದರು. ಅದಕ್ಕುತ್ತರಿಸಿದ ಸಹಾಯಕ ನಿರ್ದೇಶಕರು, ತಾಲೂಕಿನಲ್ಲಿ ವಾರ್ಡ್‌ನ್‌ಗಳ ಕೊರತೆಯಿದ್ದು, ಒಬ್ಬೊಬ್ಬ ವಾರ್ಡನ್‌ಗೆ 2-3 ಹಾಸ್ಟೆಲ್‌ಗಳ ಉಸ್ತುವಾರಿಯನ್ನು ನೀಡಲಾಗಿದೆ. ಶುಚಿತ್ವದ ಕುರಿತು ಮತ್ತು ಸಮರ್ಪಕ ಆಹಾರ ವಿತರಣೆ ಕುರಿತು ವಾರ್ಡನ್‌ಗಳಿಗೆ ಸೂಚಿಸುವುದಾಗಿ ತಿಳಿಸಿದರು.

    ಆಸ್ಪತ್ರೆ ಕಟ್ಟಡ ಕಾಮಗಾರಿ ನಿಧಾನಗತಿ: ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ಮಾತನಾಡಿ, 25 ಕೋಟಿ ರೂ.ವೆಚ್ಚದಡಿ ನಗರದ ಬೈಪಾಸ್ ರಸ್ತೆಯಲ್ಲಿ ನಿರ್ಮಾಣಹಂತದಲ್ಲಿರುವ ಸಾರ್ವಜನಿಕ ಆಸ್ಪತ್ರೆಯ ಕಾಮಗಾರಿಗೆ ಈವರಗೆ 18 ಕೋಟಿ ರೂ.ಗಳ ಅನುದಾನ ದೊರಕಿದೆ. ಮಿಕ್ಕ ಅನುದಾನದ ನಿರೀಕ್ಷೆಯಲ್ಲಿದ್ದು, ಕಾಮಗಾರಿ ಸ್ವಲ್ಪ ಪ್ರಮಾಣದಲ್ಲಿ ವಿಳಂಬವಾಗಿದೆ. ಈ ತಿಂಗಳಾಂತ್ಯಕ್ಕೆ ಆರೋಗ್ಯ ಮಂತ್ರಿಗಳ ಭೇಟಿ ಇದ್ದು, ಅನುದಾನ ಶೀಘ್ರ ದೊರೆತಲ್ಲಿ ತಿಂಗಳೊಳಗೆ ಆಸ್ಪತ್ರೆಯನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು. ತಾಲೂಕಿನಲ್ಲಿ ಡೆಂಘೆ, ಚಿಕೂನ್‌ಗುನ್ಯ ದಂತಹ ಪ್ರಕರಣಗಳು ಅಲ್ಲಲ್ಲಿ ಕಾಣಸಿಗುತ್ತಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ. ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದರು.

    ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ: ಸಾಮಾನ್ಯ ಸಭೆಗೆ ಕಡಿಮೆ ಸಂಖ್ಯೆಯಲ್ಲಿ ಅಧಿಕಾರಿಗಳು ಆಗಮಿಸಿದ್ದ ಕಾರಣ ಕೆರಳಿದ ಆಡಳಿತಾಧಿಕಾರಿ ಸಂಬಂಧಪಟ್ಟ ತಾ.ಪಂ.ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಕಳೆದ ಸಭೆಯಲ್ಲಿ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಿರೆಂದು ಸೂಚಿಸಿದ್ದೆ. ನೀವ್ಯಾಕೆ ನೋಟೀಸ್ ಜಾರಿಗೊಳಿಸಿಲ್ಲ. ನಾನು ಹೇಳಿದ್ದನ್ನು ಮಾಡಿ. ಈ ಬಾರಿ ಗೈರಾದವರಿಗೆ ನಾಳೆಯೊಳಗೆ ನೋಟಿಸ್ ಜಾರಿಯಾಗಬೇಕು ಎಂದು ತಾಕೀತು ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts