More

    ಯುವತಿಯ ಫೋನ್​ಕಾಲ್ ಮಾಡಿಸೀತೆ ಕೊಲೆ?

    ಹಾನಗಲ್ಲ : ಆತ ಕುಟುಂಬದ ಆಧಾರಸ್ತಂಭವಾಗಿದ್ದ. ಮೊಬೈಲ್​ಫೋನ್ ತರುತ್ತೇನೆ ಎಂದು ಹೋದವನು ವಾಪಸ್ ಸಿಕ್ಕಿದ್ದು ಶವವಾಗಿ. ಮಗನ ಕೊಲೆಗೈದ ಹಂತಕರನ್ನು ಬಂಧಿಸುವಂತೆ ತಿಂಗಳಿಂದ ಪೊಲೀಸ್ ಠಾಣೆಗೆ ಅಲೆದಾಡುತ್ತಿರುವ ತಾಯಿ. ಇಷ್ಟಕ್ಕೆಲ್ಲ ಕಾರಣ ಆತನ ಮೊಬೈಲ್​ಫೋನ್​ಗೆ ಬರುತ್ತಿದ್ದ ಯುವತಿಯ ಫೋನ್ ಕಾಲ್…!

    ತಾಲೂಕಿನ ಹುಣಸಿಕಟ್ಟೆ ಗ್ರಾಮದ ಅಣ್ಣಪ್ಪ ಶಿವಪ್ಪ ಕಲ್ಲಾಪುರ (23) ಎಂಬಾತನನ್ನು ಫೆ. 21ರಂದು ಯಾರೋ ಅಪರಿಚಿತರು ಕೊಲೆ ಮಾಡಿ ಕೈ, ಕಾಲು ಕಟ್ಟಿ ಬೆಳವತ್ತಿ ಕೆರೆಯಲ್ಲಿ ಎಸೆದು ಹೋದ ಘಟನೆ ನಡೆದಿತ್ತು. ಹಂತಕರನ್ನು ಬಂಧಿಸಿ ನಮಗೆ ನ್ಯಾಯ ಒದಗಿಸಿಕೊಡಿ ಎಂದು ಮೃತನ ಕುಟುಂಬಸ್ಥರು ನಿತ್ಯವೂ ಹಾನಗಲ್ಲ ಪೊಲೀಸ್ ಠಾಣೆ, ಹಾವೇರಿ ಎಸ್​ಪಿ ಕಚೇರಿ, ಶಿಗ್ಗಾಂವಿ ಡಿವೈಎಸ್​ಪಿ ಕಚೇರಿಗೆತಿಂಗಳಿಂದ ಅಲೆದಾಡುತ್ತಿದ್ದಾರೆ. ಆದರೆ, ಪೊಲೀಸರು ಇಂದಿಗೂ ತನಿಖೆ ನಡೆಯುತ್ತಿದೆ ಎನ್ನುತ್ತಿರುವುದು ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

    ಫೋನ್ ಕಾಲ್ ಮಾಡಿಸಿತೇ ಕೊಲೆ? : ಅಣ್ಣಪ್ಪ ಟೈಲ್ಸ್ ಕೆಲಸ ಮಾಡಿಕೊಂಡಿದ್ದ. ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ನಿತ್ಯವೂ ಆಕೆ ಅಣ್ಣಪ್ಪನಿಗೆ ಕರೆ ಮಾಡಿ ಮಾತನಾಡುತ್ತಿದ್ದಳಂತೆ. ಯುವತಿಯ ಕುಟುಂಬಸ್ಥರಿಗೆ ಪ್ರೀತಿಯ ವಿಚಾರ ತಿಳಿದು ಆಕೆಗೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಹುಡುಗನೊಂದಿಗೆ ಫೆ. 5ರಂದು ಮದುವೆ ಮಾಡಿಸಿದ್ದರು. ಆದರೆ, ಯುವತಿ ಮಾತ್ರ ಅಣ್ಣಪ್ಪನಿಗೆ ಕಾಲ್ ಮಾಡುವುದನ್ನು ಬಿಟ್ಟಿರಲಿಲ್ಲ. ಪತಿಯ ಮೊಬೈಲ್​ಫೋನ್​ನಿಂದಲೇ ನಾಲ್ಕೈದು ಬಾರಿ ಕಾಲ್ ಮಾಡಿದ್ದಳಂತೆ.

    ಪತ್ನಿ ಕಾಲ್ ಮಾಡುವುದು ಪತಿಗೆ ತಿಳಿದು, ಆಕೆಯ ತಂದೆ, ತಾಯಿಗೆ ವಿಷಯ ತಿಳಿಸಿದ್ದಾನೆ. ಫೆ. 13ರಂದು ಯುವತಿಯ ಕುಟುಂಬಸ್ಥರು ಆಕೆಗೆ ಬುದ್ಧಿವಾದ ಹೇಳಿ, ಪಂಚಾಯಿತಿ ಮಾಡಿದ್ದರು. ಅದೇ ದಿನ ಯುವತಿಯ ಅಣ್ಣ, ಅಣ್ಣಪ್ಪನನ್ನು ಕರೆದುಕೊಂಡು ಯಲ್ಲಾಪುರಕ್ಕೆ ಹೊರಟ್ಟಿದ್ದನು. ದಾರಿ ಮಧ್ಯೆ ಅಣ್ಣಪ್ಪನ ಸಂಬಂಧಿ ಮಂಜುನಾಥ ಎಂಬಾತ ‘ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ’ ಎಂದಾಗ, ಯಲ್ಲಾಪುರಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ತಿಳಿಸಿದ್ದನಂತೆ.

    ಫೆ. 21ರಂದು ಅಣ್ಣಪ್ಪ ತನ್ನ ಮೊಬೈಲ್​ಫೋನ್​ನಲ್ಲಿನ ಸಿಮ್ ತೆಗೆದು ಸಹೋದರನಿಗೆ ಹೊಸ ಫೋನ್ ತೆಗೆದುಕೊಳ್ಳುವುದಾಗಿ ಮನೆಯಿಂದ ಹೋದವನು ಬರಲೇ ಇಲ್ಲ. ಫೆ. 23ರಂದು ‘ನಿಮ್ಮ ಮಗ ಕೆರೆಯಲ್ಲಿ ಸತ್ತು ಬಿದ್ದಿದ್ದಾನೆ’ ಎಂಬ ಸುದ್ದಿ ಬಂತು. ಕೆರೆಯ ಪಕ್ಕದಲ್ಲಿ ಆತನ ಬೈಕ್ ಇತ್ತು. ಶವ ಕೆರೆಯಲ್ಲಿ ತೇಲಾಡುತ್ತಿತ್ತು. ಕೈ, ಕಾಲುಗಳು ಹಗ್ಗದಿಂದ ಕಟ್ಟಿದ್ದವು. ಆದ್ದರಿಂದ ಅಣ್ಣಪ್ಪನನ್ನು ಯುವತಿಯ ಕಡೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತನ ಸಹೋದರ ಪ್ರಶಾಂತ ಕಲ್ಲಾಪುರ, ತಾಯಿ ಚನ್ನವ್ವ ಹಾಗೂ ಕುಟುಂಬಸ್ಥರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

    ಆಧಾರಸ್ತಂಭವಾಗಿದ್ದ ಅಣ್ಣಪ್ಪ: ಅಣ್ಣಪ್ಪ ತಂದೆ, ತಾಯಿಗೆ ಮೊದಲನೇ ಮಗ. ಇನ್ನೊಬ್ಬ ಬಿಎ ಓದುತ್ತಿದ್ದಾನೆ. ತಂದೆ ಮಾನಸಿಕ ಅಸ್ವಸ್ಥ, ತಾಯಿ ಕೂಲಿ ಕೆಲಸ ಮಾಡುತ್ತಿದ್ದಾಳೆ. ಅಣ್ಣಪ್ಪ ದುಡಿಯಲು ಆರಂಭಿಸಿದ ಬಳಿಕ ತಾಯಿಗೆ ಕೆಲಸ ಬಿಡಿಸಿ ಮನೆ ನೋಡಿಕೊಳ್ಳಲು ಹೇಳಿದ್ದ. ಈತ ದುಡಿದ ಸಂಬಳದಿಂದಲೇ ಇಡೀ ಕುಟುಂಬ ನಡೆಯುತ್ತಿತ್ತು. ಇದೀಗ ಅಣ್ಣಪ್ಪನನ್ನು ಕಳೆದುಕೊಂಡು ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ.

    ಅಣ್ಣಪ್ಪನ ಕೊಲೆ ಪ್ರಕರಣ ಕುರಿತು ಆತನ ಸಂಬಂಧಿಕರು ದೂರು ನೀಡಿದ್ದಾರೆ. ಪ್ರಕರಣ ಕುರಿತು ತನಿಖೆ ನಡೆದಿದೆ. ಸಿಬ್ಬಂದಿಗೆ ಸೂಚಿಸಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು.

    | ಕೆ.ಜೆ. ದೇವರಾಜ, ಎಸ್ಪಿ ಹಾವೇರಿ

    ಅಣ್ಣಪ್ಪ ತನ್ನ ಪಾಡಿಗೆ ತಾನಿದ್ದ. ಯುವತಿಯೇ ಆತನಿಗೆ ಕಾಲ್ ಮಾಡುತ್ತಿದ್ದಳು. ಆತನ ಕೊಲೆಗೆ ಆಕೆಯ ಕುಟುಂಬದವರೇ ಕಾರಣ. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದೇವೆ. ನಮಗೆ ನ್ಯಾಯ ಒದಗಿಸಿಕೊಡದಿದ್ದರೆ, ಪೊಲೀಸ್ ಠಾಣೆ ಎದುರು ಧರಣಿ ಆರಂಭಿಸುತ್ತೇವೆ.

    | ಮಂಜುನಾಥ, ಅಣ್ಣಪ್ಪನ ಸಂಬಂಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts