More

    ಯುವಜನರಿಗೆ ಬೇಕಿದೆ ಸೂಕ್ತ ಮಾರ್ಗದರ್ಶನ

    ಗಜೇಂದ್ರಗಡ; ಯುವಜನತೆ ದೇಶದ ಬೆನ್ನೆಲುಬು. ಆದರೆ, ಸೂಕ್ತ ಮಾರ್ಗದರ್ಶನ ಕೊರತೆಯಿಂದ ಇಂದು ವಿದ್ಯಾರ್ಥಿಗಳು ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಯುವ ಕೆಲಸ ಆಗಬೇಕಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    ಪಟ್ಟಣದ ಸರ್ಕಾರಿ ಆಸ್ಪತ್ರೆ ಎದುರಿನ ಬಯಲು ಜಾಗೆಯಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ರಾಜ್ಯಮಟ್ಟದ ಯುವಜನ ಮೇಳ 2019-20 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಯುವಜನರಲ್ಲಿ ಅಡಗಿರುವ ಪ್ರತಿಭೆಗೆ ಪ್ರೋತ್ಸಾಹ, ಸೂಕ್ತ ಮಾರ್ಗದರ್ಶನ ಅಗತ್ಯ. ಉತ್ತಮ ಶಿಕ್ಷಣ ಹಾಗೂ ಕೌಶಲ ಪಡೆದು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡುವಂತಾಗಬೇಕು. ಕಲೆ ಸಾಹಿತ್ಯ ಸಂಗೀತ ಕ್ಷೇತ್ರಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರ. ಆಳುವುದು ಬೇರೆ, ಆಡಳಿತ ನಡೆಸುವುದು ಬೇರೆ ಎನ್ನುವ ಸೂಕ್ಷ್ಮ ಮತ್ತು ಮಹತ್ವದ ವಿಷಯಗಳನ್ನ ಇಲ್ಲಿನ ಶಿಲಾ ಶಾಸನಗಳು ಹೇಳಿವೆ ಎಂದರು.

    ಯುವಕರನ್ನು ಉತ್ತಮ ಮಾರ್ಗದಲ್ಲಿ ಕರೆದುಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ಇದೇ ಕಾರಣದಿಂದ ನನ್ನ ಸ್ವಕ್ಷೇತ್ರ ಶಿಗ್ಗಾವಿ-ಸವಣೂರ ವ್ಯಾಪ್ತಿಯ ಎಲ್ಲ ಪ್ರೌಢಶಾಲೆಯಲ್ಲಿ ವ್ಯಕ್ತಿತ್ವ ವಿಕಸನ ಮತ್ತು ವೃತ್ತಿಪರ ಮಾರ್ಗದರ್ಶನ ನೀಡಲಾಗುತ್ತಿದೆ. ಇದರಿಂದ ಅನೇಕ ವಿದ್ಯಾರ್ಥಿಗಳು ಇದರ ಅನುಕೂಲ ಪಡೆದುಕೊಂಡಿದ್ದಾರೆ. ಇಂತಹ ಕಾರ್ಯಾಗಾರಗಳು, ತರಬೇತಿಗಳು ರಾಜ್ಯದ ಎಲ್ಲ ಪ್ರೌಢಶಾಲೆಗಳಲ್ಲಿ ನಡೆದರೆ ಸಮೃದ್ಧ ನಾಡು ಕಟ್ಟಬಹುದು ಎಂದರು. ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಗಜೇಂದ್ರಗಡದಲ್ಲಿ ಎರಡನೇ ಬಾರಿಗೆ ಯುವಜನ ಮೇಳ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಕಲಾವಿದರ ಪ್ರತಿಭೆ ಅನಾವರಣಗೊಳಿಸುವ ವೇದಿಕೆ ಇದಾಗಿದೆ. ಕಲೆ, ಸಾಹಿತ್ಯದಲ್ಲಿ ಯಾವುದೇ ಭೇದಭಾವವಿಲ್ಲ. ಮೇಳದ ಸದುಪಯೋಗವನ್ನು ಸುತ್ತಮುತ್ತಲಿನ ಜನತೆ ಪಡೆದುಕೊಳ್ಳಬೇಕು. ಕಲಿಕೆಯಲ್ಲಿ ಆಸಕ್ತಿಯಿದ್ದರೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂದರು.

    ಶಾಸಕ ಕಳಕಪ್ಪ ಬಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸ್ವಾಗತಿಸಿದರು.

    ಇದೇ ವೇಳೆ ಜಿ.ಪಂ. ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಜಿ.ಪಂ. ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚೂರ, ತಾ.ಪಂ. ಅಧ್ಯಕ್ಷೆ ಪ್ರೇಮವ್ವ ನಾಯಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಕೆ.ಶ್ರೀನಿವಾಸ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಬಿ.ವಿಶ್ವನಾಥ, ಜಿಲ್ಲಾ ಯೋಜನಾ ನಿರ್ದೇಶಕ ಎನ್.ರುದ್ರೇಶ, ಡಾ.ಬಿ.ವಿ. ಕಂಬಳ್ಯಾಳ ಹಾಗೂ ಅಶೋಕ ವನ್ನಾಲ, ಸಿದ್ದಣ್ಣ ಬಳಿಗೇರ, ರವಿ ಬಿದರೂರ, ಬಿ.ಎಂ. ಸಜ್ಜನ, ಮುತ್ತಣ್ಣ ಲಿಂಗನಗೌಡರ, ಮುತ್ತಣ್ಣ ಕಡಗದ, ಭಾಸ್ಕರ ರಾಯಬಾಗಿ, ತಿಮ್ಮಣ್ಣ ವನ್ನಾಲ, ಹೊನ್ನುಸಾ ದಾನಿ, ಅಮರೇಶ ಬಳಿಗೇರ, ಶರಣಪ್ಪ ಚಳಗೇರಿ, ಬಸವರಾಜ ಬಂಕದ, ರವಿ ಕಲಾಲ, ರಾಜೇಂದ್ರ ಘೊರ್ಪಡೆ, ಅಂಬರೀಶ ಅರಳಿ, ಬಾಳು ಗೌಡರ ಇದ್ದರು.

    40 ಲಕ್ಷ ರೂ. ಬಿಡುಗಡೆ

    ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಕಲ್ಪನಾ ಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಲೆಯನ್ನು ಉಳಿಸಿ ಬೆಳೆಸಿ ಪೋಷಿಸುವ ಉದ್ದೇಶವನ್ನು ಯುವಜನ ಮೇಳ ಹೊಂದಿದೆ. ಪುರುಷ, ಮಹಿಳೆ ಎಂಬ ಭೇದಭಾವ ಬಿಟ್ಟು, ಸಮಾಜದ ಶಕ್ತಿಯಾಗಿ ಬೆಳೆಯಬೇಕು. ಮೇಳಕ್ಕೆ 40 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. 15 ಸ್ಪರ್ಧೆಗಳು ನಡೆಯುತ್ತಿದ್ದು, ಎರಡು ಸಾವಿರ ಕಲಾವಿದರು ಭಾಗವಹಿಸಲಿದ್ದಾರೆ ಎಂದರು.

    ಸ್ಪರ್ಧಾಳುಗಳು ಹಾಗೂ ಅತಿಥಿಗಳಿಗೆ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಬೆಳಗ್ಗೆ ಅವಲಕ್ಕಿ, ಟೀ ನೀಡಲಾಯಿತು. ಮಧ್ಯಾಹ್ನ ಚಪಾತಿ, ರೊಟ್ಟಿ, ಬದನೆಕಾಯಿ ಮತ್ತು ಕಾಳು ಪಲ್ಯೆ, ಗೋಧಿ ಹುಗ್ಗಿ, ಅನ್ನ-ಸಾಂಬಾರ, ಹಪ್ಪಳ, ಉಪ್ಪಿನಕಾಯಿ, ಮೊಸರು, ಶೇಂಗಾ ಚಟ್ನಿ ಮಾಡಲಾಗಿತ್ತು. ಸಂಜೆ ಉಪ್ಪಿಟ್ಟು, ಚಹಾ-ಕಾಫಿ ನೀಡಲಾಯಿತು. ರಾತ್ರಿ ಊಟಕ್ಕೆ ಚಪಾತಿ, ರೊಟ್ಟಿ, ಪಲ್ಯೆ, ಚಿಕನ್ ಸಾಂಬಾರ, ಹಪ್ಪಳ, ಉಪ್ಪಿನಕಾಯಿ, ವೆಜಿಟೇಬಲ್ ಕರಿ, ಮೊಸರು ಇತ್ತು.

    ಕೋಟೆನಾಡಿಗೆ ಸಿಂಗಾರ

    ಪಟ್ಟಣದಲ್ಲಿ 2ನೇ ಬಾರಿಗೆ ರಾಜ್ಯಮಟ್ಟದ ಯುವಜನ ಮೇಳ ಏರ್ಪಟ್ಟಿರುವುದು ಗದಗ ಜಿಲ್ಲೆಯ ಕಲಾಭಿಮಾನಿಗಳಲ್ಲಿ ಹಾಗೂ ಸ್ಥಳೀಯ ಜನತೆಯ ಹರ್ಷ ಮುಗಿಲುಮುಟ್ಟಿದೆ. ಕೆ.ಕೆ. ವೃತ್ತ, ಜೋಡುರಸ್ತೆ, ಬಸ್ ನಿಲ್ದಾಣ ರಸ್ತೆಗಳಲ್ಲಿ ಅಳವಡಿಸಿರುವ ಬ್ಯಾನರ್​ಗಳು, ಭಾರಿ ಪ್ರಮಾಣದ ಕಟೌಟ್​ಗಳು, ಕಮಾನುಗಳು, ರಂಗುರಂಗಿನ ವಿದ್ಯುತ್ ದೀಪದ ಅಲಂಕಾರ ಕಲಾಸಕ್ತರನ್ನು ಕೈ ಬೀಸಿ ಕರೆಯುತ್ತಿವೆ. ಪಟ್ಟಣದೆಲ್ಲೆಡೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದ್ದು, ಜನತೆ ಸ್ವಯಂಪ್ರೇರಣೆಯಿಂದ ತಮ್ಮ ತಮ್ಮ ಮನೆ, ಅಂಗಡಿಗಳಿಗೆ ವಿದ್ಯುತ್ ಅಲಂಕಾರ ಮಾಡಿದ್ದಾರೆ.

    ವ್ಯತ್ಯಾಸ ಸರಿಪಡಿಸಿದ್ದೇವೆ

    ಪೊಲೀಸ್ ಇಲಾಖೆ ಹಾಗೂ ಇತರ ಇಲಾಖೆಯ ವೇತನದಲ್ಲಿ ಇದ್ದ ವ್ಯತ್ಯಾಸವನ್ನು ಸರಿಪಡಿಸಿದ್ದೇವೆ. ಕಷ್ಟದಾಯಕ ಭತ್ಯೆ ಸಹ ಹೆಚ್ಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ರಾಜ್ಯಮಟ್ಟದ ಯುವಜನ ಮೇಳದ ಉದ್ಘಾಟನೆಗೂ ಮುನ್ನ ಪೊಲೀಸ್ ಇಲಾಖೆಯಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಇದೇ ವೇಳೇ ಪುಲ್ವಾಮಾ ದಾಳಿಯಿಂದ ಲಾಭವಾಗಿದ್ದು ಯಾರಿಗೆ ಎಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ವಿರುದ್ಧ ಕಿಡಿ ಕಾರಿದರು. ರಾಹುಲ್ ಗಾಂಧಿ ಇದು ನಮ್ಮ ದೇಶದ ಸೈನಿಕರಿಗೆ ಅಪಮಾನ ಮಾಡಿದ್ದಾರೆ. ಅವರಿಗೆ ದೇಶ, ದೇಶಪ್ರೇಮ ಹಾಗೂ ಸೈನಿಕರ ಬಲಿದಾನದ ಕುರಿತು ಕಲ್ಪನೆ ಇಲ್ಲ ಎಂದು ತಿರುಗೇಟು ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts