More

    ಯುಪಿಯಲ್ಲಿ ಸಿಲುಕಿದ ನವೋದಯ ಮಕ್ಕಳು

    ಮಾರ್ಥಂಡ ಜೋಶಿ ಬಸವಕಲ್ಯಾಣ
    ಶೈಕ್ಷಣಿಕ ವ್ಯಾಸಂಗಕ್ಕೆ ಉತ್ತರ ಪ್ರದೇಶಕ್ಕೆ ತೆರಳಿದ ಬಸವಕಲ್ಯಾಣದ ನಾರಾಯಣಪುರ ಜವಾಹರ ನವೋದಯ ವಿದ್ಯಾಲಯ (ಜೆಎನ್ವಿ) 23 ವಿದ್ಯಾರ್ಥಿಗಳು ಹಾಗೂ ಮೂವರು ಶಿಕ್ಷಕರು ಲಾಕ್ಡೌನ್ ಹಿನ್ನೆಲೆಯಲ್ಲಿ ಅಲ್ಲೇ ಸಿಲುಕಿಕೊಂಡಿದ್ದಾರೆ. 41 ದಿನಗಳಿಂದ ಅಲ್ಲಿರುವ ವಿದ್ಯಾರ್ಥಿಗಳನ್ನು ವಾಪಸ್ ಕರೆತರುವ ಪ್ರಯತ್ನ ನಡೆದಿದ್ದು, ಮೂರ್ನಾಲ್ಕು ದಿನದೊಳಗೆ ವಾಪಸಾಗುವ ಸಾಧ್ಯತೆಗಳಿವೆ.
    ಜೆಎನ್ವಿಯ 23 ವಿದ್ಯಾರ್ಥಿಗಳು ಶೈಕ್ಷಣಿಕ ವ್ಯಾಸಂಗಕ್ಕಾಗಿ ಉತ್ತರ ಪ್ರದೇಶದ ಫರಕಾಬಾದ್ನಲ್ಲಿರುವ ಜವಾಹರ ನವೋದಯ ವಿದ್ಯಾಲಯಕ್ಕೆ ತೆರಳಿದ್ದರು. ಶಿಕ್ಷಣ ಪೂರ್ಣಗೊಳಿಸಿ ಮಾರ್ಚ್​ ಅಂತ್ಯದೊಳಗೆ ಇಲ್ಲಿಗೆ ಬರಬೇಕಿತ್ತು. ಆದರೆ ಕರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಜಾರಿಯಾದ ಕಾರಣ ಒಂದೂವರೆ ತಿಂಗಳಿಂದ ಅಲ್ಲಿಯೇ ಪರದಾಡುತ್ತಿದ್ದಾರೆ.
    ಪ್ರತಿವರ್ಷ 9ನೇ ತರಗತಿಯ ಶೇ.30 ವಿದ್ಯಾರ್ಥಿಗಳನ್ನು ಬೇರೆ ರಾಜ್ಯದ ಜೆಎನ್ವಿಗೆ ತೆರಳಿ ಒಂದು ವರ್ಷ ಶಿಕ್ಷಣ ಕೊಡಿಸಲಾಗುತ್ತದೆ. ಇಲ್ಲಿನ 23 ವಿದ್ಯಾರ್ಥಿಗಳು, ಮೂವರು ಶಿಕ್ಷಕರು ಉತ್ತರ ಪ್ರದೇಶದ ಫರಕಾಬಾದ್ಗೆ ತೆರಳಿದ್ದರು. ಇದರಂತೆ ಅಲ್ಲಿನ 23 ವಿದ್ಯಾರ್ಥಿಗಳು ಹಾಗೂ 3 ಶಿಕ್ಷಕರು ನಾರಾಯಣಪುರಕ್ಕೆ ಬಂದಿದ್ದರು. ಒಂದು ವರ್ಷದ ಶಿಕ್ಷಣ ಪೂರ್ಣಗೊಳಿಸಿ ಮಾ.22ಕ್ಕೆ ತವರು ರಾಜ್ಯಕ್ಕೆ ತೆರಳಲು ರೈಲು ಬುಕಿಂಗ್ ಆಗಿತ್ತು. ಆದರೆ ಲಾಕ್ಡೌನ್ ಜಾರಿಯಾದ ಕಾರಣ ಯುಪಿ ವಿದ್ಯಾರ್ಥಿಗಳು ಇಲ್ಲಿ, ಇಲ್ಲಿನ ವಿದ್ಯಾರ್ಥಿಗಳು ಅಲ್ಲಿಯೇ ಸೀಲ್ ಆಗಿಬಿಟ್ಟಿದ್ದಾರೆ.
    ಮಕ್ಕಳನ್ನು ಕರೆತರಲು ವಿದ್ಯಾಲಯವು ಒಂದು ತಿಂಗಳಿಂದ ನಿರಂತರ ಪ್ರಯತ್ನ ನಡೆಸಿದ್ದು, ಇದೀಗ ಅನುಮತಿ ಸಿಕ್ಕಿದೆ. ನಾರಾಯಣಪುರದಲ್ಲಿ ವ್ಯಾಸಂಗ ಮಾಡುತ್ತಿರುವ ಉತ್ತರ ಪ್ರದೇಶದ 23 ವಿದ್ಯಾರ್ಥಿಗಳು ಹಾಗೂ ಮೂವರು ಶಿಕ್ಷಕರನ್ನು ಬಸ್ ಮೂಲಕ ಮಧ್ಯಪ್ರದೇಶದ ಚಿಂತವಾರಾ ವಿದ್ಯಾಲಯಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ. ಯುಪಿಯಲ್ಲಿನ ಜಿಲ್ಲೆಯ ಮಕ್ಕಳು ಸಹ ಚಿಂತವಾರಾ ವಿದ್ಯಾಲಯಕ್ಕೆ ಬರಲಿದ್ದಾರೆ. ಬಳಿಕ ಅಲ್ಲಿಂದ ಇಲ್ಲಿಗೆ ಬರಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದ್ದು, ಪಾಲಕರಲ್ಲಿ ಖುಷಿ ತಂದಿದೆ.

    ವಿದ್ಯಾರ್ಥಿಗಳ ಹಸ್ತಾಂತರ ಮಧ್ಯಪ್ರದೇಶ ಸ್ಥಳ ಆಯ್ಕೆ: ನಾರಾಯಣಪುರದಲ್ಲಿರುವ ಉತ್ತರ ಪ್ರದೇಶ ವಿದ್ಯಾರ್ಥಿಗಳನ್ನು ಕಳುಹಿಸಲು ಹಾಗೂ ಉತ್ತರ ಪ್ರದೇಶದಲ್ಲಿರುವ ನಾರಾಯಣಪುರ ವಿದ್ಯಾಥರ್ಿಗಳನ್ನು ಕರೆತರಲು ಮಧ್ಯಪ್ರದೇಶದ ಚಿಂತವಾರಾ ವಿದ್ಯಾಲಯ ಗುರುತಿಸಲಾಗಿದೆ. ಇಲ್ಲಿಂದ ಉತ್ತರ ಪ್ರದೇಶಕ್ಕೆ ಹೋಗುವುದು ಹಾಗೂ ಅಲ್ಲಿಂದ ಇಲ್ಲಿಗೆ ಬರುವುದು ಕಷ್ಟಸಾಧ್ಯ ಎನಿಸಿದ್ದರಿಂದ ಮಧ್ಯಪ್ರದೇಶದ ಚಿಂತವಾರಾ ವಿದ್ಯಾಲಯ ಆಯ್ಕೆ ಮಾಡಲಾಗಿದೆ. ಎರಡೂ ಕಡೆಯ ವಿದ್ಯಾರ್ಥಿಗಳನ್ನು ಚಿಂತವಾರಾ ವಿದ್ಯಾಲಯಕ್ಕೆ ಕರೆದುಕೊಂಡು ಬಂದ ನಂತರ ಅವರವರ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿದೆ. ಮಂಗಳವಾರ ಮಧ್ಯಾಹ್ನ ನಾರಾಯಣಪುರದಿಂದ ಬಸ್ ಬಿಟ್ಟಿದ್ದು, ಮಹಾರಾಷ್ಟ್ರದ ಮೂಲಕ ಮಧ್ಯಪ್ರದೇಶದ ಚಿಂತವಾರಾಕ್ಕೆ ಬುಧವಾರ ಹೋಗಲಿದೆ. ಗುರುವಾರ ಅಥವಾ ಶುಕ್ರವಾರ ಅಲ್ಲಿನ ವಿದ್ಯಾರ್ಥಿಗಳು ಇಲ್ಲಿಗೆ ಬರುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts