More

    ಯುದ್ಧದ ಭೀಕರತೆ ಕಣ್ಣಾರೆ ಕಂಡೆವು…

    ಬೀದರ್: ಯೂಕ್ರೇನ್​ನಲ್ಲಿ ಯುದ್ಧ ಶುರುವಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ತೀವ್ರ ಭಯವಾಯಿತು. ನಾವಿದ್ದ ಕಡೆ ಗುಂಡಿನ ಸದ್ದು. ಆಹಾರ ಇಲ್ಲದೆ ದಿನ ಕಳೆದೆವು. ತವರಿಗೆ ಬರುವ ಹಂಬಲದಿಂದ ಗುಂಡಿನ ಸದ್ದಿನ ಮಧ್ಯೆ ಹಲವಾರು ಕಿಲೋಮೀಟರ್ ನಡೆದುಕೊಂಡು ಬಂದೆವು. ಕೊನೆಗೂ ಹೆತ್ತವರ ಮಡಿಲು ಸೇರಿದಾಗ ಸಂತಸವಾಯಿತು. ಕೇಂದ್ರ ಸರ್ಕಾರ ಹಾಗೂ ಭಾರತೀಯ ರಾಯಭಾರ ಕಚೇರಿ ನೆರವು ಎಂದಿಗೂ ಮರೆಯಲು ಸಾಧ್ಯವಿಲ್ಲ…

    ಯುದ್ಧ ಭೂಮಿ ಯೂಕ್ರೇನ್​ನಿಂದ ತವರಿಗೆ ಆಗಮಿಸಿದ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು ಹಂಚಿಕೊಂಡ ಅನುಭವ ಇದು. ಯೂಕ್ರೇನ್​ನಿಂದ ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ ಜಿಲ್ಲೆಯ ಶಶಾಂಕ್, ವಿವೇಕ್, ವೈಷ್ಣವಿರಡ್ಡಿ, ಅಮೀತ್ ಸಿರಂಜೆ ಹಾಗೂ ಅವರ ಕುಟುಂಬದವರೊಂದಿಗೆ ಜಿಲ್ಲಾಡಳಿತ ಗುರುವಾರ ಡಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸಂವಾದ ಮತ್ತು ಅನುಭವ ವಿನಿಮಯ ಕಾರ್ಯಕ್ರಮದಲ್ಲಿ ಯುದ್ಧ ಭೂಮಿ ಚಿತ್ರಣವನ್ನು ಬಿಚ್ಚಿಟ್ಟರು.

    ಎಂಬಿಬಿಎಸ್ ಮಾಡುವ ಆಸೆಯಿಂದ ಯೂಕ್ರೇನ್​ಗೆ ಹೋಗಲಾಗಿತ್ತು. ಅಲ್ಲಿ ಯುದ್ಧ ನಡೆಯುತ್ತಿದ್ದಂತೆ ನಮಗೆ ಭಯ ಆವರಿಸಿತು. ಬಾಂಬ್ ಸ್ಫೋಟದಿಂದ ಹೆಣಗಳು ಸಾಲು-ಸಾಲಾಗಿ ಬಿದ್ದಿರುವುದನ್ನು ಕಣ್ಣಾರೆ ಕಂಡೆವು. ಭಾರತಕ್ಕೆ ಹೋಗುವುದು ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಆತಂಕವಾಗಿತ್ತು. ಏಳೆಂಟು ದಿನ ಸ್ನಾನ ಮತ್ತು ಊಟ ಸರಿಯಾಗಿ ಮಾಡಲಾಗಲಿಲ್ಲ ಎಂದು ವಿದ್ಯಾರ್ಥಿಗಳು ಅಲ್ಲಿನ ಸ್ಥಿತಿ ಬಗ್ಗೆ ಹೇಳಿಕೊಂಡರು.

    ವ್ಯಾಸಂಗಕ್ಕೆ ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಯುದ್ಧದಂಥ ಸಂದರ್ಭದಲ್ಲಿ ನಮ್ಮ ಸರ್ಕಾರದಿಂದ ರಕ್ಷಣೆ ಸಿಗುತ್ತದೆ ಎನ್ನುವುದಕ್ಕೆ ಯೂಕ್ರೇನ್ ಘಟನೆಯೇ ಸಾಕ್ಷಿ. ಯುದ್ಧ ಭೂಮಿಯಿಂದ ಗಡಿಗೆ ಬಂದಾಗ ನಮ್ಮ ಮನೆಗೆ ಬಂದೆವು ಎಂಬ ಫೀಲ್ ಬಂದಿತು. ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಭಾರತೀಯ ರಾಯಭಾರ ಕಚೇರಿ ಸಹಕಾರದಿಂದ ತವರಿಗೆ ಬರಲು ಸಾಧ್ಯವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಡಿಸಿ ಗೋವಿಂದರಡ್ಡಿ, ಎಸ್ಪಿ ಕಿಶೋರಬಾಬು, ಜಿಪಂ ಸಿಇಒ ಜಹೀರಾ ನಸೀಮ್, ಅಪರ ಡಿಸಿ ಶಿವಕುಮಾರ ಶೀಲವಂತ, ಎಸಿ ಎಂ.ಡಿ. ನಯೀಮ್ ಮೋಮಿನ್, ತಹಸೀಲ್ದಾರ್ ಅಣ್ಣಾರಾವ ಪಾಟೀಲ್, ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ಸಂದೀಪ ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts