More

    ಯುಡಿಐಡಿ ಕಾರ್ಡ್ ಹಂಚಿಕೆ ವಿಳಂಬ

    ಸುಭಾಸ ಧೂಪದಹೊಂಡ ಕಾರವಾರ

    ಯುಡಿಐಡಿ (ಯುನಿಕ್ ಡಿಸ್​ಎಬಲಿಟಿ ಐಡೆಂಟಿಫಿಕೇಶನ್ – ವಿಶಿಷ್ಟ ಅಂಗವೈಕಲ್ಯ ಗುರುತು) ಕಾರ್ಡ್​ಗಾಗಿ ಅವಸರದಲ್ಲಿ ಅರ್ಜಿ ತುಂಬಿಸಿಕೊಂಡ ಸರ್ಕಾರ ಈಗ ಕಾರ್ಡ್ ನೀಡಲು ವಿಳಂಬ ಮಾಡುತ್ತಿದೆ. ಈ ಕಾರ್ಡ್ ಇಲ್ಲದ್ದರಿಂದ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳಲು ಅಂಗವಿಕಲರು ಪರದಾಡುವಂತಾಗಿದೆ.

    ಜಿಲ್ಲೆಯಲ್ಲಿ ಇದುವರೆಗೆ 15 ಸಾವಿರಕ್ಕೂ ಅಧಿಕ ಅಂಗವಿಕಲರು ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ, ವೈದ್ಯಕೀಯ ಪರೀಕ್ಷೆಗೊಳಪಟ್ಟಿದ್ದಾರೆ. ಇದೆಲ್ಲ ಆಗಿ ಹತ್ತಾರು ತಿಂಗಳಾಗುತ್ತ ಬಂದರೂ ವಿಶೇಷ ಗುರುತಿನ ಚೀಟಿ ದೊರೆತಿಲ್ಲ. ಈ ಕಾರ್ಡ್​ಗಾಗಿ ಅರ್ಜಿ ಸಲ್ಲಿಸುವ ನಿಟ್ಟಿನಲ್ಲಿ ಅಂಗವಿಕಲರ ಪುನರ್ವಸತಿ ಕಾರ್ಯಕರ್ತರು ಸಾಕಷ್ಟು ಶ್ರಮಿಸುತ್ತಿದ್ದರು. ಆದರೆ, ಕಾರ್ಡ್ ಬಾರದ್ದರಿಂದಾಗಿ ಈ ಕಾರ್ಯಕರ್ತರನ್ನೇ ಅಂಗವಿಕಲರು ಅನುಮಾನದಿಂದ ನೋಡುವ ಪರಿಸ್ಥಿತಿ ತಲೆದೋರಿದೆ.

    ಅಂಗವಿಕಲರು ಯಾವುದೇ ಸೌಲಭ್ಯ ಪಡೆಯಲು ವಿಶೇಷ ಗುರುತಿನ ಚೀಟಿಯನ್ನು ಕಡ್ಡಾಯ ಮಾಡಲಾಗುತ್ತದೆ ಎಂದು ಸರ್ಕಾರವೇ ಹೇಳಿದೆ. ಆದರೆ, ಇದುವರೆಗೂ ಕಾರ್ಡ್ ಕೈ ಸೇರದ ಕಾರಣ ತಮಗೆ ಸೌಲಭ್ಯಗಳು ತಪ್ಪಬಹುದು ಎಂಬ ಆತಂಕ ಅಂಗವಿಕಲರನ್ನು ಕಾಡುತ್ತಿದೆ.

    ಎಷ್ಟು ಕಾರ್ಡ್?: ಉತ್ತರ ಕನ್ನಡ ಜಿಲ್ಲೆಯಲ್ಲಿ 2019ರ ಸೆಪ್ಟೆಂಬರ್​ನಿಂದ ಈ ಯುಡಿಐಡಿ ಕಾರ್ಡ್ ನೀಡುವ ಪ್ರಕ್ರಿಯೆ ಆರಂಭಿಸಲಾಗಿತ್ತು. 15000ಕ್ಕೂ ಅಧಿಕ ಅಂಗವಿಕಲರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 8040 ಜನರ ಕಾರ್ಡ್​ನ ಪರಿಶೀಲನೆ ಕಾರ್ಯ ಚಾಲ್ತಿಯಲ್ಲಿದೆ. 7246 ಜನರ ದಾಖಲೆ ಅನುಮೋದನೆಗೊಂಡು ಕಾರ್ಡ್ ಮುದ್ರಣಕ್ಕೆ ಹೋಗಿದೆ ಎಂದು ಆನ್​ಲೈನ್​ನಲ್ಲಿ ಮಾಹಿತಿ ತೋರಿಸುತ್ತದೆ. ಆದರೆ, ಇದುವರೆಗೂ ಅಂಗವಿಕಲರ ಮನೆಗಳಿಗೆ ತಲುಪಿಲ್ಲ.

    ಯಾತನೆ ಅನುಭವಿಸಿದ ಅಂಗವಿಕಲರು: ಇನ್ನು ಅಂಗವಿಲಕರು ಯಾವುದೇ ಯೋಜನೆಯ ಲಾಭ ಪಡೆಯಬೇಕು ಎಂದರೂ ಯುಡಿಐಡಿ ಕಡ್ಡಾಯ ಎಂದು ಸರ್ಕಾರ ಹೇಳಿತ್ತು. ಶೀಘ್ರದಲ್ಲಿ ಎಲ್ಲರಿಗೂ ಕಾರ್ಡ್​ಗಾಗಿ ಅರ್ಜಿ ಹಾಕಿಸಿ, ಆರೋಗ್ಯ ಪರಿಶೀಲನೆ ಮಾಡಿಸುವಂತೆ ಅಂಗವಿಕಲರ ಕಲ್ಯಾಣ ಅಧಿಕಾರಿಗಳು ಒತ್ತಡ ಹೇರಿದ್ದರು. ಮನೆಯಲ್ಲೇ ಸರಿಯಾಗಿ ನಡೆದಾಡಲಾಗದ ದೈಹಿಕ, ಮಾನಸಿಕ ಅಂಗವಿಕಲರನ್ನು ಜಿಲ್ಲೆಯ ಮೂಲೆ ಮೂಲೆಗಳಿಂದ ಹುಡುಕಿ ಕಾರವಾರಕ್ಕೆ ಕರೆತರುವುದು ದೊಡ್ಡ ಸವಾಲೇ ಆಗಿತ್ತು. ಆಸ್ಪತ್ರೆಗೆ ಬಂದ ಅಂಗವಿಕಲರು ಊಟ, ನೀರು ಇಲ್ಲದೆ ದಿನಗಟ್ಟಲೇ ಕಾಯಬೇಕಾಯಿತು. ಒಮ್ಮೆಯಂತೂ ಒಂದೇ ದಿನ ಸಾವಿರಾರು ಅಂಗವಿಕಲರು ಕ್ರಿಮ್್ಸ ಆಸ್ಪತ್ರೆಗೆ ಪರಿಶೀಲನೆಗೆ ಬಂದಿದ್ದರಿಂದ ಇಲ್ಲಿ ಮೂಲ ಸೌಕರ್ಯವಿಲ್ಲದೆ ನರಕ ಯಾತನೆ ಅನುಭವಿಸಬೇಕಾಯಿತು. ನಂತರ ಕೆಲ ಅಂಗವಿಕಲರಿಗೆ ತಾಲೂಕು ಆಸ್ಪತ್ರೆಗಳಲ್ಲಿ ಪರಿಶೀಲನೆಗೆ ಅವಕಾಶ ಮಾಡಿಕೊಟ್ಟರೂ ಆರೋಗ್ಯ ಪರಿಶೀಲನಾ ಕಾರ್ಯ ಸುಲಭವಾಗೇನೂ ಇರಲಿಲ್ಲ. ಎಲ್ಲ ಕಷ್ಟಗಳ ನಡುವೆ ಜಿಲ್ಲೆಯ ಶೇ. 80 ರಷ್ಟು ಅಂಗವಿಕಲರ ದಾಖಲೆ ಸಲ್ಲಿಸಲಾಗಿದೆ ಎನ್ನುತ್ತಾರೆ ಅಂಗವಿಕಲರ ಪುನರ್ವಸತಿ ಕಾರ್ಯಕರ್ತರು.

    ಏನಿದು ಯೋಜನೆ: ಅಂಗವಿಕಲರಿಗೆ ಸೌಲಭ್ಯ ಕಲ್ಪಿಸಲು ಇಡೀ ದೇಶಕ್ಕೆ ಅನ್ವಯ ಆಗುವಂಥಹ ಯುನಿಕ್ ಡಿಸ್​ಎಬಿಲಿಟಿ ಐಡಿ (ಯುಡಿಐಡಿ) ಕಾರ್ಡ್ ಯೋಜನೆಯನ್ನು ಕೇಂದ್ರ ಸರ್ಕಾರ 2018ರಲ್ಲಿ ಜಾರಿಗೆ ತಂದಿದೆ. ಅಂಗವಿಕಲರು ವಿವಿಧ ಸೌಲಭ್ಯಗಳಿಗಾಗಿ ವಿವಿಧ ದಾಖಲೆ ಹೊಂದುವ ಬದಲು ಈ ಕಾರ್ಡ್ ಒಂದಿದ್ದರೆ ಸಾಕು ಎಂದು ಸರ್ಕಾರ ತಿಳಿಸಿದೆ. ಈ ಕಾರ್ಡ್ ಪಡೆಯಲು ಅಂಗವಿಕಲರು ಕೇಂದ್ರ ಸರ್ಕಾರದ ಆನ್​ಲೈನ್ ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಸಿ ನಂತರ ಸಂಬಂಧಪಟ್ಟ ತಜ್ಞ ವೈದ್ಯರಿಂದ ಅಂಗವಿಕಲತೆಯ ಬಗ್ಗೆ ಪರಿಶೀಲನೆ ಮಾಡಿಸಿಕೊಳ್ಳಬೇಕು. ನಂತರ ಅವರವರ ಮನೆಗೇ ಕಾರ್ಡ್ ತಲುಪಲಿದೆ. ಅಂಗವಿಕಲರು ಆನ್​ಲೈನ್ ಅರ್ಜಿ ಸಲ್ಲಿಸಲು ಮತ್ತು ವೈದ್ಯಕೀಯ ತಪಾಸಣೆಗೆ ಬರಲು ವಿಲೇಜ್ ರಿಹ್ಯಾಬಿಲಿಟೇಶನ್ ವರ್ಕರ್, (ವಿಆರ್​ಡಬ್ಲ್ಯು), ಅರ್ಬನ್ ರಿಹ್ಯಾಬಿಲಿಟೇಶನ್ ವರ್ಕರ್ಸ್ (ಯುಆರ್​ಡಬ್ಲ್ಯು) ಮಲ್ಟಿಪರ್ಪಸ್ ರಿ ಹ್ಯಾಬಿಲಿಟೇಶನ್ ವರ್ಕರ್ಸ್ (ಎಂಆರ್​ಡಬ್ಲ್ಯು) ಸಹಕಾರ ಪಡೆಯಲಾಗಿತ್ತು.

    2019ರಲ್ಲಿ ಸಾಕಷ್ಟು ಕಷ್ಟಪಟ್ಟು ನಾವು ಅಂಗವಿಕಲರಿಂದ ಅರ್ಜಿ ಹಾಕಿಸಿ, ಆರೋಗ್ಯ ಪರಿಶೀಲನೆ ಮಾಡಿಸಿದ್ದೇವೆ. ಆದರೆ, ಕೆಲವರ ಐಡಿ ಕಾರ್ಡ್​ಗೆ ಇನ್ನು ಜಿಲ್ಲೆಯಿಂದಲೇ ಹೋಗಿಲ್ಲ. ಇನ್ನು ಕೆಲವರ ದಾಖಲೆ ಜಿಲ್ಲೆಯಿಂದ ರವಾನೆಯಾಗಿದ್ದರೂ ಕಾರ್ಡ್ ಮುದ್ರಣವಾಗಿಯೂ ಬಂದಿಲ್ಲ. ಅರ್ಜಿ ಸಲ್ಲಿಸಿದವರು ನಮ್ಮನ್ನು ಕೇಳುತ್ತಿದ್ದಾರೆ. — ಗಣೇಶ ಹೆಗಡೆ ಸಿಐಟಿಯು ಸಂಯೋಜಿತ ವಿಆರ್​ಡಬ್ಲ್ಯು ಹಾಗೂ ಎಂಆರ್​ಡಬ್ಲ್ಯು ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ

    ಯುಡಿಐಡಿ ಕಾರ್ಡ್​ಗಾಗಿ ಸಲ್ಲಿಸಿದ ವಿವರಗಳನ್ನು ಆನ್​ಲೈನ್​ನಲ್ಲಿ ಅಪ್​ಡೇಟ್ ಮಾಡಲಾಗಿದೆ. ಕಾರ್ಡ್ ಏಕೆ ಬಂದಿಲ್ಲ ಎಂಬ ಬಗ್ಗೆ ಮಾಹಿತಿ ಇಲ್ಲ. — ಅರುಣ ನಾಯ್ಕ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ (ಪ್ರಭಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts