More

    ಯಾರ ಬಣಕ್ಕೆ ಅಧಿಕಾರ ಗದ್ದುಗೆ?

    ಹಿರೇಕೆರೂರ: ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಘೊಷಣೆಯಾಗಿದ್ದು, ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.

    ಒಟ್ಟು 20 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ ಈ ಮೊದಲು ಕಾಂಗ್ರೆಸ್ 8 ಸದಸ್ಯ ಬಲ ಹೊಂದಿತ್ತು. ಆದರೆ, 1ನೇ ವಾರ್ಡ್ ಸದಸ್ಯ ಅಶೋಕ ಜಾಡಬಂದಿ ನಿಧನರಾಗಿದ್ದರಿಂದ ಕಾಂಗ್ರೆಸ್ ಬಲ 7ಕ್ಕೆ ಕುಸಿದಿತ್ತು. ಬಿಜೆಪಿ 7, ಜೆಡಿಎಸ್ 1, ನಾಲ್ವರು ಪಕ್ಷೇತರರಿದ್ದರು. ಇನ್ನು ಬದಲಾದ ರಾಜಕೀಯ ಸನ್ನಿವೇಶದಿಂದ ಕಾಂಗ್ರೆಸ್​ನ ಬಿ.ಸಿ. ಪಾಟೀಲರು ಬಿಜೆಪಿ ಸೇರಿದ್ದರಿಂದ ಕಾಂಗ್ರೆಸ್ ಬೆಂಬಲಿತ 7 ಸದಸ್ಯರು ಬಿಜೆಪಿ ಸೇರ್ಪಡೆಗೊಂಡರು. ಇನ್ನು ಪಕ್ಷೇತರ ಸದಸ್ಯರಾದ ಹರೀಶ ಕಲಾಲ್, ರಾಜು ಕರಡಿ ಕೂಡ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದು, ಬಿಜೆಪಿ ಒಟ್ಟು 16 ಸದಸ್ಯ ಬಲ ಹೊಂದಿದಂತಾಗಿದೆ. ಹೀಗಾಗಿ ಬಿಜೆಪಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ನಿಶ್ಚಿತವಾದಂತಾಗಿದೆ.

    ದೊಡ್ಡದಿದೆ ಆಕಾಂಕ್ಷಿಗಳ ಪಟ್ಟಿ: ಬಿಜೆಪಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಅಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಇದು ಕೃಷಿ ಸಚಿವ ಬಿ.ಸಿ. ಪಾಟೀಲ ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ತಮಗೇ ಅವಕಾಶ ನೀಡುವಂತೆ ಹಲವು ಸದಸ್ಯರು ಮುಖಂಡರ ಮೇಲೆ ಒತ್ತಡ ಹಾಕುತ್ತಿದ್ದಾರೆ.

    ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಆರಿಸಿಬಂದ 2ನೇ ವಾರ್ಡ್​ನ ಮಹೇಂದ್ರ ಬಡಳ್ಳಿ, 9ನೇ ವಾರ್ಡ್​ನ ಕಂಠಾಧರ ಅಂಗಡಿ ಹಾಗೂ ಕಾಂಗ್ರೆಸ್​ನಿಂದ ಆರಿಸಿಬಂದಿದ್ದ 16ನೇ ವಾರ್ಡ್​ನ ಗುರುಶಾಂತ ಯತ್ತಿನಹಳ್ಳಿ ಅವರ ಹೆಸರು ಬಲವಾಗಿ ಕೇಳಿಬರುತ್ತಿವೆ. ಇನ್ನೂ ಹಲವರು ಅಧ್ಯಕ್ಷ- ಉಪಾಧ್ಯಕ್ಷ ಗಾದಿಗೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.

    ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಆರಿಸಿಬಂದ ಸುಧಾ ಚಿಂದಿ, ಪೂಜಾ ತಂಬಾಕದ, ಚಂದ್ರಕಲಾ ಕೋರಿಗೌಡ್ರ, ವಿಜಯಶ್ರೀ ಬಂಗೇರ, ಕವಿತಾ ಹಾರ್ನಳ್ಳಿ ಹಾಗೂ ಕಾಂಗ್ರೆಸ್​ನಿಂದ ಜಯಿಸಿದ ಕುಸುಮಾ ಬಣಕಾರ, ರಜಿಯಾ ಅಸದಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

    ಇಬ್ಬರು ಪ್ರಬಲ ನಾಯಕರು ಒಂದಾಗಿರುವುದರಿಂದ ಕ್ಷೇತ್ರದಲ್ಲಿ ಯಾರ ಬೆಂಬಲಿಗರಿಗೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ದೊರೆಯಲಿದೆ ಎಂಬುದು ಕುತೂಹಲ ಮೂಡಿಸಿದೆ. ಇಬ್ಬರು ನಾಯಕರು ಯಾವ ರೀತಿ ಸ್ಥಾನಗಳನ್ನು ಹಂಚಿಕೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

    ನಾನು ಪಪಂ ಅಧ್ಯಕ್ಷ ಸ್ಥಾನದ ಪ್ರಬಲ ಅಕಾಂಕ್ಷಿಯಾಗಿದ್ದೇನೆ. ರಾಜಕೀಯವಾಗಿ ಸಾಕಷ್ಟು ಅನುಭವ ಹೊಂದಿದ್ದು, ಸಾಮಾಜಿಕವಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. 3 ಬಾರಿ ಸದಸ್ಯ ಸ್ಥಾನವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ. ಸಚಿವ ಬಿ.ಸಿ. ಪಾಟೀಲ ಹಾಗೂ ಯು.ಬಿ. ಬಣಕಾರ ಅವರು ನನಗೆ ಅಧ್ಯಕ್ಷ ಸ್ಥಾನ ನೀಡುವ ಸ್ಪಷ್ಟ ಭರವಸೆ ಇದೆ.
    | ಗುರುಶಾಂತ ಯತ್ತಿನಹಳ್ಳಿ ಪಪಂ ಸದಸ್ಯ

    ಈ ಹಿಂದೆ ತಾಪಂ, ಪಪಂ ಉಪಾಧ್ಯಕ್ಷನಾಗಿ, ಪಪಂ ಅಧ್ಯಕ್ಷನಾಗಿ, ಕಸಾಪ ಕಾರ್ಯಾಧ್ಯಕ್ಷನಾಗಿ ಅನೇಕ ಜನಪರ, ರೈತ ಪರ ಹೋರಾಟಗಳನ್ನು ಮಾಡುತ್ತ ಬಂದಿದ್ದೇನೆ. ರಾಜಕೀಯವಾಗಿ ಸಾಕಷ್ಟು ಅನುಭವ ಇದ್ದು, ಪಟ್ಟಣವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಮಹದಾಸೆಯಿದೆ. ಇಬ್ಬರು ನಾಯಕರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ನನಗೆ ಅಧ್ಯಕ್ಷ ಸ್ಥಾನ ನೀಡಿದರೆ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ.
    | ಮಹೇಂದ್ರ ಬಡಳ್ಳಿ ಪಪಂ ಸದಸ್ಯ

    ನಾನು ವರ್ತಕರ ಸಂಘದ ಅಧ್ಯಕ್ಷನಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತ ಬಂದಿದ್ದೇನೆ. ಇದು ನಮ್ಮ ನಾಯಕರಿಗೆ ಹಾಗೂ ಜನತೆಗೆ ಗೊತ್ತಿರುವ ಸಂಗತಿ. ನನಗೆ ಅವಕಾಶ ನೀಡಿದರೆ ಪಪಂ ಆಡಳಿತದಲ್ಲಿ ಬದಲಾವಣೆ ತಂದು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಇಚ್ಛಾಶಕ್ತಿ ಹೊಂದಿದ್ದೇನೆ.
    | ಕಂಠಾಧರ ಅಂಗಡಿ ಪಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts