More

    ಯಮನೂರ ಚಾಂಗದೇವರ ಜಾತ್ರೆ ರದ್ದು

    ನವಲಗುಂದ: ಕರೊನಾ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಯಮನೂರ ಚಾಂಗದೇವರ ಜಾತ್ರೆ ರದ್ದುಗೊಳಿಸಲಾಗಿದೆ ಎಂದು ತಹಸೀಲ್ದಾರ್ ನವೀನ ಹುಲ್ಲೂರ ಹೇಳಿದರು.

    ಜಿಲ್ಲಾಡಳಿತ ಆದೇಶದಂತೆ ಕರೊನಾ ತಡೆಗಾಗಿ ಮುನ್ನೆಚ್ಚರಿಕೆ ಕ್ರಮ ಹಾಗೂ ಜಾಗೃತಿಗಾಗಿ ತಾಲೂಕಿನ ಯಮನೂರ ಗ್ರಾಪಂನಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

    ತಾಲೂಕಾಡಳಿತ, ತಾಪಂ, ಗ್ರಾಪಂ, ಆರೋಗ್ಯ, ಪೊಲೀಸ್ ಇಲಾಖೆ, ಚಾಂಗದೇವರ ಅರ್ಚಕರೊಂದಿಗೆ ಗ್ರಾಮದಲ್ಲಿ ಸಂಚರಿಸಿ ಗ್ರಾಮಸ್ಥರು, ಭಕ್ತರು, ವ್ಯಾಪಾರಸ್ಥರಲ್ಲಿ ಜಾಗೃತಿ ಮೂಡಿಸಿದರು.

    ರೋಗ ನಿಯಂತ್ರಣಕ್ಕೆ ಬರುವವರೆಗೆ ಭಕ್ತರು ಚಾಂಗದೇವರ ದರ್ಶನಕ್ಕೆ ಬರಬಾರದು. ರೋಗ ತಡೆಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಗ್ರಾಮದಲ್ಲಿ ಕೋಳಿ, ಮೇಕೆ ಬಲಿ ನಿಷೇಧಿಸಿದ್ದು, ತ್ಯಾಜ್ಯ ಸಂಗ್ರಹವಾಗದಂತೆ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ಕುಡಿಯುವ ನೀರಿನ ಕೆರೆಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಗಿದೆ. ಶುದ್ಧ ಕುಡಿಯುವ ನೀರು ಪೂರೈಕೆ, ರಸ್ತೆ, ಬೀದಿಗಳಲ್ಲಿ ಧೂಳು ಏಳದಂತೆ ನೀರು ಚಿಮುಕಿಸಲಾಗುತ್ತಿದೆ. ಜಾತ್ರೆಯಲ್ಲಿ ಟೆಂಟ್ ಹಾಕಿದ ಬೀದಿ, ಬದಿಯ ವ್ಯಾಪಾರಸ್ಥರು, ಅಂಗಡಿಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ, ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ನಾಲ್ಕೈದು ಜನರು ಗುಂಪಾಗಿ ನಿಲ್ಲಬೇಡಿ ಎಂದು ಮೈಕ್ ಮೂಲಕ ತಿಳಿಹೇಳಿದರು.

    ಪ್ರಭಾರಿ ತಾಲೂಕು ಆರೋಗ್ಯ ಅಧಿಕಾರಿ ಡಾ. ಎಸ್.ಎಂ. ಹೊನಕೇರಿ ಮಾತನಾಡಿ, ಕರೊನಾ ತಡೆಗಾಗಿ ದಿನಕ್ಕೆ ನಾಲ್ಕೈದು ಬಾರಿ ಸಾಬೂನು ಹಚ್ಚಿ ಕೈತೊಳೆದುಕೊಳ್ಳಬೇಕು. ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು. ಕೆಮ್ಮು, ಶೀತ, ಉಸಿರಾಟ ತೊಂದರೆಯುಳ್ಳ ವ್ಯಕ್ತಿಗಳಿಂದ ದೂರವಿರಬೇಕು. ಸುತ್ತಲಿನ ಪರಿಸರ ಸ್ವಚ್ಛವಾಗಿಡಬೇಕು. ಹಣ್ಣು, ತರಕಾರಿ, ಸೊಪ್ಪಿನ ಪದಾರ್ಥಗಳನ್ನು ತಿನ್ನಬೇಕು. ತಂಪು ಪಾನೀಯ ಸೇವಿಸಬಾರದು. ಗಂಟಲು ಒಣಗದಂತೆ ನೋಡಿಕೊಳ್ಳಬೇಕು. ಜಾತ್ರೆ, ಮದುವೆ, ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳಬಾರದು ಎಂದರು. ತಾಪಂ ಇಒ ಪವಿತ್ರಾ ಪಾಟೀಲ, ಪಿಎಸ್​ಐ ಜಯಪಾಲ ಪಾಟೀಲ, ಗ್ರಾಪಂ ಸದಸ್ಯರು, ಅಧಿಕಾರಿಗಳು, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts