More

    ಮೋದಿ, ಷಾ ಸರಿಸಮ ನಾಯಕರಿದ್ದಾರೆಯೇ?

    ಹುಣಸಗಿ(ಯಾದಗಿರಿ): ವೀರಶೈವ ಲಿಂಗಾಯತ ಸಮಾಜಕ್ಕೆ ಅನ್ಯಾಯ ಮಾಡಿದ ಕಾಂಗ್ರೆಸ್‌ಗೆ ಜನತೆ ಯಾವ ಕಾರಣಕ್ಕೂ ಅಧಿಕಾರಕ್ಕೆ ತರದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದರು.

    ಸುರಪುರ ತಾಲೂಕಿನ ಹುಣಸಗಿಯಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ (ರಾಜುಗೌಡ) ಪರ ಭರ್ಜರಿ ರೋಡ್ ಶೋ ನಡೆಸಿ ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೆ ಸಿಎಂ ಆಗಿದ್ದ ದಿ.ವೀರೇಂದ್ರ ಪಾಟೀಲ್ ಅವರನ್ನು ರಾಜೀವ್ ಗಾಂಧಿ ವಿಮಾನ ನಿಲ್ದಾಣಕ್ಕೆ ಕರೆದು ರಾಜೀನಾಮೆ ಪಡೆದಿದ್ದರು. ಆ ಸಂದರ್ಭದಲ್ಲಿ ನಾನು ಪಾಟೀಲರ ಮನೆಗೆ ಹೋಗಿ ಸಂತೈಸಿದ್ದೆ ಎಂದು ಹಿಂದಿನ ದಿನಗಳನ್ನು ಮೆಲುಕು ಹಾಕಿದರು.

    ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದ ದೊಡ್ಡ ದೊಡ್ಡ ನಾಯಕರನ್ನು ಕಣ್ಣೀರು ಹಾಕಿಸಿದ ಪ್ರತಿಫಲವೇ ಇಂದು ಕಾಂಗ್ರೆಸ್ ದೇಶದಲ್ಲಿ ಸಂಪೂರ್ಣ ಮುಳುಗುವ ಹಡಗಾಗಿದೆ. ಕಾಂಗ್ರೆಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಸರಿಸಮನಾಗಿ ನಿಲ್ಲುವ ನಾಯಕರು ಯಾರಿದ್ದಾರೆ ಎಂದು ಪ್ರಶ್ನಿಸಿದ ಬಿಎಸ್‌ವೈ, ನಾನು ಮುಖ್ಯಮಂತ್ರಿ ಆಗಿದ್ದಾಗ ಮಹಿಳಾ ಸಬಲೀಕರಣಕ್ಕಾಗಿ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದಿದ್ದೆ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸಿದ್ದೆ ಎಂದು ತಮ್ಮ ಅಧಿಕಾರ ಅವಧಿಯ ಮಹತ್ವಾಕಾಂಕ್ಷಿ ಯೋಜನೆಗಳನ್ನು ಒಂದೊಂದಾಗಿ ಬಿಡಿಸಿಟ್ಟರು.

    ಪ್ರಧಾನಿ ಮೋದಿ ವಿಶ್ವ ಕಂಡ ಅಪರೂಪದ ನಾಯಕ. ಅವರ ನಾಯಕತ್ವದಲ್ಲಿ ಭಾರತ ಪ್ರಕಾಶಿಸುತ್ತಿದೆ. ನನಗೀಗ ೮೧ ವರ್ಷ ವಯಸ್ಸು. ಇಂಥ ಇಳಿವಯಸ್ಸಿನಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರಲು ನಾಡಿನಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ನಾನೆಂದೂ ಜಾತಿ, ಧರ್ಮದ ವಿಷಯದಲ್ಲಿ ತಾರತಮ್ಯ ಮಾಡಿಲ್ಲ. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಬಲ ತುಂಬಬೇಕು ಎಂದು ಮನವಿ ಮಾಡಿದರು.

    ಅಭ್ಯರ್ಥಿ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ, ಹೊಲದಲ್ಲಿ ಕಾಂಗ್ರೆಸ್ ಕಸ ಇದ್ದರೆ ಬೆಳೆ ಬೆಳೆಯುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಇದ್ದರೆ ಅಭಿವೃದ್ಧಿ ಆಗುವುದಿಲ್ಲ. ಹೀಗಾಗಿ ಜನತೆ ಕೈ ಪಕ್ಷವನ್ನು ಸಂಪೂರ್ಣ ತೆಗೆದು ಹಾಕಬೇಕು. ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಇದು ತಮ್ಮ ಕೊನೇ ಚುನಾವಣೆ ಎಂದು ಪ್ರಚಾರ ಮಾಡುತ್ತಿದ್ದಾರೆ. ದೇವರ ಆಶೀರ್ವಾದದಿಂದ ಇದು ಅವರ ಪಾಲಿಗೆ ಕೊನೆಯ ಚುನಾವಣೆಯೇ ಆಗಲಿ. ನನಗಿನ್ನು ಸಾಕಷ್ಟು ವಯಸ್ಸಿದೆ. ದುಡಿಯಬೇಕು ಎಂಬ ಛಲವಿದೆ. ಹೀಗಾಗಿ ಮತ್ತೊಮ್ಮೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.

    ರಾಗಾಗೆ ಮೆಡಿಕಲ್ ಚೆಕಪ್ ಮಾಡಿಸಿ: ರಾಜ್ಯದಲ್ಲಿ ಬಿಜೆಪಿ ೪೦ ಸ್ಥಾನ ಗೆಲ್ಲಲಿದೆ ಎಂದು ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬುದ್ಧಿಭ್ರಮಣೆಯಾಗಿದೆ. ಕೂಡಲೇ ಮೆಡಿಕಲ್ ಚೆಕಪ್ ಮಾಡಿಸುವ ಅಗತ್ಯವಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವ್ಯಂಗ್ಯವಾಡಿದರು. ಶನಿವಾರ ಹುಣಸಗಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. ೧೩೦ ಸ್ಥಾನ ಗೆದ್ದು ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುತ್ತೇವೆ. ಬಿಜೆಪಿಯಲ್ಲಿ ಲಿಂಗಾಯತರನ್ನು ಹೊರಗಿಟ್ಟು ಸಿಎಂ ಮಾಡುವ ಬಗ್ಗೆ ಜಗದೀಶ್ ಶೆಟ್ಟರ್ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅಲ್ಲದೆ ಶೆಟ್ಟರ್ ಸದ್ಯ ಕಾಂಗ್ರೆಸ್‌ನಲ್ಲಿದ್ದಾರೆ. ಅವರಿಗೆ ನಮ್ಮ ಬಗ್ಗೆ ಯಾಕೆ ಚಿಂತೆ ಎಂದು ಪ್ರಶ್ನಿಸಿದರು. ಕೊರಟಗೆರೆಯಲ್ಲಿ ಮಾಜಿ ಸಚಿವ ಡಾ.ಜಿ. ಪರಮೇಶ್ವರ್ ಮೇಲೆ ಕಲ್ಲು ತೂರಾಟ ನಡೆದಿದ್ದು ದುರದೃಷ್ಟಕರ ಸಂಗತಿ. ಸೋನಿಯಾ ಗಾಂಧಿ ಬಗ್ಗೆ ಬಸನಗೌಡ ಯತ್ನಾಳ್ ವಿಷಕನ್ಯೆ ಎಂದಿರುವುದು ಸರಿಯಲ್ಲ. ಇಂಥ ಹೇಳಿಕೆ ಯಾರೂ ಕೊಡಬಾರದು ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts