More

    ಮೋದಿ ಪ್ರಧಾನಿ ಆಗಿಸುವಲ್ಲಿ ಶ್ರಮಿಸುತ್ತೇವೆ

    ಚಿತ್ರದುರ್ಗ: ದೇಶಕ್ಕೆ ನರೇಂದ್ರಮೋದಿ ಅಗತ್ಯವಿದ್ದು, 10 ವರ್ಷದಿಂದ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿರುವ ಅವರು ಮತ್ತೊಮ್ಮೆ ಪ್ರಧಾನಿಯಾಗಿಸಲು ಬಿಜೆಪಿಗರು ಶ್ರಮಿಸುತ್ತೇವೆ. ಈ ನಿಟ್ಟಿನಲ್ಲಿ ಶಾಸಕ ಎಂ.ಚಂದ್ರಪ್ಪ, ಎಂ.ಸಿ.ರಘುಚಂದನ್ ಇಬ್ಬರೂ ನನಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಗೋವಿಂದ ಎಂ ಕಾರಜೋಳ ತಿಳಿಸಿದರು.

    ಶಾಸಕರ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಹೋದರ ಚಂದ್ರಪ್ಪ ಪುತ್ರ ರಘುಚಂದನ್ ಯುವಕ, ಆಶಾವಾದಿ. ಭಿನ್ನಾಭಿಪ್ರಾಯ ಎಲ್ಲವೂ ಶಮನಗೊಂಡಿದೆ. ನಾನು ಬೇಡವೆಂದರೂ ವರಿಷ್ಠರು ಹೇಳಿದ್ದರಿಂದ ಮಾತು ಮೀರದೆ, ಸ್ಪರ್ಧಿಸಿದ್ದೇನೆ. ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ ಎಂದರು.

    ಪ್ರಧಾನಿ ಅವರಿಂದಾಗಿ ಭಯೋತ್ಪಾದಕರು ಬಿಲ ಸೇರಿದ್ದಾರೆ. ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದೆ. ಮೋದಿ ಟ್ರಂಪ್ ಕಾರ್ಡ್ ಇಟ್ಟುಕೊಂಡು ಬೇರೆ ಕಡೆ ಅಲೆಯಬೇಕಾಗಿಲ್ಲ. ಅವರ ಕೈ ಬಲಪಡಿಸಲು ಏ. 26ರಂದು ನಡೆಯುವ ಚುನಾವಣೆಯಲ್ಲಿ ಅಮೂಲ್ಯವಾದ ಮತ ನೀಡಿ ಬಹುಮತದಿಂದ ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

    ನಾನು ಚಂದ್ರಪ್ಪ ಒಂದೇ ತಟ್ಟೆಯಲ್ಲಿ ಉಂಡವರು. ಆವೇಶದಲ್ಲಿ ಕೆಲ ಹೇಳಿಕೆ ನೀಡಿರಬಹುದು. ಆದರೂ, ಹೊಳಲ್ಕೆರೆಯಲ್ಲಿ ಲೀಡ್ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

    ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಯಡಿಯೂರಪ್ಪ ಅವರ ಬಳಿ ಯಾವ ಒಪ್ಪಂದ ಮಾಡಿಕೊಂಡಿಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಷರತ್ತು ಇಲ್ಲದೆ, ಚುನಾವಣೆಯಲ್ಲಿ ಸಹಕಾರ ನೀಡುತ್ತೇನೆ ಎಂದು ಹೇಳಿದರು.

    ಯುವ ಮುಖಂಡ ಎಂ.ಸಿ.ರಘುಚಂದನ್ ಮಾತನಾಡಿ, ಮಾಜಿ ಸಿಎಂ ಬಿಎಸ್‌ವೈ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮಾತು ಕೊಟ್ಟಿದ್ದೇವೆ. ಜೀವ ಹೋದರೂ ಮಾತಿಗೆ ತಪ್ಪೋಲ್ಲ. ಹೊರಗೊಂದು-ಒಳಗೊಂದು ಮಾಡುವುದಿಲ್ಲ. ಪಕ್ಷ ಹೇಳಿದ ಕಡೆ ಕೆಲಸ ಮಾಡುವ ಮೂಲಕ ಕಾರಜೋಳ ಅವರ ಗೆಲುವಿಗಾಗಿ ಚುನಾವಣೆ ನಡೆಸುತ್ತೇವೆ ಎಂದರು.

    ನಾನು ರಾಜ್ಯಸಭೆ, ಪರಿಷತ್ ಆಸೆ ಇಟ್ಟುಕೊಂಡಿಲ್ಲ. ಜನರ ನಡುವೆ ಬೆಳೆದ ಕಾರಣ ಜನಾಶೀರ್ವಾದ ಮೂಲಕವೇ ಆಯ್ಕೆಯಾಗುವ ರಾಜಕಾರಣ ಮಾಡುತ್ತೇನೆ ಎಂದು ಹೇಳಿದರು.

    ಎಂಎಲ್ಸಿ ಎನ್.ರವಿಕುಮಾರ್, ಜಿಲ್ಲಾಧ್ಯಕ್ಷ ಎ.ಮುರಳಿ, ಮುಖಂಡರಾದ ಎಸ್.ಲಿಂಗಮೂರ್ತಿ, ವೆಂಕಟೇಶ್ ಯಾದವ್, ಎಂ.ಬಿ.ಸಿದ್ದೇಶ್, ಶೈಲೇಶ್, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೇ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts