More

    ಮೋಡಿ ಮಾಡಿದ ‘ಶಮಾ’ ರಂಗಪ್ರವೇಶ

    ಚಿತ್ರದುರ್ಗ: ನೃತ್ಯದ ಅಧಿದೇವತೆ ನಟರಾಜನಿಗೆ ವಂದಿಸುತ್ತಾ, ವಿಘ್ನನಿವಾರಕ ವಿನಾಯಕನಿಗೆ ಪ್ರಾರ್ಥನೆ ಸಲ್ಲಿಸಿ ರಂಗಪ್ರವೇಶಿಸಿದ ಶಮಾ ಭಾಗ್ವತ್ ನೃತ್ಯ ಪ್ರದರ್ಶನಕ್ಕೆ ಪ್ರೇಕ್ಷಕರು ಮನಸೋತರು.

    ತರಾಸು ರಂಗಮಂದಿರದಲ್ಲಿ ಭಾನುವಾರ ರಾತ್ರಿ ಲಾಸಿಕಾ ಫೌಂಡೇಶನ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 13 ನೇ ವಯಸ್ಸಿನಲ್ಲೇ ಭರತನಾಟ್ಯ ರಂಗ ಪ್ರವೇಶ ಮಾಡಿದ ಶಮಾ ಕಲಾಸಕ್ತರನ್ನು ಸೆಳೆದಳು. ಹೆಜ್ಜೆ-ಗೆಜ್ಜೆಗಳ ಸಮ್ಮಿಲನಕ್ಕೆ ಇಡೀ ಪ್ರೇಕ್ಷರ ಗ್ಯಾಲರಿ ಸ್ತಬ್ದವಾಗಿತ್ತು. ಎರಡೂವರೆ ತಾಸು ನಾಟ್ಯ ಪ್ರದರ್ಶಿಸಿ, ಎಲ್ಲರಿಂದ ಸೈ ಎನಿಸಿಕೊಂಡಳು.

    ಆರಂಭದಲ್ಲಿ ಹಿಮ್ಮೇಳ ಕಲಾವಿದರಿಂದ ಪುಷ್ಪಾಂಜಲಿಯೊಂದಿಗೆ ವೇದಿಕೆ ಪ್ರವೇಶಿಸಿದ ಕಲಾವಿದೆ ಭೂ ಮಾತೆಗೆ ಪ್ರಣಾಮ ಸಲ್ಲಿಸಿ ಭಕ್ತಿಯಿಂದ ನಾಟ್ಯದೇವನಿಗೆ ಶರಣಾದಳು. ಸಭಿಕರಿಗೂ ವಂದಿಸಿ, ಭರತನಾಟ್ಯದ ಕೇಂದ್ರ ಭಾಗವಾದ ಕಮಾಚ್ ರಾಗ ಆದಿತಾಳದಲ್ಲಿರುವ ವರ್ಣ ನೃತ್ಯ ಕಣ್ಮುಂದೆ ತಂದಳು.
    ಪುಷ್ಪಾಂಜಲಿ, ಅಲರಿಪು, ಜತಿಸ್ವರ, ದೇವರನಾಮ, ತಿಲ್ಲಾನ ಹೀಗೆ ಹಲವು ಆಯಾಮಗಳಲ್ಲಿ ಪ್ರದರ್ಶನ ನೀಡಿದಳು. ಶಿವಸ್ತುತಿ, ತಾಯಿ ರಾಜರಾಜೇಶ್ವರಿ, ಪಾರ್ವತಿ ದೇವಿ ಚಾಮುಂಡೇಶ್ವರಿಯಾಗಿ ದುಷ್ಟ ರಕ್ಕಸರನ್ನು ಸಂಹರಿಸಿದ ಪರಿ ಸೇರಿ ಪ್ರತಿ ನೃತ್ಯವೂ ಪ್ರೇಕ್ಷಕರನ್ನು ಸೆಳೆಯಿತು. ಮಣ್ಣಿನ ಮಡಿಕೆ ಮೇಲೆ ನಾಟ್ಯ ಮಾಡುವ ಪೆರಿಣಿ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು.

    ಭರತನಾಟ್ಯ ಕಲಿಕೆಯ ಗುರುವೂ ಆದ ಶ್ವೇತಾ ಮತ್ತು ಮಂಜುನಾಥ್ ಪುತ್ರಿ ಶಮಾಗೆ ಬೆಂಗಳೂರಿನ ನಾಟ್ಯಂತರಂಗ ಸಂಸ್ಥೆಯ ನಿರ್ದೇಶಕಿ ಶುಭಾ ಧನಂಜಯ ಅವರು ಗೆಜ್ಜೆ ತೊಡಿಸಿ ರಂಗಪ್ರವೇಶಕ್ಕೆ ಅನುವು ಮಾಡಿಕೊಟ್ಟರು.

    ರೋಹಿತ್ ಭಟ್ಟ-ಹಾಡುಗಾರಿಕೆ, ನಾಗೇಂದ್ರ ಪ್ರಸಾದ-ಮೃದಂಗ, ಶಶಾಂಕ ಜೋಡಿದಾರ-ಕೊಳಲು ವಾದನ, ವಿಭುದೇಂದ್ರ ಸಿಂಹ-ಪಿಟೀಲು, ಸಾಯಿ ವಂಶಿ-ನಾದಲಯ ಪುಂಜದಲ್ಲಿ ಸಹಕಾರ ನೀಡಿದರು.

    ಸೆಲ್ಕೋ ಇಂಡಿಯಾದ ಸಿಇಒ ಮೋಹನ ಭಾಸ್ಕರ ಹೆಗಡೆ, ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ವಿಜಯಕುಮಾರ, ರತ್ನಾಕರ ಭಟ್ಟ, ಮಂಜುನಾಥ ಭಾಗ್ವತ್, ಶ್ವೇತಾ ಮಂಜುನಾಥ್ ಇತರರಿದ್ದರು.

    ಆಟವಾಡುವ ವಯಸ್ಸಿನ ಹುಡುಗಿಯೊಬ್ಬಳ ರಂಗಪ್ರವೇಶ ಒಳ್ಳೆಯ ಬೆಳವಣಿಗೆ. ಈ ಮೂಲಕ ಜಿಲ್ಲೆಯ ಪ್ರತಿಭಾವಂತ ಬಾಲ ಕಲಾವಿದೆ ಎಂಬುದನ್ನು ಶಮಾ ಸಾಬೀತು ಪಡಿಸಿದ್ದಾಳೆ.
    ಶುಭಾ ಧನಂಜಯ, ನಿರ್ದೇಶಕಿ, ನಾಟ್ಯಂತರಂಗ ಸಂಸ್ಥೆ

    ರಂಗಪ್ರವೇಶ ಬದುಕಿನಲ್ಲಿ ಅತ್ಯಂತ ಮಹತ್ವದ ಘಟ್ಟ. ಗುರು-ಶಿಷ್ಯ ಪರಂಪರೆ ಸಂಗೀತ, ನೃತ್ಯದಲ್ಲಿ ಸದಾ ಜೀವಂತವಾಗಿದೆ. ಅದು ಶೈಕ್ಷಣಿಕ ಸೇರಿ ಎಲ್ಲ ಕ್ಷೇತ್ರದಲ್ಲೂ ಇದ್ದರೆ, ಪ್ರಗತಿಯ ಬೆಳವಣಿಗೆ ವೇಗ ಪಡೆಯಲಿದೆ.
    ರವೀಂದ್ರ ಭಟ್ಟ, ಹಿರಿಯ ಪತ್ರಕರ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts