More

    ಮೋಜು-ಮಸ್ತಿಯಲ್ಲಿ ತೊಡಗಿ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ

    ಹಳೇಬೀಡು: ಶಿಷ್ಯನಾದವನು ಗುರುವಿನಿಂದ ಒಳ್ಳೆಯ ಗುಣ ಮತ್ತು ಉತ್ತಮ ಜ್ಞಾನ ಪಡೆದುಕೊಳ್ಳಲು ಸದಾ ಆಸಕ್ತಿ ಹೊಂದಿದವನಾಗಿರಬೇಕು ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಬಿ.ಎಸ್.ವಿನುತಾ ಹೇಳಿದರು.


    ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಶನಿವಾರ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜು ಹಂತವು ವಿದ್ಯಾರ್ಥಿಗಳಿಗೆ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಇಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಮುಂದಿನ ಭವಿಷ್ಯವನ್ನು ರೂಪಿಸುತ್ತದೆ. ಹಾಗಾಗಿ ಪ್ರಾಪಂಚಿಕ ಸುಖಗಳಿಗೆ ಬುದ್ಧಿ ಮತ್ತು ಮನಸ್ಸನ್ನು ತೆರೆದುಕೊಳ್ಳದೆ ಏಕಾಗ್ರತೆಯಿಂದ ವ್ಯಾಸಂಗದಲ್ಲಿ ತೊಡಗಬೇಕಾಗುತ್ತದೆ. ಯೌವ್ವನದ ಅಮೂಲ್ಯ ಸಮಯವನ್ನು ಕೇವಲ ಶಿಕ್ಷಣ ಕೇಂದ್ರದಲ್ಲೇ ಕಳೆಯಬೇಕಾಗುತ್ತದೆ ಎಂಬ ಆಲೋಚನೆ ಕೆಲವು ವಿದ್ಯಾರ್ಥಿಗಳಲ್ಲಿ ಇರುತ್ತದೆ. ಅಂತಹವರು ಮೋಜು-ಮಸ್ತಿಯಲ್ಲಿ ತೊಡಗಿ ಭವಿಷ್ಯ ಹಾಳು ಮಾಡಿಕೊಳ್ಳುತ್ತಾರೆ. ಓದಿನ ಜತೆಗೆ ಮನರಂಜನೆಯು ಸಹ ಅವಶ್ಯಕವಾಗಿದ್ದು, ಅದಕ್ಕಾಗಿ ಸಮಯವನ್ನು ಸರಿಯಾಗಿ ನಿಗದಿ ಮಾಡಿಕೊಂಡು ನಿಭಾಯಿಸುವ ಚಾತುರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.


    ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಪಬ್ಲಿಕ್ ಶಾಲೆ ಉಪ ಪ್ರಾಂಶುಪಾಲ ಮುಳ್ಳಯ್ಯ ಮಾನತಾಡಿ, ಇದೇ ಕಾಲೇಜಿನಲ್ಲಿ ಕಲಿತು ವಿವಿಧ ಉದ್ಯೋಗ, ವ್ಯಾಪಾರಗಳಲ್ಲಿ ತೊಡಗಿ ಬೇರೆ ಊರುಗಳಲ್ಲಿರುವ ನೂರಾರು ವಿದ್ಯಾರ್ಥಿಗಳು ಸಮ್ಮಿಲನಗೊಂಡಿರುವುದು ಅತ್ಯಂತ ಸಂತಸದ ಸಂಗತಿ. ಕಾರ್ಯಕ್ರಮವು ಒಂದು ದಿನಕ್ಕೆ ಸೀಮಿತವಾಗಿದ್ದರೂ ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುವ ಮೂಲಕ ಭವಿಷ್ಯದ ಬಗೆಗೂ ಆಲೋಚನೆ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಈ ರೀತಿಯ ಕಾರ್ಯಕ್ರಮಗಳು ಸೌಹಾರ್ದತೆ ಹಾಗೂ ಸಹಕಾರ ಮನೋಭಾವ ಹೆಚ್ಚಿಸಿ ಸಮಾಜದಲ್ಲಿ ಶಾಂತಿ ವಾತಾವರಣ ನಿರ್ಮಿಸುತ್ತದೆ ಎಂದು ಅಭಿಪ್ರಾಯಪಟ್ಟರು.


    ಸಮಾರಂಭಕ್ಕೂ ಮುನ್ನ ನೂರಾರು ಸಂಖ್ಯೆಯಲ್ಲಿದ್ದ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಪಟ್ಟಣದ ಮುಖ್ಯರಸ್ತೆಯಲ್ಲಿ ಸಾಂಪ್ರದಾಯಿಕ ಉಡುಪು ಧರಿಸಿ ಮೆರವಣಿಗೆಯಲ್ಲಿ ಸಾಗಿ ಸಾರ್ವಜನಿಕರ ಗಮನ ಸೆಳೆದರು. ಜಾನಪದ ಕಲಾ ಪ್ರಕಾರಗಳಾದ ವೀರಗಾಸೆ ಹಾಗೂ ಡೊಳ್ಳು ಕುಣಿತದ ಪ್ರದರ್ಶನವು ಕಾರ್ಯಕ್ರಮಕ್ಕೆ ಮೆರುಗು ತಂದಿತು. 2005-07ನೇ ಸಾಲಿನಲ್ಲಿ ಸೇವೆ ಸಲ್ಲಿಸಿದ್ದ 17 ಪ್ರಾಧ್ಯಾಪಕರನ್ನು ಹಳೆಯ ವಿದ್ಯಾರ್ಥಿಗಳ ಸಂಘದಿಂದ ಸನ್ಮಾನಿಸಲಾಯಿತು. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರಿಗೂ ಗೌರವ ಸಲ್ಲಿಸಲಾಯಿತು.

    ಕಾರ್ಯಕ್ರಮಕ್ಕೆ ವರುಣನ ಕಾಟ: ಶನಿವಾರ ಬೆಳಗ್ಗೆಯಿಂದಲೇ ಸಣ್ಣಗೆ ಆರಂಭವಾಗಿದ್ದ ಮಳೆ 10 ಗಂಟೆ ಬಳಿಕ ಬಿರುಸು ಪಡೆದು ಮಧ್ಯಾಹ್ನದವರೆಗೆ ಒಂದೇ ಸಮ ಸುರಿಯಿತು. ಇದರಿಂದ ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದ ಹಳೆಯ ವಿದ್ಯಾರ್ಥಿಗಳ ಸಂಘಟಕರು ಕೆಲಕಾಲ ತೊಂದರೆ ಅನುಭವಿಸಿದರು. ಇಷ್ಟಾದರೂ ಮಳೆಯ ನಿರೀಕ್ಷೆಯನ್ನು ಇಟ್ಟುಕೊಂಡು ಕೆಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದರಿಂದ ಸಮಾರಂಭವು ಸುಸೂತ್ರವಾಗಿ ಮುಂದುವರಿಯಿತು. ಆರಂಭದಲ್ಲಿ ಸ್ವಲ್ಪ ಕಾಲ ಗೊಂದಲವಾದರೂ, ಕ್ರಮೇಣ ಮಳೆ ಲೆಕ್ಕಿಸದೆ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಸ್ನೇಹ ಸಮ್ಮಿಲನ ಕಾರ್ಯಕ್ರಮ ಯಶಸ್ವಿಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts