More

    ಮೋಕ್ಷ ಪ್ರಾಪ್ತಿಗೆ ಮೋಹ ಕ್ಷಯವೇ ಸನ್ಮಾರ್ಗ

    ಗೋಕರ್ಣ: ಮೋಕ್ಷದ ಸದಿಚ್ಛೆ ಇದ್ದಲ್ಲಿ ಸರ್ವ ಬಗೆಯ ಮೋಹ ಕ್ಷಯವಾಗಬೇಕು. ದ್ರವ್ಯದ ಮೇಲಿನ ಮೋಹ ಕಳೆದುಕೊಂಡು ಸತ್ಕಾರ್ಯಕ್ಕೆ ದಾನ ಸಮರ್ಪಣೆ ಮಾಡುವುದು ಮೋಹ ಕ್ಷಯಕ್ಕೆ ಇರುವ ಏಕಮೇವ ಸನ್ಮಾರ್ಗ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

    ಗುರುಕುಲ ಚಾತುರ್ವಸ್ಯ ನಿಮಿತ್ತ ಸೋಮವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಆಶೀರ್ವಚನ ಅನುಗ್ರಹಿಸಿದ ಶ್ರೀಗಳು, ‘ದಾನ ಬುದ್ಧಿ ಹಾಗೆಯೇ ಬರುವುದಲ್ಲ. ದ್ರವ್ಯದ ಮೇಲಿನ ರಾಗ ಅಂದರೆ ಅಂಟು ಕಳೆದು ವಿರಾಗ ಅಥವಾ ವೈರಾಗ್ಯ ಉತ್ಪನ್ನವಾದಾಗ ಮಾತ್ರ ದಾನ ಬುದ್ಧಿ ಸಂಪ್ರಾಪ್ತವಾಗುತ್ತದೆ. ಸಾತ್ವಿಕ, ರಾಜಸ ಮತ್ತು ತಾಮಸ ದಾನಗಳಲ್ಲಿ ಸತ್ಪಾತ್ರರಿಗೆ ದಾನ ಅರ್ಪಿಸಿ ಸಂತೋಷ ಪಡುವ ಸಾತ್ವಿಕ ದಾನವೇ ಸರ್ವ ಶ್ರೇಷ್ಠ ದಾನ’ ಎಂದು ಶ್ರೀಗಳು ಆಶೀರ್ವದಿಸಿದರು.

    ಮಾಜಿ ಅಡ್ವೋಕೇಟ್ ಜನರಲ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರ್ನಳ್ಳಿ ಮಾತನಾಡಿ, ಇಂದಿನ ಕಾಲದಲ್ಲಿ ಸನಾತನ ಧರ್ಮವನ್ನು ಎತ್ತಿ ಹಿಡಿಯುವವರಿಗೆ, ಅನುಸರಿಸುವವರಿಗೆ ಅಡ್ಡಿ ಆತಂಕಗಳು ಸಾವಿರ. ಸಂತಸದ ವಿಚಾರವೆಂದರೆ ರಾಘವೇಶ್ವರ ಶ್ರೀಗಳು ಇಂತಹ ಎಲ್ಲ ಅಡ್ಡಿ ಆತಂಕಗಳನ್ನು ಸಮರ್ಥವಾಗಿ ಎದುರಿಸಿ ಪುಟವಿಟ್ಟ ಚಿನ್ನವಾಗಿ ಪ್ರಖರವಾಗಿ ಹೊಳೆಯುತ್ತಿದ್ದಾರೆ. ಸನಾತನ ಧರ್ಮ ಮತ್ತು ವಿದ್ಯೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಋಷಿ ಪರಂಪರೆಯನ್ನು ಸಂರಕ್ಷಿಸುವ ಬೃಹತ್ ಸಂಕಲ್ಪ ಮಾಡಿದ್ದಾರೆ. ಸಮಸ್ತ ಸಮಾಜ ಇದಕ್ಕೆ ಕೈಜೋಡಿಸಬೇಕು ಎಂದು ಕರೆಯಿತ್ತರು.

    ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ ಮತ್ತು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ ಮತ್ತಿತರರು ಶ್ರೀಗಳ ಆಶೀರ್ವಾದ ಪಡೆದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾಗಧ ವಧೆ ಯಕ್ಷಗಾನ ಪ್ರದರ್ಶಿತವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts