More

    ಮೊಬೈಲ್ ಗೀಳಿನಿಂದ ಏಕಾಗ್ರತೆ, ಸ್ಮರಣಶಕ್ತಿ ಕುಂಠಿತ

    ಕಲಬುರಗಿ: ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚುತ್ತಿರುವುದರಿಂದ ಏಕಾಗ್ರತೆ, ನಿದ್ರಾಹೀನತೆ, ಓದಿದ್ದು ನೆನಪಿನಲ್ಲಿ ಉಳಿಯದಿರುವುದು ಸೇರಿ ಹತ್ತಾರು ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಟ್ರಾನ್ಸ್ಫಾರ್ಮ ಇನ್ ಕಾರ್ಪೋರೇಷನ್ ಮುಖ್ಯಸ್ಥ ಭುಜಬಲಿ ಬೋಗಾರ ಕಳವಳ ವ್ಯಕ್ತಪಡಿಸಿದರು.


    ನಗರದ ಸರ್ವಜ್ಞ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶಿಕ್ಷಕರಿಗಾಗಿ ಭಾನುವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ತರಬೇತಿ ನೀಡಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮೊಬೈಲ್ ತಂತ್ರಜ್ಞಾನ ಅಗತ್ಯವಿದ್ದಷ್ಟು ಮಾತ್ರ ಬಳಸಬೇಕು. ಎಳೆ ಮಕ್ಕಳಿಂದ ದೊಡ್ಡವರ ಮನಸ್ಥಿತಿ, ಆಯಾ ವಯೋಮಾನಕ್ಕೆ ತಕ್ಕಂತೆ ಅಭಿರುಚಿ ಅರಿತು ಮೊಬೈಲ್‌ನಲ್ಲಿ ಒದಗಿಸಲಾಗುತ್ತದೆ. ಇದಕ್ಕೆ ವ್ಯಸನಿ ತಂತ್ರಜ್ಞಾನ (ಆಡಿಕ್ಷನ್ ಟೆಕ್ನಾಲಜಿ) ಎನ್ನುತ್ತಾರೆ. ಮೊಬೈಲ್‌ನಲ್ಲಿ ಇದನ್ನು ಅಳವಡಿಸಿರುತ್ತದೆ. ಹೀಗಾಗಿ ಮಕ್ಕಳು ಬೇಗ ಮೊಬೈಲ್ ವ್ಯಸನಿಗಳಾಗುತ್ತಿದ್ದಾರೆ ಎಂದು ಹೇಳಿದರು.


    ಕಲರ್, ಸೈಜ್, ಫಾಂಟು ಹೀಗೆ ವೀಕ್ಷಕರ ಮನಸ್ಥಿತಿ ಅರಿತು ಅದನ್ನೇ ಮೊಬೈಲ್ ಮೂಲಕ ಉತ್ಪಾದಕರು ಕೊಡುತ್ತ ಹೋಗುತ್ತಾರೆ. ಮಕ್ಕಳನ್ನು ದಾರಿಗೆ ತರುವುದು ಪಾಲಕರ ಜವಾಬ್ದಾರಿ. ಮನೆಯಲ್ಲಿ ಪಾಲಕರು ಮೊಬೈಲ್ ನೋಡುತ್ತ ಕುಳಿತು ಮೊಬೈಲ್ ಬಿಡಿ ಎಂದು ಮಕ್ಕಳಿಗೆ ಹೇಳಿದರೆ ಸರಿ ಹೋಗಲ್ಲ. ಮೊದಲು ನೀವು ನೋಡುವುದನ್ನು ನಿಲ್ಲಿಸಿ ಎಂದರು.

    ಮೊಬೈಲ್ ಗೀಳಿನಿಂದ ಓದಿದ್ದು ನೆನಪಿನಲ್ಲಿ ಉಳಿಯುತ್ತಿಲ್ಲ, ಏಕಾಗ್ರತೆ ಇರುವುದಿಲ್ಲ, ಸ್ಮರಣಶಕ್ತಿ ಕುಂದುತ್ತದೆ. ರಾತ್ರಿ ಮೊಬೈಲ್ ಬಳಕೆಯಿಂದ ನಿದ್ರಾಹೀನತೆ ಕಾಡುತ್ತದೆ. ಶಿಸ್ತು, ಬದ್ಧತೆ ರೂಢಿ ಮಾಡಿಕೊಂಡು ದಿನದಲ್ಲಿ ಇಷ್ಟೇ ಹೊತ್ತು ಮೊಬೈಲ್ ನೋಡಬೇಕು ಎಂಬುದನ್ನು ನಿರ್ಧರಿಸಬೇಕು. ಹಂತ-ಹಂತವಾಗಿ ಬಳಕೆ ಅವಧಿ ಕಡಿಮೆ ಮಾಡುತ್ತ ಹೋಗಬೇಕು. ಪಾಲಕರು ಮಕ್ಕಳಿಗೆ ಟೈಮ್ ಟೇಬಲ್ ಹಾಕಬೇಕು. ಒಳ್ಳೆಯದಕ್ಕಾಗಿ ಬಳಸಬೇಕು. ಜತೆಗೆ ಮೆಕಾನಿಕಲ್ ಆ್ಯಕ್ಟಿವಿಟಿ, ದೈಹಿಕ ಚಟುವಟಿಕೆ ಹೆಚ್ಚು ಮಾಡಬೇಕು. ಇದರಲ್ಲಿ ಮಕ್ಕಳಿಗಿಂತ ಪಾಲಕರ ಜವಾಬ್ದಾರಿ ಹೆಚ್ಚಿದೆ ಎಂದು ಕಿವಿಮಾತು ಹೇಳಿದರು.

    ಮನುಷ್ಯನ ಬಲ ಮಿದುಳು ಕ್ರಿಯೇಟಿವಿಟಿ ಕೇಂದ್ರವಾಗಿದ್ದು, ಪಾಠದ ಜತೆಗೆ ಕಲೆ, ಸಾಹಿತ್ಯ, ಸಂಗೀತ, ಆಟ ಇದೆಲ್ಲವನ್ನೂ ಹೇಳುತ್ತ ಪಾಠ ಮಾಡಿದರೆ ಮಕ್ಕಳ ಮನಸ್ಸಿಗೆ ನೇರವಾಗಿ ತಲುಪಲಿದೆ. ಈ ಮೂಲಕ ಶಿಕ್ಷಕರು ಮಕ್ಕಳಿಗೆ ಪಾಠ ಮಾಡಬೇಕು. ಹೀಗಾದಾಗ ಮಾತ್ರ ಮಕ್ಕಳಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದರು.

    ಶಿಕ್ಷಕರಿಗೆ ಕೌಶಲ ತರಬೇತಿ
    ಸರ್ವಜ್ಞ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಜಸ್ಟಿಸ್ ಶಿವರಾಜ ಪಾಟೀಲ್ ಫೌಂಡೇಷನ್ ಸಹಯೋಗದಡಿ ಶಿಕ್ಷಕರಿಗಾಗಿ ಭಾನುವಾರ ಕೌಶಲ ತರಬೇತಿ ಕಾರ್ಯಕ್ರಮ ನಡೆಯಿತು. ಕಲಬುರಗಿ ಆಕಾಶವಾಣಿ ನಿವೃತ್ತ ಅಧಿಕಾರಿ ಅಂಜನಾ ಯಾತನೂರ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಸಮಾಜದ ಉತ್ತಮ ನಿರ್ಮಾಪಕರು. ಪ್ರತಿ ಹಂತದಲ್ಲೂ ಅವರ ಮಾರ್ಗದರ್ಶನ ಅಗತ್ಯ. ವಿದ್ಯಾರ್ಥಿಗಳಿಗೆ ಶಿಕ್ಷಕ ಆದರ್ಶವಾಗಿರಬೇಕು. ಶ್ರೇಷ್ಠ ಸಾಧಕರನ್ನು ನಿರ್ಮಿಸಬೇಕು. ಶಿಕ್ಷಕರು ನಿರಂತರ ಜ್ಞಾನಾರ್ಜನೆ ಮಾಡಬೇಕು ಎಂದು ಹೇಳಿದರು.
    ತರಬೇತುದಾರ ಭುಜಬಲಿ ಬೋಗಾರ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ಉದ್ಯೋಗ ಅರಸಿ ದೊಡ್ಡ ದೊಡ್ಡ ಕಂಪನಿಗಳಿಗೆ ಹೋದರೆ ಕೆಲಸದ ಕೌಶಲ ಇರುವುದಿಲ್ಲ. ಹೀಗಾಗಿ ಅರ್ಹತೆ ಜತೆಗೆ ಕೌಶಲ ಹೊಂದುವುದೂ ಅಗತ್ಯ ಎಂದರು.
    ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಪ್ರೊ.ಚನ್ನಾರಡ್ಡಿ ಪಾಟೀಲ್, ಪ್ರಾಚಾರ್ಯ ಎಂ.ಸಿ. ಕಿರೇದಳ್ಳಿ, ಶ್ರವಣಯೋಗಿ ಹಿರೇಮಠ, ವಿನುತಾ ಬಿ.ಆರ್., ರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts