More

    ಮೊದಲ ದಿನದ ಪರೀಕ್ಷೆ ಸುಗಮ, ಸುರಕ್ಷಿತ

    ಗದಗ: ಕರೊನಾ ಸೋಂಕಿನ ಭಯದ ನಡುವೆಯೇ ಸೋಮವಾರ 10ನೇ ತರಗತಿಯ ಮೂರು ವಿಷಯಗಳ (ಗಣಿತ, ವಿಜ್ಞಾನ ಮತ್ತು ಸಮಾಜ) ಪರೀಕ್ಷೆಗಳು ನಿರಾತಂಕವಾಗಿ ಜರುಗಿದವು.
    ಕರೊನಾ ಭಯದಿಂದ ಜಿಲ್ಲೆಯ ಕೆಲವೆಡೆ ಐದಾರು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹಿಂದೇಟು ಹಾಕಿದ್ದರು. ಅಧಿಕಾರಿಗಳು, ಜನಪ್ರತಿನಿಧಿಗಳು ವಿದ್ಯಾರ್ಥಿಗಳ ಮನವೊಲಿಸಿ ಪರೀಕ್ಷೆಗೆ ಹಾಜರುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
    ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಸಂಚಾರ ವ್ಯವಸ್ಥೆ ಕೈಗೊಂಡಿದ್ದರಿಂದ ಯಾವುದೇ ತೊಂದರೆ ಉಂಟಾಗಲಿಲ್ಲ. ಗ್ರಾಮೀಣ ಪ್ರದೇಶದ ಬಹುತೇಕರು ಬಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದರು. ಅವಳಿ ನಗರದ ಅನೇಕ ಪಾಲಕರು ಮಕ್ಕಳನ್ನು ಸ್ವಂತ ವಾಹನ ಇಲ್ಲವೇ ಆಟ ಮೂಲಕ ಪರೀಕ್ಷಾ ಕೇಂದ್ರಕ್ಕೆ ಕರೆತಂದರು. ಆಯಾ ವ್ಯಾಪ್ತಿಯ ಪ್ರೌಢಶಾಲೆಗಳ ಮುಖ್ಯಾಧ್ಯಾಪಕರು ಮಕ್ಕಳನ್ನು ಕರೆತಂದು ಪರೀಕ್ಷೆ ಬರೆಸುವಲ್ಲಿ ಯಶಸ್ವಿಯಾದರು. ಈ ಮೂಲಕ ಶಿಕ್ಷಣ ಇಲಾಖೆ ನೀಡಿದ್ದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು.
    ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಅವರು ತೋಂಟದಾರ್ಯಮಠದ ಪ್ರೌಢಶಾಲೆ ಮತ್ತು ಮುನ್ಸಿಪಲ್ ಪ್ರೌಢಶಾಲೆಯ ಪರೀಕ್ಷೆ ಕೇಂದ್ರದ ಆವರಣದಲ್ಲಿ ಪ್ರತಿ ವಿದ್ಯಾರ್ಥಿಗೆ ಗುಲಾಬಿ ಹೂವು ನೀಡಿ ಶುಭ ಹಾರೈಸಿದರು. ಡಿಡಿಪಿಐ ಬಸವಲಿಂಗಪ್ಪ ಅವರು ಅವಳಿ ನಗರದ ನಾಲ್ಕಾರು ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
    ಜಿಲ್ಲೆಯಲ್ಲಿ 16, 216 ವಿದ್ಯಾರ್ಥಿಗಳಿದ್ದು, ಶೇ. 99ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು. ಜಿಲ್ಲೆಯಲ್ಲಿ ಒಟ್ಟು 103 ಪರೀಕ್ಷೆ ಕೇಂದ್ರಗಳಿಗೂ ಭಾನುವಾರವೇ ಸ್ಯಾನಿಟೈಸ್ ಮಾಡಲಾಗಿದ್ದು, ಪರಸ್ಪರ ಅಂತರ ಕಾಪಾಡುವ ಸಲುವಾಗಿ 1 ಕೊಠಡಿಗೆ 12 ವಿದ್ಯಾರ್ಥಿಗಳನ್ನು ಕೂರಿಸಿ ಪರೀಕ್ಷೆ ಬರೆಸಲಾಯಿತು. ಪರೀಕ್ಷೆಗೆ ಸಂಬಂಧಿಸಿದಂತೆ ಒಟ್ಟು 3168 ಶಿಕ್ಷಕರು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಿದರು.

    ಕೋವಿಡ್ ಮಾರ್ಗಸೂಚಿ ಯನ್ವಯ ಎಸ್ಸೆಸ್ಸೆಲ್ಸಿಯ ಮೂರು ವಿಷಯಗಳ ಪರೀಕ್ಷೆ ನಡೆಯಿತು. ಗ್ರಾಮೀಣ ಭಾಗದ ಮಕ್ಕಳ ಸಲುವಾಗಿ ಹೆಚ್ಚುವರಿಯಾಗಿ ಸಾರಿಗೆ ಬಸ್ ಆರಂಭಿಸಿದ್ದರಿಂದ ಯಾವುದೇ ಸಮಸ್ಯೆ ಕಂಡುಬರಲಿಲ್ಲ. ಒಟ್ಟಾರೆ ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮ ಹಾಗೂ ಸುರಕ್ಷಿತವಾಗಿ ನಡೆಯಿತು.
    | ಬಸವಲಿಂಗಪ್ಪ ಜಿ.ಎಂ, ಡಿಡಿಪಿಐ ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts