More

    ಮೈಸೂರು ನಗರದಲ್ಲಿ ಮಹಿಳೆಗೆ ಗೆಲುವು ಒಲಿದಿದ್ದು ಒಂದು ಬಾರಿ ಮಾತ್ರ…!

    ಸದೇಶ್ ಕಾರ್ಮಾಡ್ ಮೈಸೂರು
    ಮೈಸೂರು ನಗರ ವ್ಯಾಪ್ತಿಯ ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಮತ್ತು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳಲ್ಲಿ ಇದುವರೆಗೆ ನಡೆದ ಚುನಾವಣೆಗಳಲ್ಲಿ ಕೆಲವೇ ಕೆಲವು ಮಹಿಳೆಯರು ಸ್ಪರ್ಧಿಸಿದ್ದು, ಈ ಪೈಕಿ ಮಹಿಳೆಗೆ ಗೆಲುವಿನ ನಗೆ ಬೀರಲು ಸಾಧ್ಯವಾಗಿದ್ದು ಒಂದು ಬಾರಿ ಮಾತ್ರ..!

    ಮುಕ್ತಾರುನ್ನಿಸಾ ಬೇಗಂ ನಗರದ ಪ್ರಥಮ ಮಹಿಳಾ ಶಾಸಕಿಯಾಗಿ 1985ರ ಚುನಾವಣೆಯಲ್ಲಿ ನರಸಿಂಹರಾಜ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಅದಾದ ಬಳಿಕ ಯಾವುದೇ ಮಹಿಳೆಯರಿಗೆ ಗೆಲುವು ಒಲಿಯಲಿಲ್ಲ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುಕ್ತಾರುನ್ನಿಸಾ ಬೇಗಂ 15,552 ಮತಗಳನ್ನು ಪಡೆಯುವ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿದ್ದರು. ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಇ. ಮಾರುತಿರಾವ್ ಪವಾರ್ 11,388 ಮತಗಳನ್ನು ಪಡೆದರು. ಸ್ಪರ್ಧಾ ಕಣದಲ್ಲಿ ಒಟ್ಟು 22 ಅಭ್ಯರ್ಥಿ ಗಳು ಇದ್ದರು. 1985ರಲ್ಲಿ ನಡೆದ ಚುನಾವಣೆಯಲ್ಲಿ ಇವರು ನಗರದ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದರೆಂಬುದು ಕೂಡ ವಿಶೇಷ.

    1951, 1957ರಲ್ಲಿ ಸ್ಪರ್ಧಿಸದ ಮಹಿಳೆಯರು

    1951, 1957ರಲ್ಲಿ ನಡೆದ ಚುನಾವಣೆಯಲ್ಲಿ ಮಹಿಳೆಯರು ಸ್ಪರ್ಧಾ ಕಣಕ್ಕೆ ಇಳಿಯುವ ಮನಸ್ಸು ಮಾಡಲಿಲ್ಲ. 1962ರ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳು ಕಾಣಿಸಿಕೊಂಡರು. ಮೈಸೂರು ನಗರ ಉತ್ತರ ಕ್ಷೇತ್ರದಲ್ಲಿ ಪುಟ್ಟತಾಯಮ್ಮ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 295 ಮತಗಳನ್ನು ಪಡೆದರು. ಸ್ಪರ್ಧಾ ಕಣದಲ್ಲಿ ಒಟ್ಟು 9 ಅಭ್ಯರ್ಥಿಗಳ ಪೈಕಿ 7ನೇ ಸ್ಥಾನ ಪಡೆದರು. ಮೈಸೂರು ನಗರ ಕ್ಷೇತ್ರದಲ್ಲಿ ವೆಂಕಮ್ಮ ಪಾಲಹಳ್ಳಿ ಸೀತಾರಾಮಯ್ಯ ಪಿಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 1124 ಮತ ಗಳಿಸಿ ಕಣದಲ್ಲಿದ್ದ ಒಟ್ಟು 9 ಅಭ್ಯರ್ಥಿಗಳ ಪೈಕಿ 6ನೇ ಸ್ಥಾನ ಪಡೆದರು.

    1967, 1972 ಮತ್ತು 1978ರಲ್ಲಿ ನಡೆದ ಚುನಾವಣೆಯಲ್ಲಿ ಮಹಿಳೆಯರು ಸ್ಪರ್ಧಾ ಕಣದಿಂದ ದೂರ ಉಳಿದುಕೊಂಡರು. 1983 ರಲ್ಲಿ ನಡೆದ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸ್ಪರ್ಧಾ ಕಣಕ್ಕಿಳಿದರು. ಕೃಷ್ಣರಾಜ ಕ್ಷೇತ್ರದಿಂದ ಜೆ. ಕಮಲಾ ರಾಮನ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 7459 ಮತಗಳನ್ನು ಪಡೆದು ಒಟ್ಟು 13 ಅಭ್ಯರ್ಥಿಗಳ ಪೈಕಿ ಮೂರನೇ ಸ್ಥಾನ ಪಡೆದರು. ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ ಐಸಿಜೆ ಪಕ್ಷದ ಅಭ್ಯರ್ಥಿ ಎಚ್.ಆರ್. ಲಲಿತಾ 63 ಮತಗಳನ್ನು ಪಡೆದು 11ನೇ ಸ್ಥಾನ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಶಹಜಾದಿಯಮ್ಮ 29 ಮತಗಳನ್ನು ಗಳಿಸಿ ಕೊನೆಯ ಸ್ಥಾನ (13) ಪಡೆದರು. ಚಾಮರಾಜ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ವಿಮಲ 342 ಮತಗಳನ್ನು ಪಡೆದು ಒಟ್ಟು 10 ಅಭ್ಯರ್ಥಿಗಳ ಪೈಕಿ 6ನೇ ಸ್ಥಾನ ಪಡೆದರು.

    1989ರ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆ ನಡೆಸಲು ಮುಂದಾದ ಬಿಜೆಪಿ ಅಭ್ಯರ್ಥಿ ವಿ. ಮೈಥಿಲಿ 4363 ಮತಗಳನ್ನು ಗಳಿಸಿ 11 ಅಭ್ಯರ್ಥಿಗಳ ಪೈಕಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. 1994ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಕೆಸಿಪಿ ಅಭ್ಯರ್ಥಿಯಾಗಿ ಎಸ್. ಲತಾ 1017 ಮತಗಳನ್ನು ಪಡೆದು ಒಟ್ಟು 10 ಅಭ್ಯರ್ಥಿಗಳ ಪೈಕಿ 6ನೇ ಸ್ಥಾನ ಪಡೆದರು. ಕೆ.ಆರ್. ಕ್ಷೇತ್ರದಿಂದ ಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಟಿ.ಹೇಮಾವತಿ 294 ಮತಗಳನ್ನು ಪಡೆದು ಒಟ್ಟು 18 ಅಭ್ಯರ್ಥಿಗಳ ಪೈಕಿ 9ನೇ ಸ್ಥಾನ ಪಡೆದರು. 1999ರ ಚುನಾವಣೆಯಲ್ಲಿ ಮಹಿಳೆಯರಿಗೆ ಪ್ರಮುಖ ಪಕ್ಷಗಳಿಂದ ಸ್ಪರ್ಧಿಸಲು ಅವಕಾಶ ದೊರೆಯಲಿಲ್ಲ. ಅಲ್ಲದೆ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಮಹಿಳೆಯರು ಆಸಕ್ತಿ ತೋರಲಿಲ್ಲ.

    2004ರಲ್ಲಿ ನಡೆದ ಚುನಾವಣೆಯಲ್ಲಿ ನರಸಿಂಹರಾಜ ಕ್ಷೇತ್ರದಿಂದ ಸ್ಪರ್ಧಿಸಿದ್ದ ಯುಎಸ್‌ವೈಪಿ ಅಭ್ಯರ್ಥಿ ಪುಷ್ಪ 510 ಮತಗಳನ್ನು ಪಡೆದು 10 ಅಭ್ಯರ್ಥಿಗಳ ಪೈಕಿ 9ನೇ ಸ್ಥಾನ ಪಡೆದರು. 2008ರಲ್ಲಿ ನಡೆದ ಚುನಾವಣೆಯಲ್ಲಿ ನರಸಿಂಹರಾಜ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಮಲಾ ಪೀಟರ್ ಸ್ಪರ್ಧಿಸಿ 188 ಮತ ಪಡೆದು 16 ಅಭ್ಯರ್ಥಿಗಳ ಪೈಕಿ 14ನೇ ಸ್ಥಾನ ಸಂಪಾದಿಸಿದ್ದರು.

    2013ರ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದ ಮೂವರು ಮಹಿಳೆಯರು ಕಣಕ್ಕಿಳಿದರು. ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂ. ಭಾರತಿ 250 ಮತಗಳನ್ನು ಪಡೆದು ಸ್ಪರ್ಧಾ ಕಣದಲ್ಲಿದ್ದ ಒಟ್ಟು 20 ಅಭ್ಯರ್ಥಿಗಳ ಪೈಕಿ 12ನೇ ಸ್ಥಾನ ಪಡೆದರು. ಎಸ್‌ಯುಸಿಐ ಪಕ್ಷದ ಅಭ್ಯರ್ಥಿ ಎಂ. ಉಮಾದೇವಿ 231 ಮತಗಳನ್ನು ಪಡೆದು 13ನೇ ಸ್ಥಾನ, ಎಸ್ಪಿ ಪಕ್ಷದ ಅಭ್ಯರ್ಥಿ ಎಂ.ಎಸ್. ಹೇಮಾವತಿ 223 ಮತಗಳನ್ನು ಪಡೆದು 14ನೇ ಸ್ಥಾನ ಪಡೆದರು.

    2018ರಲ್ಲಿ ಹಲವು ಮಹಿಳೆಯರು ಸ್ಪರ್ಧೆ

    2018ರ ಚುನಾವಣೆಯಲ್ಲಿ ಕೃಷ್ಣರಾಜ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ಪಕ್ಷೇತರ ಅಭ್ಯರ್ಥಿ ಸುಚಿತ್ರಾ 289 ಮತಗಳನ್ನು ಪಡೆದು 8ನೇ ಸ್ಥಾನ, ಸ್ವರಾಜ್ ಪಕ್ಷದ ಬಾನು ಮೋಹನ್ 99 ಮತಗಳನ್ನು ಪಡೆದು 16ನೇ ಸ್ಥಾನ ಪಡೆದುಕೊಂಡರು. ಚಾಮರಾಜ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ಆಮ್ ಆದ್ಮಿ ಪಾರ್ಟಿಯ ಮಾಲವಿಕ ಗುಬ್ಬಿವಾಣಿ 483 ಮತಗಳನ್ನು ಪಡೆದು 5ನೇ ಸ್ಥಾನ ಪಡೆದರು. ಪಕ್ಷೇತರ ಅಭ್ಯರ್ಥಿ ಆರ್. ಮಾಲಿನಿ 202 ಮತಗಳನ್ನು ಪಡೆದು 8ನೇ ಸ್ಥಾನ, ಶಾಂತಿ ಡಿ. ಅವರಾದಿ ಎಐಎಂಇಪಿ ಪಕ್ಷದಿಂದ ಸ್ಪರ್ಧಿಸಿ 104 ಮತಗಳನ್ನು ಪಡೆದು 12ನೇ ಸ್ಥಾನ ಪಡೆದುಕೊಂಡರು. ಎನ್.ಕೆ. ಕಾವೇರಿಯಮ್ಮ 83 ಮತಗಳನ್ನು ಪಡೆದು ಕೊನೆ ಸ್ಥಾನ (14) ಪಡೆದರು. ನರಸಿಂಹರಾಜ ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ಮಂಗಳಗೌರಿ ಎಐಎಂಇಪಿ ಪಕ್ಷದಿಂದ ಸ್ಪರ್ಧಿಸಿ 118 ಮತಗಳನ್ನು ಪಡೆದು 14ನೇ ಸ್ಥಾನ ಪಡೆದರು.

    ಈ ಬಾರಿ ಚಾಮರಾಜ ಕ್ಷೇತ್ರದಿಂದ ಆಮ್ ಆದ್ಮಿ ಪಾರ್ಟಿಯ ಮಾಲವಿಕ ಗುಬ್ಬಿವಾಣಿ, ಉತ್ತಮ ಪ್ರಜಾಕೀಯ ಪಾರ್ಟಿಯ ಪ್ರಭಾ ನಂದೀಶ್, ಎಸ್‌ಯುಸಿಐ ಅಭ್ಯರ್ಥಿ ಜಿ.ಎಸ್. ಸೀಮಾ, ಕೃಷ್ಣರಾಜ ಕ್ಷೇತ್ರದಿಂದ ಆಮ್ ಆದ್ಮಿ ಪಾರ್ಟಿಯ ವೈ. ಜಯಶ್ರೀ, ಉತ್ತಮ ಪ್ರಜಾಕೀಯ ಪಕ್ಷದ ಎಸ್. ಸುಮಲತಾ, ಎಸ್‌ಯುಸಿಐನ ಪಿ.ಎಸ್. ಸಂಧ್ಯಾ, ನರಸಿಂಹರಾಜ ಕ್ಷೇತ್ರದಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ರಿಹಾನಾ ಬಾನು, ಉತ್ತಮ ಪ್ರಜಾಕೀಯ ಪಾರ್ಟಿಯ ಲೀಲಾ ಶಿವಕುಮಾರ್, ಆಮ್ ಆದ್ಮಿ ಪಾರ್ಟಿಯ ಧರ್ಮಶ್ರೀ ಸ್ಪರ್ಧಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts