More

    ಮೈಸೂರಿನಿಂದ ರಣಕಹಳೆ ಮೊಳಗಿಸಿದ ಜೆಡಿಎಸ್

    ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಮೈಸೂರಿನಿಂದಲೇ ರಣಕಹಳೆ ಮೊಳಗಿಸಿದೆ. ಟಿಕೆಟ್ ಆಕಾಂಕ್ಷಿಗಳು, ಮುಖಂಡರಿಗೆ ಧೈರ್ಯ ತುಂಬಿ ಎಲೆಕ್ಷನ್‌ಗೆ ಸಜ್ಜಾಗಲು ಕರೆಕೊಟ್ಟಿದೆ.
    ನಗರದ ಹೊರವಲಯದ ಐಷಾರಾಮಿ ರೆಸಾರ್ಟ್‌ನಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ಜೆಡಿಎಸ್ ಸಮಾಲೋಚನೆ ಸಭೆ ಗುರುವಾರ ಸಂಜೆ ಸಂಪನ್ನಗೊಂಡಿತು.
    ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳು, ಜಿಲ್ಲಾ ಮಟ್ಟದ ಪ್ರಮುಖ ಮುಖಂಡರು ಒಂದೇ ಸೂರಿನಡಿ ಸಮಾಲೋಚಿಸಿದರು. ಪಕ್ಷದ ಸ್ಥಳೀಯ ಮಟ್ಟದ ಸಮಸ್ಯೆಗಳು, ಸವಾಲುಗಳು, ಸಂಘಟನೆಯ ಬಲಾಬಲ, ಎಲೆಕ್ಷನ್ ತಂತ್ರಗಳು ಹೇಗೆ ಇರಬೇಕು, ಜಾತಿ ಸಮೀಕರಣ ಇನ್ನಿತರ ವಿಷಯಗಳ ಕುರಿತು ಮುಕ್ತವಾಗಿ ಚರ್ಚೆ ಮಾಡಲಾಯಿತು.


    ಬಳಿಕ ಜಿಲ್ಲಾವಾರು ಟಿಕೆಟ್ ಆಕಾಂಕ್ಷಿಗಳು, ಮುಖಂಡರನ್ನು ಪ್ರತ್ಯೇಕವಾಗಿ ಕರೆದು ಎಚ್.ಡಿ.ಕುಮಾರಸ್ವಾಮಿ ಸಭೆ ನಡೆಸಿದರು. ಬಳಿಕ ಸಮಾರೋಪದಲ್ಲಿ ಮುಂದಿನ ಚುನಾವಣೆಗೆ ಹೇಗೆ ತಯಾರಿ ಆಗಬೇಕು. ಯಾವ ರೀತಿ ಕಾರ್ಯತಂತ್ರ ರೂಪಿಸಬೇಕು ಎಂಬುದರ ಕುರಿತು ಸಲಹೆ ಸೂಚನೆ ನೀಡಿದರು.
    ದೊಡ್ಡ ಗೌಡ್ರು ಎಂದು ಹೆಸರಾಗಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಗುರುವಾರ ಬೆಳಗ್ಗೆ ಆಗಮಿಸಿ, ಹುರಿದುಂಬಿಸಿದರು. 82 ವಯಸ್ಸಿನಲ್ಲೂ ಛಲಬಿಡದ ದೇವೇಗೌಡರು, ಪಕ್ಷದ ಉಳಿವಿಗಾಗಿ ಹೋರಾಟ ಮಾಡುವೆ. ಮುಂದಿನ ಚುನಾವಣೆಯಲ್ಲಿ ನಾನು ನಿಮ್ಮೊಂದಿಗೆ ಇರುವೆ. ಎಲ್ಲರೂ ಐಕ್ಯತೆಯಿಂದ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದು ಆತ್ಮವಿಶ್ವಾಸವನ್ನು ತುಂಬುವ ಕೆಲಸ ಮಾಡಿದರು.


    ಎಲ್ಲ ರೀತಿಯಲ್ಲೂ ಪಕ್ಷ ಸಜ್ಜು:
    ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಮುಂದಿನ ಚುನಾವಣೆಗೆ ಪಕ್ಷವೂ ಎಲ್ಲ ರೀತಿಯಲ್ಲೂ ಸಜ್ಜಾಗಿದೆ. ಸ್ವತಂತ್ರ ಸರ್ಕಾರ ರಚನೆ ಮಾಡಬೇಕು ಎಂಬುದು ಎಲ್ಲರ ಬಯಕೆ. ಎಚ್.ಡಿ.ದೇವೇಗೌಡರ ಕನಸು-ನನಸು ಮಾಡಬೇಕು ಎಂಬುದೇ ನಮ್ಮ ಗುರಿ ಎಂದರು.
    ಜೆಡಿಎಸ್ ಬದುಕಿರುವುದು ರೈತರು ಹಾಗೂ ದೀನ ದಲಿತರಿಗಾಗಿ. ತಳ ಸಮುದಾಯದರಿಗೂ ರಾಜಕೀಯ ಮೀಸಲಾತಿ ದೊರಕಿಸಿಕೊಟ್ಟಿರುವುದು ಎಚ್.ಡಿ.ದೇವೇಗೌಡರು ಮಾತ್ರ. ಈಗಲೂ ಬಹಳಷ್ಟು ಜನರು ಇದರ ಉಪಯೋಗ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.


    ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಸೇರಿ ಇಡೀ ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ಬಲವಿಲ್ಲ ಎಂಬ ಭಾವನೆ ಇದೆ. ಆದರೆ, ಇಲ್ಲಿ ಕ್ರಿಯಾಶೀಲವಾಗಿ ಕೆಲಸ ನಡೆಯುತ್ತಿದೆ. ಸಂಘಟನೆಯೂ ಬಲಗೊಳ್ಳುತ್ತಿದ್ದು, ಹೀಗಾಗಿ, ಇಲ್ಲಿ ಕನಿಷ್ಠ 35 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಎಚ್.ಡಿ.ದೇವೇಗೌಡರ ಭಾಷಣ ಕೇಳಿ ಭಾವುಕರಾದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಪ್ರಾಣವನ್ನು ಒತ್ತೆಯಿಟ್ಟಾದರೂ ಪಕ್ಷವನ್ನು ಉಳಿಸಿಕೊಳ್ಳುತ್ತೇವೆ. ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಬೇಕು, ಅಧಿಕಾರ ನಡೆಸಬೇಕೆಂಬ ಆಸೆಯಿಲ್ಲ. ದೇಶದ ಕಲ್ಯಾಣಕ್ಕಾಗಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts