More

    ಮೇಲಿನಕುರುವಳ್ಳಿ ಬಂಡೆ ಸಮಸ್ಯೆ; ಅಧಿಕಾರಿಗಳಿಂದ ಡೆಡ್‌ಲೈನ್ ಉಪೇಕ್ಷೆ: ಉಪವಾಸ ಸತ್ಯಾಗ್ರಹ ಆರಂಭಿಸಿದ ಕಿಮ್ಮನೆ

    ತೀರ್ಥಹಳ್ಳಿ: ಮೇಲಿನಕುರುವಳ್ಳಿ ಬಂಡೆ ಸಮಸ್ಯೆ ಪರಿಹಾರಕ್ಕೆ ನೀಡಿದ್ದ ಗಡುವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಉಪೇಕ್ಷೆ ಮಾಡಿದ್ದರಿಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಶುಕ್ರವಾರ ಬೆಳಗ್ಗೆ 24 ಗಂಟೆ ಅವಧಿಯ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಗುರುವಾರ ಪ್ರತಿಭಟನೆ ವೇಳೆ ಸಮಸ್ಯೆ ಇತ್ಯರ್ಥಪಡಿಸಲು ಗಡುವು ವಿಧಿಸಿದ್ದ ಅವರು, ಅಧಿಕಾರಿಗಳು ನಿರ್ಲಕ್ಷೃ ಮಾಡಿದ್ದರಿಂದ ಸಭೆಯಲ್ಲಿ ಘೋಷಣೆ ಮಾಡಿದಂತೆ ಉಪವಾಸ ಸತ್ಯಾಗ್ರಹ ಆರಂಭಿಸಿದರು.
    ಸತ್ಯಾಗ್ರಹ ಆರಂಭಿಸಿರುವ ಕಾರ್ಮಿಕರ ಸಮಸ್ಯೆ ಕೇಳುವ ಕೇಳುವ ಸೌಜನ್ಯ ತೋರದ ಜಿಲ್ಲಾಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಿಮ್ಮನೆ ರತ್ನಾಕರ್, ಉಪವಾಸ ಸತ್ಯಾಗ್ರಹ ಮುಂದುವರೆಸುವ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದೂ ತಿಳಿದು ಬಂದಿದೆ.
    ಅಧಿಕಾರಿಗಳು ದೇಶದ ಕಾರ್ಯಾಂಗದ ಭಾಗವಾಗಿದ್ದೇವೆ ಎಂಬುದನ್ನು ಮರೆತು ರಾಜಕಾರಣಿಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ ಅವರು, ಬಂಡೆ ಕಾರ್ಮಿಕರಿಗೆ ನ್ಯಾಯ ದೊರಕಿಸುವವರೆಗೆ ಹೋರಾಟ ಅನಿವಾರ್ಯವಾಗಿದೆ. ಗೃಹ ಸಚಿವರ ಈ ಕ್ಷೇತ್ರದಲ್ಲಿ ಬಿಜೆಪಿಯವರಿಗೆ ಒಂದು ನ್ಯಾಯವಾದರೆ ಇತರರಿಗೆ ಬೇರೆಯೇ ನ್ಯಾಯವಾಗಿದೆ. ಇದರಿಂದಾಗಿ ದುಡಿದು ಬದುಕುತ್ತಿರುವ ಶ್ರಮಜೀವಿಗಳು ಬೀದಿಗೆ ಬರುವಂತಾಗಿದೆ ಎಂದು ದೂರಿದರು.
    ಕರೆ ಮಾಡಿದ ಜಿಲ್ಲಾಧಿಕಾರಿ: ಜಿಲ್ಲಾಧಿಕಾರಿ ಸೆಲ್ವಮಣಿ ದೂರವಾಣಿ ಮೂಲಕ ಕಿಮ್ಮನೆ ರತ್ನಾಕರ್ ಅವರೊಂದಿಗೆ ಮಾತನಾಡಿದ್ದು, ಸ್ಥಳಕ್ಕೆ ಹಿರಿಯ ಅಧಿಕಾರಿಗಳ ತಂಡ ಕಳುಹಿಸಿ ಅವರಿಂದ ವರದಿ ಪಡೆದು ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಎಂದು ಗೊತ್ತಾಗಿದೆ. ಆದರೆ ಸಿದ್ಧ ಇರುವ ಸುಮಾರು ಒಂದು ಸಾವಿರ ಟನ್ ಕಲ್ಲು ಸಾಮಗ್ರಿಗಳಿಗೆ ರಾಯಲ್ಟಿ ಪಾವತಿ ಮಾಡಿಸಿಕೊಂಡು ಸಾಗಿಸಲು ಅನುಮತಿ ನೀಡಬೇಕು ಎಂಬ ಕಾರ್ಮಿಕರ ಮನವಿಯನ್ನು ನಿರಾಕರಿಸಿದರು ಎಂದು ಗೊತ್ತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts