More

    ಮೇಯರ್-ಉಪಮೇಯರ್ ಚುನಾವಣೆ ಮತ್ತೆ ನನೆಗುದಿಗೆ?

    ಬೆಳಗಾವಿ: ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆ ಒಂದಿಲ್ಲೊಂದು ಕಾರಣಗ ಳಿಂದಾಗಿ ಮುಂದಕ್ಕೆ ಹೋಗುತ್ತಿದ್ದು, ಮೇಯರ್ ಮತ್ತು ಉಪಮೇಯರ್ ಆಗಲು ಕನಸು ಕಾಣುತ್ತಿರುವ ನಗರ ಸೇವಕರಲ್ಲಿ ಗುರುವಾರ ನಡೆದಿರುವ ಬೆಳವಣಿಗೆಯಿಂದಾಗಿ ಮತ್ತೆ ನಿರಾಸೆ ಮೂಡಿದೆ.

    6 ತಿಂಗಳ ಹಿಂದೆ ನಡೆದ ಮಹಾನಗರ ಪಾಲಿ ಕೆಯ ಚುನಾವ ಣೆಯಲ್ಲಿ ನಗರ ಸೇವಕರು ಚುನಾಯಿತರಾಗಿದ್ದರು. ಆದರೆ, ಹೊಸ ಅಧಿಸೂಚನೆ ಹಾಗೂ ಮೀಸಲಾತಿ ಪ್ರಕಟವಾದ ನಂತರ ಮೇಯರ್- ಉಪಮೇಯರ್ ಚುನಾವಣೆ ನಡೆಯಬೇಕಿತ್ತು. ತಾಂತ್ರಿಕ ಕಾರಣಗಳಿಂದ ಮತ್ತೆ ಮೇಯರ್, ಉಪಮೇಯರ್ ಚುನಾವಣೆ ಮುಂದಕ್ಕೆ ಹೋಗಿತ್ತು. ಆದರೆ, ಪಾಲಿಕೆ ಅಧಿಕಾರಿಗಳು ಫೆ.5 ರಂದು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು, ಶೀಘ್ರ ಮೇಯರ್- ಉಪಮೇಯರ್ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದರು.

    ರಾಜ್ಯ ಸರ್ಕಾರ ಪ್ರಕಟಿಸಿರುವ ರಾಜ್ಯಪತ್ರ(ಗೆಜೆಟ್)ದಲ್ಲಿ ಮಹಾನಗರ ಪಾಲಿಕೆಯ ನಗರ ಸೇವಕರಾಗಿ ಆಯ್ಕೆಯಾಗಿರುವ ಸದಸ್ಯರ ಹೆಸರುಗಳನ್ನು ಮಾತ್ರ ಮುದ್ರಿಸಲಾಗಿದೆ. ಆದರೆ, ಈ ಸೇವಕರು ಯಾವ ಪಕ್ಷದಿಂದ ಗೆದ್ದಿದ್ದಾರೆ. ಅವರ ಮೀಸಲಾತಿ ಯಾವುದು ಎಂಬುದರ ಕುರಿತು ಸ್ಪಷ್ಟ ಉಲ್ಲೇಖಗಳಿಲ್ಲ. ಆದ್ದರಿಂದ ಎಲ್ಲ ವಿವರಗಳನ್ನು ಒಳಗೊಂಡ ಕರ್ನಾಟಕ ವಿಶೇಷ ರಾಜ್ಯಪತ್ರ(ಗೆಜೆಟ್) ದ ಪ್ರತಿ ಒದಗಿಸಬೇಕು ಎಂದು ಪ್ರಾದೇಶಿಕ ಆಯುಕ್ತರು ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಹೊಸದಾಗಿ ಕರ್ನಾಟಕ ವಿಶೇಷ ರಾಜ್ಯಪತ್ರ ಪ್ರಕಟಗೊಂಡ ಬಳಿಕವೇ ಚುನಾವಣೆ ನಡೆಯಲಿರುವುದರಿಂದ ಪಾಲಿಕೆ ಅಧಿಕಾರಿಗಳು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯ ಬೇಕಾಗಿದೆ. ಈ ಎಲ್ಲ ಬೆಳವಣಿಗೆಯಿಂದಾಗಿ ಮತ್ತೇ ಚುನಾವಣೆ ಮುಂದಕ್ಕೆ ಹೋಗುವುದು ಬಹುತೇಕ ಖಚಿತವಾಗಿದೆ.

    ಹೈಕೋರ್ಟ್ ಅಂಗಳಕ್ಕೆ ಮೀಸಲಾತಿ ಗೊಂದಲ: ಸರ್ಕಾರ 2019ರ ಮೀಸಲಾತಿ ಪ್ರಕಾರ ಮೇಯರ್(ಸಾಮಾನ್ಯ ಮಹಿಳೆ), ಉಪಮೇಯರ್ (ಒಬಿಸಿ-ಬಿ ಮಹಿಳೆ) ಸ್ಥಾನಕ್ಕೆ ಚುನಾವಣೆ ನಡೆಸಬೇಕು ಎಂದು ಹೇಳಿದೆ. ಆದರೆ, ಸರ್ಕಾರ-2021ರಲ್ಲಿ ಘೋಷಣೆ ಮಾಡಿರುವ ಮೀಸಲಾತಿ ಪ್ರಕಾರ ಮೇಯರ್ ಮತ್ತು ಉಪಮೇಯರ್ ಪ್ರಕಾರ ಚುನಾವಣೆ ನಡೆಸಬೇಕು ಎಂದು ವಾರ್ಡ್ ನಂ-7ನ ಪಕ್ಷೇತರ ಅಭ್ಯರ್ಥಿ ಶಂಕರ ಪಾಟೀಲ ಹೈಕೋರ್ಟ್ ಮೊರೆ ಹೋಗಿದ್ದಾರೆ. ಆದರೆ, ಇನ್ನೂ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುವುದು ಬಾಕಿಯಿದೆ. ಸರ್ಕಾರ ಯಾವಾಗ ಹೊಸ ರಾಜ್ಯಪತ್ರ ಪ್ರಕಟಿಸಲಿದೆ?. ಜತೆಗೆ, ಪ್ರಾದೇಶಿಕ ಆಯುಕ್ತರು, ಹೈಕೋರ್ಟ್ ತೀರ್ಪು ಬಂದ ಬಳಿಕವೇ ಚುನಾವಣೆ ನಡೆಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

    ಮಾಹಿತಿ ನೀಡಿದರೆ ಶೀಘ್ರ ಚುನಾವಣೆ: ಮಹಾನಗರ ಪಾಲಿಕೆ ಆಯಕ್ತರು ಮೀಸಲಾತಿ ಹಾಗೂ ಪಕ್ಷದ ವಿವರಗಳನ್ನು ಒಳಗೊಂಡ ಮಾಹಿತಿ ನೀಡಿದರೆ, ಕಾನೂನು ಪ್ರಕಾರ 10-12 ದಿನಗಳಲ್ಲಿ ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆಸಲಾಗುವುದು ಎಂದು ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲ್ ಬಿಸ್ವಾಸ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಪ್ರಾದೇಶಿಕ ಆಯುಕ್ತರು ಬರೆದಿರುವ ಪತ್ರ ತಲುಪಿದೆ. ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದು, ಆದಷ್ಟು ಬೇಗ ರಾಜ್ಯಪತ್ರ ಪ್ರಕಟಿಸಲು ಕೋರಲಾಗುವುದು. ವಿಶೇಷ ರಾಜ್ಯಪತ್ರ ಪ್ರಕಟವಾದ ಬಳಿಕ ಚುನಾವಣೆ ನಡೆಸುವಂತೆ ಮತ್ತೇ ಪ್ರಾದೇಶಿಕ ಆಯುಕ್ತರಿಗೂ ಮನವಿ ಮಾಡಲಾಗುವುದು.
    | ರುದ್ರೇಶ ಘಾಳಿ, ಆಯುಕ್ತರು, ಮಹಾನಗರ ಪಾಲಿಕೆ, ಬೆಳಗಾವಿ

    | ರಾಯಣ್ಣ ಆರ್.ಸಿ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts