More

    ಮೇಳೈಸಿದ ಸಾಂಸ್ಕೃತಿಕ ವೈಭವ

    ಗಜೇಂದ್ರಗಡ: ಪಟ್ಟಣದ ಸರ್ಕಾರಿ ಆಸ್ಪತ್ರೆಯ ಎದುರಿನ ಬಯಲು ಜಾಗದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಯುವಜನ ಮೇಳದಲ್ಲಿ ಶನಿವಾರ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತು.

    ಮೈಸೂರು, ಕಲಬುರಗಿ, ಬೆಳಗಾವಿ, ಬೆಂಗಳೂರು ವಿಭಾಗಗಳಿಂದ ಆಗಮಿಸಿದ ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶಿಸಿದರು.

    ಶುಕ್ರವಾರ ರಾತ್ರಿ ಪ್ರಥಮ ಸ್ಪರ್ಧೆಯಾಗಿ ಜನಪದ ನೃತ್ಯ ನಡೆಯಿತು. ಬೆಂಗಳೂರು ವಿಭಾಗದ ಕಲಾವಿದರು ಗೊರವರ ಕುಣಿತದ ಗತ್ತುಗಮ್ಮತ್ತು ಪ್ರದರ್ಶಿಸಿದರು. ಚಾಮರಾಜನಗರ ಜಿಲ್ಲೆಯ ಕಂಸಾಳೆ, ಶಿವಮೊಗ್ಗದ ಲಂಬಾಣಿ ನೃತ್ಯ, ಬೆಳಗಾವಿಯ ಜನಪದ ನೃತ್ಯಕ್ಕೆ ಪ್ರೇಕ್ಷಕರು ಮನಸೋತು ಚಪ್ಪಾಳೆಯ ಸುರಿಮಳೆಗೈದರು.

    ಯುವಕ ಯುವತಿಯರಿಗೆ ಪ್ರತ್ಯೇಕವಾಗಿ ಕೋಲಾಟ ಸ್ಪರ್ಧೆ ಜರುಗಿತು. ನಾಲ್ಕು ವಿಭಾಗಗಳಲ್ಲಿ ಕಲಾವಿದರು ತೇರು ಕಟ್ಟುವುದು, ಹಗ್ಗ ಹೆಣೆಯುವುದು, ಜತ್ತಿಗೆ ಕಟ್ಟುವುದು ಮುಂತಾದ ಕಸರತ್ತು ಮಾಡಿದರು. ದೊಡ್ಡಾಟ, ಸಣ್ಣಾಟ ಪ್ರದರ್ಶನವಂತೂ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.

    ಶನಿವಾರ ಬೆಳಗ್ಗೆ ಪುರುಷರ ವಿಭಾಗದ ಲಾವಣಿ ಪದಗಳ ಸ್ಪರ್ಧೆ ನಡೆಯಿತು. ಚಿಕ್ಕಬಳ್ಳಾಪುರದ ಜಯಗೋಪಾಲ, ಕೊಪ್ಪಳದ ನಿಂಗಪ್ಪ ಸೊಲ್ಲಾಪೂರ, ಗದಗನ ಮುತ್ತಣ್ಣ ಅಂಗಡಿ, ರಾಯಚೂರಿನ ಸಂಕೇತ ಕುಮಾರ, ಹಾವೇರಿಯ ನಿಂಗಪ್ಪ ಸೊಲ್ಲಾಪುರ ಅವರು ಹಾಡಿದ ಲಾವಣಿ ಪದಗಳು ದೇಶಾಭಿಮಾನದ ಪ್ರತೀಕವಾಗಿದ್ದವು.

    ರಂಗಗೀತೆ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಂಗೀತಾ, ಚಿಕ್ಕಮಂಗಳೂರಿನ ರಂಗಿಣಿ, ಬಳ್ಳಾರಿಯ ಉಷಾ, ಬೆಳಗಾವಿಯ ಲಕ್ಷ್ಮಿಬಾಯಿ ಮಾದರ, ಗದಗ ಜಿಲ್ಲೆಯ ರೇಣುಕಾ ಬೇಲೇರಿಯವರ ಗೀತೆಗಳು ನೆರೆದವರ ಮನ ರಂಜಿಸಿತು.

    ಭಾವಗೀತೆ ಸ್ಪರ್ಧೆಯಲ್ಲಿ ಚಿಕ್ಕಬಳ್ಳಾಪುರದ ಮಹೇಶಕುಮಾರ ಶಿಡ್ಲಗಟ್ಟ, ಚಾಮರಾಜನಗರದ ಚರಣ ಹಾಗೂ ಗದಗ ಜಿಲ್ಲೆಯ ಮೈಲಾರಿ ಕಟ್ಟಿಮನಿ ಅವರ ಗಾಯನ ಭಾವಪರವಶಗೊಳಿಸಿತು. ಯುವಕ, ಯುವತಿಯರ ಏಕಾಪಾತ್ರಾಭಿಯವಂತೂ ಪ್ರೇಕ್ಷಕರನ್ನು ಬೆರಗುಗೊಳಿಸಿತು, ಆಧುನಿಕ ಭರಾಟೆಗೆ ಸಿಲುಕಿ ಮಾಯವಾಗಿರುವ ಬೀಸುಕಲ್ಲಿನ ಪದ, ಸೋಬಾನೆ ಗೀತೆ ವೇಳೆ ವೇದಿಕೆಯಲ್ಲಿ ಬೀಸುವ ಕಲ್ಲು ರಾರಾಜಿಸಿದವು.

    ಮಲೆಮಾದೇಶ್ವರನ ಬೀಸು ಕಂಸಾಳೆ ನೃತ್ಯ, ಪೂಜಾ ಕುಣಿತ, ಪಟಾ ಕುಣಿತ, ಕಂಗೀಲು ನೃತ್ಯ, ಕೊಡಗಿನ ಪಾರಂಪರಿಕ ಉಮ್ಮತ್ತಾಟ್ ನೃತ್ಯ, ಚಂಡಿಕಾ ದೇವಿ ಮಾರಿಯಮ್ಮ ಹಾಗೂ ಯಲ್ಲಮ್ಮನ ಪೂಜಿಸುವ ಕರಗ ಕೋಲಾಟ, ಸೋಲಿಗರ ನೃತ್ಯ, ವೀರಗಾಸೆ ನೃತ್ಯ, ಡೊಳ್ಳು ಕುಣಿತ, ಲಂಬಾಣಿ ನೃತ್ಯದಂತಹ ಜಾನಪದ ಕಲೆಗಳನ್ನು ಯುವಕ/ಯುವತಿಯರು ಪ್ರದರ್ಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts