More

    ಮೆಣಸೆ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆ ಸಿದ್ಧ

    ಶೃಂಗೇರಿ: ಗ್ರಾಮಗಳಲ್ಲಿ ಸೂಕ್ತ ರಸ್ತೆ ಹಾಗೂ ಇತರ ಕಾಮಗಾರಿಗಳ ಕುರಿತು 2022ರಿಂದ 2027ರವರೆಗೆ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ಮೆಣಸೆ ಗ್ರಾಪಂ ಅಧ್ಯಕ್ಷ ನವೀನ್ ಕಲ್ಕಟ್ಟೆ ತಿಳಿಸಿದರು.

    ಸೋಮವಾರ ಮೆಣಸೆ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ ಗ್ರಾಪಂ ವ್ಯಾಪ್ತಿಯಲ್ಲಿ ವಸತಿಹೀನರ ಸಂಖ್ಯೆ ಹೆಚ್ಚಿದೆ. ಬಡವರ ವಸತಿ ಯೋಜನೆಗಾಗಿ ಇಲಾಖೆ ಸೂಕ್ತವಾದ ಜಾಗವನ್ನು ಗುರುತಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕಿದೆ. ಆಗ ಮಾತ್ರ ವಸತಿಹೀನರಿಗೆ ಸೌಲಭ್ಯ ನೀಡಲು ಗ್ರಾಪಂಗಳಿಗೆ ಸುಲಭವಾಗುತ್ತದೆ ಎಂದರು.

    ಪಿಡಿಒ ನಾಗಭೂಷಣ್ ಮಾತನಾಡಿ, ಜಿಪಂ, ತಾಪಂಗಳಲ್ಲಿ ಜನಪ್ರತಿನಿಧಿಗಳು ಇಲ್ಲದ ಕಾರಣ ಸರ್ಕಾರದ ಆದೇಶದಂತೆ ಗ್ರಾಪಂ ವ್ಯಾಪ್ತಿಯಲ್ಲಿ ಮುಂದೆ ಆಗಬೇಕಾಗಿರುವ ಕಾಮಗಾರಿಗಳನ್ನು ಗುರುತಿಸಿದ್ದು ಅವುಗಳನ್ನು ಸಂಬಂಧಪಟ್ಟ ಇಲಾಖೆಗೆ ಶೀಘ್ರ ಕಳಿಸಲಾಗುವುದು ಎಂದು ಹೇಳಿದರು.

    ತಾಲೂಕು ರೈತ ಸಂಘದ ಅಧ್ಯಕ್ಷ ಕಾನುವಳ್ಳಿ ಚಂದ್ರಶೇಖರ್ ಮಾತನಾಡಿ, ಅರಣ್ಯ ಕಾಯ್ದೆಗಳಿಂದ ಕೃಷಿಕರು ಹಾಗೂ ಜನಸಾಮಾನ್ಯರ ಪಾಡು ಆಯೋಮಯವಾಗಿದೆ. ರೈತರು ಅರ್ಜಿ ನಮೂನೆ 52 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿದರೂ ಅರಣ್ಯ ಇಲಾಖೆ ಪ್ರಸ್ತುತ ಕಲ್ಲುಗಳನ್ನು ನೆಟ್ಟು ಗೊಂದಲ ಉಂಟುಮಾಡುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಬಡವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

    ಗ್ರಾಪಂ ಸದಸ್ಯ ಮಂಜುನಾಥ್ ಮೌಳಿ ಮಾತನಾಡಿ, ಸರ್ಕಾರವು 41 ವಿಷಯಗಳನ್ನು ಮುಂದಿಟ್ಟು ಜನಸಾಮಾನ್ಯರನ್ನು ವಂಚಿಸುತ್ತಿದೆ. ಒತ್ತುವರಿ ಜಾಗ ಪರಿಶೀಲಿಸಿ ವಿಲೇವಾರಿ ಮಾಡಬೇಕು ಎಂದು ಕಡೂರಿನ ವ್ಯವಸ್ಥಾಪನಾ ಅಧಿಕಾರಿಗಳಿಗೆ ಅರ್ಜಿ ನೀಡಿದರೂ ಯಾವುದೆ ಉತ್ತರ ಸಿಗುತ್ತಿಲ್ಲ. ಅವರು ಶೀಘ್ರ ಅರ್ಜಿಗಳನ್ನು ಪರಿಶೀಲಿಸುವತ್ತ ಹೆಚ್ಚಿನ ಗಮನ ವಹಿಸಬೇಕು ಎಂದರು.

    ಸಭೆಯಲ್ಲಿ ಗ್ರಾಪಂ ವ್ಯಾಪ್ತಿಯ ಕಾಮಗಾರಿ ಪಟ್ಟಿಯ ಮಾಹಿತಿಯನ್ನು ಸಿಬ್ಬಂದಿ ಮಂಜು ನೀಡಿದರು. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಸಹನಾ ರಮೇಶ್, ಸದಸ್ಯರಾದ ಸಂಧ್ಯಾ, ತ್ರಿಮೂರ್ತಿ, ಸವಿತಾ, ರಾಜು ಶೂನ್ಯ, ಕವಿತಾ, ಸುಷ್ಮಾ, ತಾಲೂಕು ರೈತ ಸಂಘದ ಪದಾಧಿಕಾರಿಗಳಾದ ಚನ್ನಕೇಶವ, ಬಂಡ್ಲಾಪುರ ಶ್ರೀಧರ್, ಜಿ.ಅನಂತಯ್ಯ ಉಪಸ್ಥಿತರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts