More

  ಲೋಕದ ಉದ್ಧಾರಕ್ಕಾಗಿ ಭಗವಂತ ಇಚ್ಛಾನುಸಾರ ಶರೀರ ಧಾರಣೆ: ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ

  ಶೃಂಗೇರಿ: ಜೀವಾತ್ಮ ಒಂದು ಶರೀರವನ್ನು ಬಿಟ್ಟು ಮತ್ತೊಂದು ಶರೀರ ಧರಿಸುತ್ತಾನೆ. ಜೀವಾತ್ಮನ ಶರೀರಧಾರಣೆ ಕರ್ಮದ ಅನುಸಾರವಾಗಿ ಹುಟ್ಟುತ್ತದೆ. ಆದರೆ ಭಗವಂತ ಲೋಕೋದ್ಧಾರಕ್ಕಾಗಿ ಮಾತ್ರ ಶರೀರವನ್ನು ಧರಿಸುತ್ತಾನೆ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.

  ಶ್ರೀ ಮಠದ ಪ್ರವಚನ ಮಂದಿರದಲ್ಲಿ ಭಾನುವಾರ ಶ್ರೀ ಶಂಕರ ಜಯಂತಿ ಮಹೋತ್ಸವ ನಿಮಿತ್ತ ಅನುಗ್ರಹ ಭಾಷಣಗೈದು ಮಾತನಾಡಿದರು.
  ಉತ್ತಮ ಜನ್ಮ ಬರಬೇಕು ಎಂದರೆ ಉತ್ತಮ ಕರ್ಮವನ್ನು ನಾವು ಮಾಡಬೇಕು. ಭಗವಂತನಿಗೆ ಯಾವ ಕರ್ಮವನ್ನು ಆಚರಣೆ ಮಾಡಬೇಕು ಎಂಬುದಿಲ್ಲ. ಲೋಕದ ಉದ್ಧಾರಗೋಸ್ಕರ ಆತನ ಇಚ್ಛಾನುಸಾರವಾಗಿ ಶರೀರ ಧರಿಸುತ್ತಾನೆ. ಪಾರಮಾರ್ಥಿಕ ಸ್ಥಿತಿಯಲ್ಲಿದ್ದರೂ ಭಗವಂತ ವ್ಯಾವಾಹರಿಕವಾದ ಪ್ರಪಂಚಕ್ಕೆ ಉತ್ಕೃಷ್ಟವಾದ ಕಾರ್ಯನಿರ್ವಹಿಸಲು ಬರುತ್ತಾನೆ. ಭಗವಂತ ನಮ್ಮನ್ನು ಉದ್ಧಾರ ಮಾಡಲು ಅವತರಿಸುತ್ತಾನೆ ಎಂದರು.
  ನಾವು ಪರಿಪೂರ್ಣವಾದ ತತ್ವವನ್ನು ಮಾತಿನಿಂದ ಪಡೆಯಲು ಹೆಚ್ಚು ಪಡೆಯಲು ಸಾಧ್ಯವಿಲ್ಲ. ಅದನ್ನು ಅನುಭವದಿಂದ ತಿಳಿದುಕೊಳ್ಳಬೇಕು. ಸಕ್ಕರೆ ಮಧುರವಾಗಿ ಇರುತ್ತದೆ. ಮಾತಿನಿಂದ ಹೇಳಿದರೆ ಅದರ ರುಚಿ ಅನುಭವಿಸಲು ಸಾಧ್ಯವಿಲ್ಲ. ಅದನ್ನು ಸೇವಿಸಿದ್ದರೆ ಮಾತ್ರ ಅದರ ಮಾಧುರ್ಯ ದೊರಕಲು ಸಾಧ್ಯ. ಬೇರೆ ವ್ಯಕ್ತಿಗಳ ಯೋಗ್ಯತೆಯನ್ನು ಮಾತ್ರ ನೋಡುವ ಪ್ರವೃತ್ತಿ ನಮ್ಮಲ್ಲಿದೆ. ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಂಡರೆ ಮಾತ್ರ ಬದುಕು ನಿರರ್ಥಕವಾಗುವುದಿಲ್ಲ ಎಂದು ಶಾಸ್ತ್ರದಲ್ಲಿ ಉಲ್ಲೇಖವಿದೆ. ಪ್ರತಿಯೊಬ್ಬ ಮನುಷ್ಯ ತನ್ನನ್ನು ತಾನೇ ಅವಲೋಕನ ಮಾಡಿಕೊಳ್ಳಬೇಕು. ಆಗ ನಮ್ಮಲ್ಲಿರುವ ಕೆಟ್ಟಗುಣಗಳನ್ನು ಅರಿವಿಗೆ ಬರುತ್ತದೆ. ಅಂತಹ ದುರ್ಗುಣವನ್ನು ಬಿಟ್ಟು ಆಧ್ಯಾತ್ಮಿಕ ಚಿಂತನೆಯತ್ತ ನಮ್ಮ ಚಿತ್ತ ಹರಿಸಬೇಕಿದೆ ಎಂದರು.
  ಮಾಧವೀಯ ಶಂಕರ ದಿಗ್ವಿಜಯದ ಹನ್ನೆರಡನೇ ಸರ್ಗದ ಪಾರಾಯಣವನ್ನು ವಿದ್ವಾನ್ ವಿನಾಯಕ ಉಡುಪರು ಪಠನ ಮಾಡಿದರು. ಕಿರಿಯ ಶ್ರೀಗಳು ಹಲವು ಗ್ರಂಥಗಳನ್ನು ಬಿಡುಗಡೆಗೊಳಿಸಿದರು. ಶ್ರೀ ಮಠದ ಆಡಳಿತಾಧಿಕಾರಿ ಪಿ.ಎ.ಮುರಳಿ, ವಿದ್ವಾಂಸರಾದ ಶಿವಕುಮಾರ್ ಶರ್ಮ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts