More

    ಮೆಣಸಿನಕಾಯಿ ದಾಖಲೆ ಆವಕ, ಹುಬ್ಬಳ್ಳಿ ಎಪಿಎಂಸಿಯಲ್ಲಿ ಭರ್ಜರಿ ದರ

    ಹುಬ್ಬಳ್ಳಿ: ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ನಷ್ಟವಾಗಿರುವ ಮಧ್ಯೆಯೂ ಈ ವರ್ಷ ಇಲ್ಲಿಯ ಎಪಿಎಂಸಿಗೆ ಇದೇ ಮೊದಲ ಸಲ ಒಣಮೆಣಸಿನಕಾಯಿ ದಾಖಲೆ ಆವಕವಾಗಿದೆ.

    ವಾರದಲ್ಲಿ ಮೂರು- ನಾಲ್ಕು ದಿನ ಮಾತ್ರ ಹುಬ್ಬಳ್ಳಿ ಎಪಿಎಂಸಿಯಲ್ಲಿ ಮೆಣಸಿನಕಾಯಿ ಟೆಂಡರ್ ನಡೆಯುತ್ತದೆ. ಸೋಮವಾರ, ಬುಧವಾರ, ಗುರುವಾರ ಹಾಗೂ ಶನಿವಾರ ಟೆಂಡರ್ ನಡೆಯುತ್ತಿದ್ದು, ಇಂದು ದೊಡ್ಡ ಪ್ರಮಾಣದಲ್ಲಿ ಆವಕವಾಗಿತ್ತು. ಶನಿವಾರ ಸುಮಾರು 20 ಸಾವಿರ ಚೀಲ ಒಣಮೆಣಸಿನಕಾಯಿ ಆವಕವಾಗಿತ್ತು.

    ಸತತ ಮಳೆ, ನೆರೆ ಇತ್ಯಾದಿ ಕಾರಣದಿಂದ ಈ ವರ್ಷ ಹೆಚ್ಚು ಬೆಳೆ ಬಂದಿಲ್ಲ. ಧಾರವಾಡ ಜಿಲ್ಲೆ ಮಾತ್ರವಲ್ಲ, ಮೆಣಸಿನಕಾಯಿ ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿಯೂ ಫಸಲಿನ ಕೊರತೆ ಇದೆ. ಆದರೂ, ಅಕ್ಕಪಕ್ಕದ ಜಿಲ್ಲೆಯಿಂದ ಶನಿವಾರ ಹೆಚ್ಚು ಮೆಣಸಿನಕಾಯಿ ಬಂದಿತ್ತು.

    ಬಾಗಲಕೋಟೆ, ಗದಗ ಜಿಲ್ಲೆಯ ನರಗುಂದ, ರೋಣ ಮುಂತಾದ ಕಡೆಗಳಿಂದ ಸುಮಾರು 5,330 ಕ್ವಿಂಟಾಲ್​ನಷ್ಟು ಮೆಣಸಿನಕಾಯಿ ಬಂದಿತ್ತು.

    ದರವೂ ಉತ್ತಮವಾಗಿದೆ. ಡಬ್ಬಿ ತಳಿಯ ಒಣಮೆಣಸಿನಕಾಯಿ ಕ್ವಿಂಟಾಲ್​ಗೆ 55,555 ರೂ.ನಂತೆ ಮಾರಾಟವಾಗಿದೆ. ಕಡ್ಡಿ ತಳಿಯ ಮೆಣಸಿನಕಾಯಿಯು ಕ್ವಿಂಟಾಲ್​ಗೆ ಗರಿಷ್ಠ 46,199 ರೂ.ನಂತೆ ಮಾರಾಟವಾಗಿದೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

    ಪ್ರಕೃತಿ ವಿಕೋಪದ ನಡುವೆಯೂ ಹುಬ್ಬಳ್ಳಿ ಎಪಿಎಂಸಿಗೆ ಇಂದು ಮೆಣಸಿನಕಾಯಿ ಹೆಚ್ಚು ಬಂದಿದೆ. ಈ ವರ್ಷ ಉತ್ತಮ ಬೆಳೆ ಇಲ್ಲದೇ ಭಣಗುಡುತ್ತಿದ್ದ ಎಪಿಎಂಸಿ ಆವರಣ, ಇವತ್ತು ಮೆಣಸಿನಕಾಯಿಯಿಂದ ತುಂಬಿದೆ. ಬೇರೆಬೇರೆ ಕಡೆಯಿಂದ ರೈತರು ಫಸಲು ತರುತ್ತಿದ್ದಾರೆ. ಉತ್ತಮ ಬೆಲೆಯೂ ಸಿಗುತ್ತಿದೆ ಎಂದು ಕೆಸಿಸಿಐ ಎಪಿಎಂಸಿ ಘಟಕದ ಸಹ ಅಧ್ಯಕ್ಷ ಬಸವರಾಜ ಯಕಲಾಸಪುರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts