More

    ಮೆಕ್ಕೆಜೋಳಕ್ಕೆ ಲದ್ದಿಹುಳು ಕಾಟ

    ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಅಂದಾಜು 9,136 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಬಹುತೇಕ ಭಾಗದಲ್ಲಿ ಲದ್ದಿಹುಳು ಬಾಧೆ ಕಾಡತೊಡಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರಜ್ಞರು ರೈತರ ಗದ್ದೆಗಳಿಗೆ ಭೇಟಿ ನೀಡಿ ಪರಿಹಾರೋಪಾಯ ಸೂಚಿಸಿದರು.

    ಬಹುತೇಕ ಹತ್ತಿ ಬೆಳೆಯುವ ತಾಲೂಕುಗಳಾದ ಜಿಲ್ಲೆಯ ಹಳಿಯಾಳ, ಮುಂಡಗೋಡ ಹಾಗೂ ಯಲ್ಲಾಪುರ ಭಾಗದಲ್ಲಿ ಮೆಕ್ಕೆಜೋಳ ಬೆಳೆ ಆವರಿಸಿದೆ. 15ರಿಂದ 30 ದಿನಗಳ ಅವಧಿಯ ಬೆಳೆಯಲ್ಲಿ ಲದ್ದಿಹುಳುವಿನ ಬಾಧೆ ಕಾಣಿಸಿಕೊಂಡಿದೆ. ಸೂಕ್ತ ಸಮಯದಲ್ಲಿ ಕೀಟವನ್ನು ನಿಯಂತ್ರಿಸದಿದ್ದರೆ ಶೇ. 30ರಿಂದ 80ರಷ್ಟು ಇಳುವರಿ ಕುಂಠಿತವಾಗುತ್ತದೆ. ಹೀಗಾಗಿ ರೈತರು ಆತಂಕಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಳಿಯಾಳದ ಸಾಂಬ್ರಾಣಿ, ಗುಂಡೊಳ್ಳಿ, ಅಜುಮನಾಳ ತಾಂಡ, ತಿಪ್ಪಣಗೇರಿ ಹಾಗೂ ಯಲ್ಲಾಪುರ ತಾಲೂಕಿನ ಬೈಲಂದೂರು, ಮಂಗ್ಯಾನ ತಾವರಗೆರೆ, ಮದನೂರು ಭಾಗದಲ್ಲಿ ಕೀಟದ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. ಕೀಟ ತಜ್ಞರಾದ ಡಾ. ರೂಪಾ ಪಾಟೀಲ್ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ, ಉಪ ಕೃಷಿ ನಿರ್ದೇಶಕ ಶಿವಪ್ರಸಾದ ಗಾಂವಕರ್ ಭೇಟಿ ನೀಡಿ ಪರಿಶೀಲಿಸಿದರು.

    ಕೀಟದ ಹತೋಟಿಗೆ ಮೆಟರೈಜಿಯಂ(ನೊಮೊರಿಯಾ) ರಿಲೈ ಜೈವಿಕ ಕೀಟನಾಶಕವನ್ನು 2ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ 15 ರಿಂದ 20 ದಿನದ ಬೆಳೆಯ ಸುಳಿಯಲ್ಲಿ ಬೀಳುವಂತೆ ಸಿಂಪಡಿಸಬೇಕು. ನಂತರ ಪ್ರತಿ 10 ದಿನದ ಅಂತರದಲ್ಲಿ ಸಿಂಪಡಣೆಯನ್ನು ಪುನರಾವರ್ತಿಸಬೇಕು. ಎಮಾಮೆಕ್ಟಿನ್ ಬೆಂಜೋಯೇಟ್ 0.2 ಗ್ರಾಂ ಅಥವಾ ಕ್ಲೋರ್ಯಾಂಟ್ರಿನಿಲಿಪ್ರೋಲ್ 0.2 ಮಿಲಿ. ಅಥವಾ ಸ್ಪೈನೊಟೊರಂ 0.5 ಮಿಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು ಎಂದು ತಿಳಿಸಿದ್ದಾರೆ.

    ಮೋಹಕ ಬಲೆ ಅಳವಡಿಕೆ
    ಕೀಟದ ಸಮೀಕ್ಷೆಗಾಗಿ ಯಲ್ಲಾಪುರ ತಾಲೂಕಿನ ಬೈಲಂದೂರು ಗ್ರಾಮ ಹಾಗೂ ಹಳಿಯಾಳ ತಾಲೂಕಿನ ತಿಪ್ಪಣಗೇರಿ ಗ್ರಾಮದಲ್ಲಿ ಎಕರೆಗೆ 5ರಂತೆ ಮೋಹಕ ಬಲೆಗಳನ್ನು ಪ್ರಾತ್ಯಕ್ಷಿಕೆಗಾಗಿ ಅಳವಡಿಸಲಾಗಿದೆ. ಪ್ರತಿ ಮೋಹಕ ಬಲೆಯಲ್ಲಿ ಅಂದಾಜು 3 ರಿಂದ 10 ಪತಂಗಗಳು ಬಿದ್ದಿದ್ದು, ಕೀಟದ ಮೊಟ್ಟೆಯಿಡುವ ಪ್ರಮಾಣ ಕಡಿಮೆಯಾಗಿದೆ. ಮೋಹಕ ಬಲೆಯನ್ನು ಪ್ರಾತ್ಯಕ್ಷಿಕೆಗಾಗಿ ಅಳವಡಿಸಿದ ಎರಡು ದಿನಗಳಲ್ಲಿಯೇ 15 ಮೋಹಕ ಬಲೆಗಳಲ್ಲಿ ಅಂದಾಜು 108 ಲದ್ದಿ ಹುಳುವಿನ ಪತಂಗಗಳು ಬಿದ್ದಿರುವುದಾಗಿ ರೈತರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts