More

    ಮೂವರು ಮುಂಬೈ ಶೂಟರ್ಸ್ ಬಂಧನ

    ಹುಬ್ಬಳ್ಳಿ: ರೌಡಿಶೀಟರ್ ಇರ್ಫಾನ್ ಹಂಚಿನಾಳ ಅಲಿಯಾಸ್ ಫ್ರೂಟ್ ಇರ್ಫಾನ್ ಹತ್ಯೆ ಮಾಡಿ ಪರಾರಿಯಾಗಿದ್ದ ಮುಂಬೈ ಮೂಲದ ಮೂವರು ಕುಖ್ಯಾತ ಶೂಟರ್​ಗಳನ್ನು ಬಂಧಿಸುವಲ್ಲಿ ಹು-ಧಾ ಪೊಲೀಸ್ ತನಿಖಾ ತಂಡ ಯಶಸ್ವಿಯಾಗಿದೆ.

    ಮುಂಬೈನ ನೀಲೇಶ ನಂದಗಾವ್ಕರ (36), ಸುನೀಲ ಬನ್ಸೊಡೆ ಅಲಿಯಾಸ್ ಮಾಮು (55) ಹಾಗೂ ನವನಾಥ ದೌಲತ್ (36) ಬಂಧಿತ ಶೂಟರ್​ಗಳು. ಹಂತಕರ ಜಾಡು ಹಿಡಿದು ಮುಂಬೈನತ್ತ ತೆರಳಿದ್ದ ತನಿಖಾ ತಂಡ ಚೆಂಬೂರು, ನೆಹರು ನಗರ, ವಾಡ್ಲಾ, ಘಾಡಕೋಪರ್ ಸೇರಿ ಮತ್ತಿತರೆಡೆಗಳಲ್ಲಿ ತಲೆಮರೆಸಿಕೊಂಡಿದ್ದ ಶೂಟರ್​ಗಳನ್ನು ಪತ್ತೆ ಹಚ್ಚಿದೆ. ಹಣಕ್ಕಾಗಿಯೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅವರನ್ನು ಈಗಾಗಲೇ ಮುಂಬೈನಿಂದ ಹುಬ್ಬಳ್ಳಿಗೆ ಕರೆತರಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಆಗಸ್ಟ್ 6ರಂದು ಮಗನ ವಲೀಮಾ ಮುಗಿಸಿ ಹಳೇ ಹುಬ್ಬಳ್ಳಿಯ ಅಲ್ ತಾಜ್ ಹೋಟೆಲ್ ಎದುರು ನಿಂತಿದ್ದ ಇರ್ಫಾನ್ ಮೇಲೆ ಮೂವರು ಗುಂಡಿನ ಸುರಿಮಳೆಗೈದು ಪರಾರಿಯಾಗಿದ್ದರು. ಸ್ಥಳದಲ್ಲೇ ಕುಸಿದುಬಿದ್ದ ಇರ್ಫಾನ್ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ತನಿಖಾ ತಂಡ ಮೊದಲು ಹುಬ್ಬಳ್ಳಿ- ಧಾರವಾಡದ ಐವರನ್ನು, ನಂತರ ಮೈಸೂರಿನ ಇಬ್ಬರನ್ನು ಬಂಧಿಸಿತ್ತು. ಇದೀಗ ಮೂವರು ಶೂಟರ್​ಗಳನ್ನು ಬಂಧಿಸಲಾಗಿದೆ. ಇದರಿಂದಾಗಿ ಬಂಧಿತರ ಸಂಖ್ಯೆ 10ಕ್ಕೇರಿದೆ. ಹತ್ಯೆಯ ಸಂಚಿನಲ್ಲಿ ಭಾಗಿಯಾಗಿ, ನೆರವು ನೀಡಿದ್ದಾನೆ ಎನ್ನಲಾಗಿರುವ ಹಳೇ ಪಾತಕಿ ಮುಂಬೈ ಮೂಲದ ಬಚ್ಚಾಖಾನ್ ಮೈಸೂರು ಕಾರಾಗೃಹದಲ್ಲಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದು ಬಾಕಿ ಇದೆ.

    ಬಚ್ಚಾಖಾನ್ ಆಪ್ತನೂ ಬಲೆಗೆ
    ಸದ್ಯ ಮೈಸೂರು ಜೈಲಿನಲ್ಲಿರುವ ರೌಡಿ ಬಚ್ಚಾಖಾನ್ ಆಪ್ತನೊಬ್ಬ ಇರ್ಫಾನ್ ಹತ್ಯೆಯ ಮಾಸ್ಟರ್ ಮೈಂಡ್ ಆಗಿದ್ದು, ಆತನ ಮೂಲಕ ಬಚ್ಚಾಖಾನ್ 10 ಲಕ್ಷ ರೂ.ಗೆ ಸುಪಾರಿ ನೀಡಿ ಶೂಟೌಟ್ ಮಾಡಿಸಿದ್ದ ಎನ್ನಲಾಗಿದೆ. ಆತನನ್ನೂ ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts