More

    ಮೂವರು ಆರೋಪಿಗಳ ಬಂಧನ

    ಗದಗ: ನಗರ ಭೀಷ್ಮ ಕೆರೆ ಸಮೀಪ ಕಳೆದ ಭಾನುವಾರ ನಡೆದಿದ್ದ ಮುತ್ತು (ಗೋವಿಂದಪ್ಪ) ಯಲ್ಲಪ್ಪ ಛಲವಾದಿ (27) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ತಿಳಿಸಿದರು.
    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಬಯಲು ಆಂಜನೇಯ ದೇವಸ್ಥಾನದ ಸಮೀಪದ ನಿವಾಸಿ ಸಿಮೆಂಟ್ ವ್ಯಾಪಾರಿ ಪ್ರಕಾಶ (ಫಕೀರೇಶ) ಬಸವರಾಜ ಕೋರಿಶೆಟ್ಟರ ಅಲಿಯಾಸ್ 220 ಫಕ್ಯಾ (25), ವಿವೇಕಾನಂದ ನಗರದ ಕೊಳಚೆ ಪ್ರವೇಶ ನಿವಾಸಿ ಪ್ರವೀಣ (ಪವನ್) ಯಮನಪ್ಪ ಸಕ್ರಿ (22) ಹಾಗೂ ಗ್ರೇನ್ ಮಾರ್ಕೆಟ್ ಕಮ್ಮಾರಸಾಲನಲ್ಲಿ ಹೋಟೆಲ್ ಸಪ್ಲೈಯರ್ ಆಗಿರುವ ಅಮೀರ್ ಸೋಯಲ್ ಸುಭಾನ್​ಸಾಬ್ ನದಾಫ್ (22) ಬಂಧಿತ ಆರೋಪಿಗಳು. ಘಟನೆ ನಡೆದ ಮರುದಿನ ಸೋಮವಾರ ತಾಲೂಕಿನ ಹುಲಕೋಟಿ ಗ್ರಾಮದ ಟೆಕ್ಸ್ ಟೈಲ್ ಮಿಲ್ ಹತ್ತಿರ ಆರೋಪಿಗಳು ತಂಗಿರುವ ಮಾಹಿತಿ ಲಭ್ಯವಾಗಿತ್ತು. ಕೂಡಲೆ ಕಾರ್ಯಪ್ರವೃತ್ತರಾದ ಶಹರ ಠಾಣೆ ಸಿಪಿಐ ಪಿ.ವಿ. ಸಾಲಿಮಠ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಎರಡು ಚಾಕು, ಒಂದು ಡಿಯೋ ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
    ಏನಿದು ಪ್ರಕರಣ?: ಮುತ್ತು ಛಲವಾದಿಗೆ ಆರೋಪಿ ಪ್ರಕಾಶ ಕೋರಿಶೆಟ್ಟರ 80 ಸಾವಿರ ರೂ. ಸಾಲ ಕೊಟ್ಟಿದ್ದ. ಅದನ್ನು ಮರಳಿ ಕೊಡುವಂತೆ ಕೇಳಿದ್ದ. ಆದರೆ, ಹಣ ವಾಪಸ್ ನೀಡಲು ಮುತ್ತು ನಿರಾಕರಿಸಿದ್ದ. ಅಲ್ಲದೆ, ಹಣ ಕೇಳಿದರೆ ನಿನ್ನನ್ನೇ ಮುಗಿಸಿಬಿಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದ ಎಂದು ಆರೋಪಿ ಪ್ರಕಾಶ ಕೋರಿಶೆಟ್ಟರ ತಿಳಿಸಿದ್ದಾನೆ. ಫುಟ್​ಬಾಲ್ ಆಟದಲ್ಲಿ ವಿನಾಕಾರಣ ತಂಟೆ ತೆಗೆದು ಹಲ್ಲೆ ಮಾಡಿದ್ದಲ್ಲದೆ, ಆಗಾಗ ಬೇರೆ ಬೇರೆ ಹುಡುಗರೊಂದಿಗೆ ಸೇರಿ ಹಲ್ಲೆ ಮಾಡುತ್ತಿದ್ದ ಮತ್ತು ಜೀವ ಬೆದರಿಕೆ ಹಾಕುತ್ತಿದ್ದ. ಈ ದ್ವೇಷದ ಹಿನ್ನೆಲೆಯಲ್ಲಿ ಸಮೀರ್ ಸೋಯಲ್ ನದಾಫ್ ಸಹಕಾರದೊಂದಿಗೆ ಹೋಟೆಲ್​ವೊಂದರಲ್ಲಿ ಕುಳಿತು ಕೊಲೆಗೆ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ ಎಸ್ಪಿ ಯತೀಶ್ ವಿವರಿಸಿದರು.
    ಕೊಲೆ ಪ್ರಕರಣದ ತನಿಖೆ ಜವಾಬ್ದಾರಿಯನ್ನು ಡಿವೈಎಸ್ಪಿ ಶಿವಾನಂದ ಪವಾಡಿಶೆಟ್ಟರ ಅವರಿಗೆ ವಹಿಸಲಾಗಿತ್ತು. ಶಹರ ಠಾಣೆ ಸಿಪಿಐ ಪಿ.ವಿ. ಸಾಲಿಮಠ, ಬಡಾವಣೆ ಠಾಣೆ ಸಿಪಿಐ ಬಿ.ಜಿ. ಸುಬ್ಬಾಪೂರಮಠ ಹಾಗೂ ಶಹರ ಠಾಣೆ ಕ್ರೖೆಂ ವಿಭಾಗದ ಪಿಎಸ್​ಐ ಗಿರಿಜಾ ಜಕ್ಕಲಿ ನೇತೃತ್ವದ ತಂಡ ರಚಿಸಿ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts