More

    ಮೂಲ ಸಂಸ್ಕೃತಿಯನ್ನು ರಕ್ಷಿಸೋಣ

    ನಿಪ್ಪಾಣಿ: ವೈಜ್ಞಾನಿಕ, ಆಧುನಿಕ ಅಥವಾ ಸ್ಪರ್ಧಾತ್ಮಕ ಯುಗವಾಗಿರಲಿ ನಾವು ನಮ್ಮ ಮೂಲ ಸಂಸ್ಕೃತಿ ಮರೆಯದೆ ಅದನ್ನು ಉಳಿಸಿ-ಬೆಳೆಸುವ ಅವಶ್ಯಕತೆಯಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

    ಮುಜರಾಯಿ ಇಲಾಖೆಯಿಂದ ಇಲ್ಲಿನ ವಿರೂಪಾಕ್ಷಲಿಂಗ ಸಮಾಧಿಮಠದಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಶನಿವಾರ ಯುಗಾದಿ ಹಬ್ಬವನ್ನು ಧಾರ್ಮಿಕ ದಿನವನ್ನಾಗಿ ಆಚರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮುಜರಾಯಿ ಇಲಾಖೆಯಡಿ ರಾಜ್ಯದಲ್ಲಿ ದೇವಸ್ಥಾನಗಳ ಅಭಿವೃದ್ಧಿಯೊಂದಿಗೆ ದೇಶದ ಸಂಸ್ಕೃತಿ, ಪರಂಪರೆ ಉಳಿವಿಗಾಗಿ ಹಾಗೂ ಮಕ್ಕಳು ಮತ್ತು ಯುವವರ್ಗದಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಬಿಂಬಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ನಡೆದಾಡುವ ದೇವರ ಸಾನ್ನಿಧ್ಯದಲ್ಲಿ ಈ ಐತಿಹಾಸಿಕ ದಿನದ ಆರಂಭ ಮಾಡಿದ್ದು ಜೊಲ್ಲೆ ಕುಟುಂಬದ ಸೌಭಾಗ್ಯ ಎಂದರು.

    ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ, ಸಚಿವೆ ಜೊಲ್ಲೆ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದರು. ಅವುಗಳನ್ನು ಕಾರ್ಯರೂಪಕ್ಕೆ ತಂದು ಇಡಿ ರಾಜ್ಯಕ್ಕೆ ಬೆಳಗಾವಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿತ್ತು ಎನ್ನುತ್ತ ಸಚಿವೆ ಜೊಲ್ಲೆ ಅವರ ಕಾರ್ಯವೈಖರಿ ಶ್ಲಾಘಿಸಿದರು. ತಾಲೂಕಿನ ಹಂಚಿನಾಳ(ಕೆಎಸ್) ಗ್ರಾಮದ ಗುರುದೇವಾಶ್ರಮದ ಮಹೇಶಾನಂದ ಸ್ವಾಮೀಜಿ ಹಾಗೂ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ ಮಾತನಾಡಿದರು.

    ಸಮಾಧಿಮಠದಲ್ಲಿ ವಿವಿಧ ಪೂಜೆ ಹಾಗೂ ಕೈಂಕರ್ಯ, ಕೃಷಿ ಚಟುವಟಿಕೆಗಳು ಜರುಗಿದವು. ವಿರೂಪಾಕ್ಷಲಿಂಗ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಯುಗಾದಿ ಹಬ್ಬದ ಅಂಗವಾಗಿ ಸಮಾಧಿಮಠವು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಧಾರ್ಮಿಕ ದಿನಾಚರಣೆ ಹಿನ್ನೆಲೆ ಗೋ ಪೂಜೆ, ಲಕ್ಷ್ಮೀ ಪೂಜೆ ಮಾಡಿ ನೇಗಿಲು ಹಿಡಿದು ಬಿತ್ತನೆ ಮಾಡಿ ಯುಗಾದಿ ಹಬ್ಬ ಆಚರಿಸಲಾಯಿತು. ವಿಶೇಷವಾಗಿ ಗಡಿಭಾಗದಲ್ಲಿ ಯುಗಾದಿ ಹಬ್ಬದಂದು ವಿಜಯೋತ್ಸವದ ಪ್ರತೀಕವಾಗಿ ಆಚರಿಸುವ ಮತ್ತು ಗುಡಿಪಾಡವಾ ಎಂದು ಕರೆಯಲ್ಪಡುವ ಈ ಹಬ್ಬವನ್ನು ಮರಾಠಿ ಜನರು ಸಂಭ್ರಮದಿಂದ ಆಚರಿಸಿದರು.

    ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಪಿ.ಸಿ. ಗದ್ದಿಗೌಡರ, ಎಸಿ ಸಂತೋಷ ಕಾಮಗೌಡರ, ತಹಸೀಲ್ದಾರ್ ಡಾ.ಮೋಹನ ಭಸ್ಮೆ, ಬಿಇಒ ರೇವತಿ ಮಠದ, ಸಿಪಿಐ ಸಂಗಮೇಶ ಶಿವಯೋಗಿ, ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ವಿರೂಪಾಕ್ಷಲಿಂಗ ಸಮಾಧಿಮಠದ ಕಾರ್ಯಾಧ್ಯಕ್ಷ ಸುರೇಶ ಶೆಟ್ಟಿ, ಭಕ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts