More

    ಮೂರೇ ವರ್ಷಗಳಲ್ಲಿ ವಿಫಲ!

    ಓರ್ವಿಲ್ ಫರ್ನಾಂಡೀಸ್ ಹಳಿಯಾಳ

    ಇಡೀ ರಾಜ್ಯದ ಗಮನಸೆಳೆದಿದ್ದ ಮಹತ್ವಾಕಾಂಕ್ಷಿಯಾದ ‘ನಿರಂತರ ಕುಡಿಯುವ ನೀರಿನ ಯೋಜನೆ’ಯು ಜಾರಿಗೊಂಡ 3 ವರ್ಷಗಳಲ್ಲಿಯೇ ಮಕಾಡೆ ಮಲಗಿದೆ. ನಿರಂತರ ನೀರು ಬಿಡಿ… ಒಂದು ಗಂಟೆಯಾದರೂ ನೀರು ನಳಕ್ಕೆ ಬಂದರೇ ಸಾಕು ಎಂದು ಹಳಿಯಾಳ ಪಟ್ಟಣದ ನಿವಾಸಿಗಳು ನಿತ್ಯ ಹಂಬಲಿಸುತ್ತಿದ್ದಾರೆ. ಯೋಜನೆ ಅನುಷ್ಠಾನಗೊಳಿಸಿದ ರಾಜ್ಯದ ಮೊದಲ ಪಟ್ಟಣ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹಳಿಯಾಳವು ಈಗ ಇದೇ ವಿಷಯದಲ್ಲಿ ವ್ಯಥೆಪಡುವ ಪರಿಸ್ಥಿತಿ ತಲೆದೋರಿದೆ.

    23 ಕೋಟಿ ರೂಪಾಯಿಯ ಯೋಜನೆ: ಶಾಸಕ ಆರ್.ವಿ. ದೇಶಪಾಂಡೆ ಅವರು ತಮ್ಮ ಕ್ಷೇತ್ರದ ಜನರು ಎದುರಿಸುತ್ತಿರುವ ಜೀವಜಲದ ಬವಣೆಯನ್ನು ಶಾಶ್ವತವಾಗಿ ಪರಿಹರಿಸಲು ಅಂದಾಜು 23 ಕೋಟಿ ರೂ. ವೆಚ್ಚದ ನೀರಿನ ಯೋಜನೆ ಮಂಜೂರು ಮಾಡಿಸಿದರು. ದಾಂಡೇಲಿ ಬಳಿಯ ಕಾಳಿ ನದಿಯಿಂದ ಹಳಿಯಾಳ ಪಟ್ಟಣಕ್ಕೆ ದಿನದ 24 ತಾಸು ನಿರಂತರ ಕುಡಿಯುವ ನೀರು ಪೂರೈಸುವ ಯೋಜನೆಯನ್ನು 2017ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು.

    ನಿರ್ವಹಣೆ ವೈಫಲ್ಯ: ಸರಿಯಾಗಿ ನಿರ್ವಹಣೆ ಮಾಡದ್ದರಿಂದ ಅತ್ಯುತ್ತಮ ಯೋಜನೆಯೊಂದು ವಿಫಲವಾಗಿದೆ. ಇದರ ಅನುಷ್ಠಾನದ ಗುತ್ತಿಗೆ ಪಡೆದ ಜೈನ್ ಇರಿಗೇಷನ್ ಕಂಪನಿಯವರು ಗುತ್ತಿಗೆಯ ಒಪ್ಪಂದದಂತೆ 5 ವರ್ಷದವರೆಗೆ ನೀರು ಪೂರೈಕೆ ನಿರ್ವಹಣೆ ವಹಿಸಿಕೊಂಡಿದ್ದಾರೆ. ನಿರ್ವಹಣೆ ಕಾಲಾವಧಿ ಇನ್ನು ಇದೆ. ಪುರಸಭೆ, ಜೈನ್ ಇರಿಗೇಷನ್ ಕಂಪನಿ ಮತ್ತು ಸಂಬಂಧಿಸಿದ ಇಲಾಖೆಯ ಸಮನ್ವಯ ಕೊರತೆಯಿಂದ 30 ವರ್ಷದ ಕಾಲಾವಧಿ (2047ರವರೆಗೆ) ಗುರಿಯಾಗಿಸಿಕೊಂಡು ಅಂದಾಜು 6,000 ಬಳಕೆದಾರರಿಗೆ ನಿತ್ಯ ನೀರು ಪೂರೈಸಲು ಸಿದ್ಧಪಡಿಸಿದ ಯೋಜನೆ ಈಗ 3 ವರ್ಷದಲ್ಲಿ ವಿಫಲವಾಗಿದೆ.

    ನೀರು ಅಪರೂಪ: ಯೋಜನೆ ಆರಂಭವಾದ ಹೊಸತರಲ್ಲಿ ಕೆಲ ದಿನ 24 ತಾಸು ನಲ್ಲಿಯಲ್ಲಿ ನೀರು ಬಂತು. ನಂತರ ಒಂದು ಗಂಟೆ ಬಂದಿದ್ದೆ ಅಪರೂಪ. ನೀರು ಪೂರೈಕೆಗೆ ಈಗ ಸಮಯನ್ನೇ ನಿಗದಿ ಮಾಡಿಲ್ಲ. ಜನರು ತಮ್ಮ ದೈನಂದಿನ ಕೆಲಸಕ್ಕೆ ಹೋದ ಮೇಲೆ ಒಂದು ತಾಸು ಅಥವಾ ಅರ್ಧ ತಾಸು ನಲ್ಲಿಯಲ್ಲಿ ನೀರು ಬಂದು ಹೋಗುತ್ತದೆ. ಪಟ್ಟಣದ ಬಹುತೇಕ ಭಾಗಗಳಲ್ಲಿ ಎರಡ್ಮೂರು ದಿನಕ್ಕೊಮ್ಮೆ ಅಥವಾ ವಾರಕ್ಕೊಮ್ಮೆ ನೀರು ಬರುತ್ತಿದೆ. ಈಗಿನ ವ್ಯವಸ್ಥಗೆ ಹತಾಶರಾಗಿರುವ ಪಟ್ಟಣದ ಜನರು ಹಳೆಯ ನೀರು ಪೂರೈಕೆ ವ್ಯವಸ್ಥೆಯೇ ಉತ್ತಮವಾಗಿತ್ತು ಎಂದು ನೆನಪಿಸುತ್ತಿದ್ದಾರೆ. 40 ವರ್ಷಗಳ ಹಿಂದೆ ಪಟ್ಟಣಕ್ಕೆ ಇಲ್ಲಿಯ ನಾಗಝುರಿ ಬಾವಿಯಿಂದ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಪಟ್ಟಣ ಬೆಳೆದಂತೆ ದಾಂಡೇಲಿಯ ಕಾಳಿ ನದಿಯಿಂದ ನೀರು ಪೂರೈಸುವ ಯೋಜನೆ 2000ರಲ್ಲಿ ಕಾರ್ಯಾರಂಭಿಸಿತು. ಆಗ ನಿತ್ಯ 2 ಗಂಟೆಯಾದರೂ ನೀರು ಪೂರೈಕೆ ಆಗುತ್ತಿತ್ತು ಎಂದು ಹೇಳುತ್ತಿದ್ದಾರೆ.

    ದಾಂಡೇಲಿಯ ಜಾಕ್​ವೆಲ್​ನಲ್ಲಿನ ಪಂಪ್​ಗಳಲ್ಲಿ ನೀರು ಎತ್ತುವ ಸಾಮರ್ಥ್ಯ ಕಡಿಮೆಯಾಗಿದೆ. ಮೇಲಾಗಿ ಜಾಕ್​ವೆಲ್​ನಲ್ಲಿ ತುಂಬಿರುವ ಹೂಳು ತೆಗೆಯುವ ಕಾರ್ಯ ಆರಂಭಗೊಂಡಿದೆ. ನಾವು ನೀರಿನ ಸಮಸ್ಯೆ ಬಗೆಹರಿಸಲು ಸತತ ಪ್ರಯತ್ನ ನಡೆಸಿದ್ದೇವೆ. | ಕೇಶವ ಚೌಗಲೆ ಪುರಸಭೆ ಮುಖ್ಯಾಧಿಕಾರಿ

    ಹಳ್ಳಹಿಡಿಯಲು ಕಾರಣ…: ಯೋಜನೆಯ ವೈಫಲ್ಯಕ್ಕೆ ಹಳೇ ಪೈಪ್​ಲೈನ್ ಮುಂದುವರಿಸಿದ್ದೇ ಮುಖ್ಯ ಕಾರಣ ಎನ್ನಲಾತ್ತಿದೆ. ಕೆಯುಐಡಿಎಫ್​ಸಿ(ಕರ್ನಾಟಕ ಅರ್ಬನ್ ಇನ್ಪ್ರಾಸ್ಟ್ರಕ್ಚರ್ ಡೆವಲಪಮೆಂಟ್ ಕಾರ್ಪೆರೇಷನ್) ಈ ಕಾಮಗಾರಿಯ ನೀಲಿನಕ್ಷೆ ಸಿದ್ಧಪಡಿಸುವಾಗ ಈ ಹಿಂದೆ ದಾಂಡೇಲಿಯಿಂದ ಹಳಿಯಾಳ ಪಟ್ಟಣದವರೆಗೆ ಕಾಳಿನದಿ ನೀರು ಪೂರೈಸಲು ಅಳವಡಿಸಿದ ಹಳೇ ಫೈಪ್​ಲೈನ್ ಬದಲಾಯಿಸಲು ಮುಂದಾಗಲಿಲ್ಲ. ಪರಿಣಾಮ ಪ್ರತಿನಿತ್ಯ ಪೂರೈಕೆಯಾಗಬೇಕಾಗಿದ್ದ 4.5 ಎಂಎಲ್​ಡಿ ನೀರು ಆರಂಭದಿಂದಲೇ ಬಂದಿಲ್ಲ ಎಂದು ಪುರಸಭೆಯವರು ಈಗ ಹೇಳುತ್ತಿದ್ದಾರೆ. ದಾಂಡೇಲಿಯಲ್ಲಿನ ಜಾಕ್​ವೆಲ್​ನಲ್ಲಿ ಹೂಳು ತುಂಬಿರುವ ಪರಿಣಾಮ ಅಲ್ಲಿನ ಮೋಟಾರುಗಳಲ್ಲಿ ನೀರನ್ನೆತ್ತುವ ಸಾಮರ್ಥ್ಯವು ಕುಸಿಯಲಾರಂಭಿಸಿದೆ. ಅಲ್ಲದೆ, ನಿರಂತರ ವಿದ್ಯುತ್ ಪೂರೈಕೆ ಆಗದಿರುವುದು ಕೂಡಾ ವೈಫಲ್ಯಕ್ಕೆ ಪ್ರಮುಖ ಕಾರಣವಾಗಿದೆ.

    ಪುರಸಭೆ ಮತ್ತು ಜೈನ್ ಇರಿಗೇಷನ್ ಕಂಪನಿಯಲ್ಲಿ ಸಮನ್ವಯ ಕೊರತೆಯಿಂದಾಗಿ ಅತ್ಯುತ್ತಮ ಯೋಜನೆಯೊಂದು ವಿಫಲವಾಗಿದೆ. ನೀರು ಪೂರೈಕೆ ಸಮಸ್ಯೆ ಪರಿಹರಿಸುವ ಕುರಿತು ಪುರಸಭೆ ಹಾಗೂ ಜನಪ್ರತಿನಿಧಿಗಳು ಸಮರ್ಪಕ ಉತ್ತರ ನೀಡುತ್ತಿಲ್ಲ. | ಕಮಲ ಸೀಕ್ವೆರಾ ಪತಂಜಲಿ ಸಮಿತಿಯ ಪ್ರಮುಖರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts