More

    ಮೂರನೇ ಅಲೆ ತಡೆಗೆ ಸಹಕಾರ ಅಗತ್ಯ

    ಕೋಲಾರ: ಕರೊನಾ ಎರಡನೇ ಅಲೆಗಿಂತ ಮೂರನೇ ಅಲೆಯ ತೀವ್ರತೆ ಹೆಚ್ಚಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸಿ ವೈರಸ್ ದೇಹವನ್ನು ಹೊಕ್ಕದಂತೆ ನೋಡಿಕೊಳ್ಳುವುದು ಜಾಣತನ ಎಂದು ಮಣಿಪಾಲ್ ಆಸ್ಪತ್ರೆಯ ಶ್ವಾಸಕೋಶ ಕಸಿ ವೈದ್ಯ ಡಾ. ಸತ್ಯನಾರಾಯಣ ಮೈಸೂರು ಹೇಳಿದರು.

    ಪತ್ರಕರ್ತರ ಭವನದಲ್ಲಿ ಮಣಿಪಾಲ್ ಆಸ್ಪತ್ರೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ಕೋವಿಡ್ ಮತ್ತು ಕೋವಿಡ್ ನಂತರದ ನಿರ್ವಹಣೆ ಕುರಿತು ಪತ್ರಕರ್ತರೊಂದಿಗಿನ ಸಂವಾದದಲ್ಲಿ ಮಾತನಾಡಿ, ಕರೊನಾ ಎರಡನೇ ಅಲೆ ಸಾಕಷ್ಟು ಜನರ ಪ್ರಾಣಕ್ಕೆ, ಆರ್ಥಿಕ, ಮಾನಸಿಕ ಹೀಗೆ ಸಮಗ್ರವಾಗಿ ತೊಂದರೆ ಆಗಿದೆ. ಮೂರನೇ ಅಲೆ ತಡೆಗೆ ಜನರ ಸಹಕಾರ ಬೇಕು ಎಂದರು.

    ಮನುಷ್ಯನ ದೇಹದಲ್ಲಿ ಕರೊನಾ ವೈರಸ್ ಹೊಕ್ಕದಿದ್ದರೆ ರೂಪಾಂತರಗೊಳ್ಳುವುದು ತಪ್ಪುತ್ತದೆ. ಕರೊನಾ ಕಡಿಮೆಯಾಯಿತು ಎಂದು ಮಾಸ್ಕ್ ಧರಿಸದೆ ಓಡಾಡಬೇಡಿ, ಸೋಂಕಿನ ಲಕ್ಷಣಗಳಿದ್ದಲ್ಲಿ ತಕ್ಷಣ ಪರೀಕ್ಷೆ, ಚಿಕಿತ್ಸೆ ಹಾಗೂ ಆರೈಕೆ ಕೈಗೊಂಡಲ್ಲಿ 3ನೇ ಅಲೆಯಲ್ಲಿ ಸೋಂಕು ಸಾಂಕ್ರಾಮಿಕವಾಗಿ ಹರಡುವುದನ್ನು ಕಡಿಮೆ ಮಾಡಬಹುದು ಎಂದರು.

    ಮಣಿಪಾಲ್ ಆಸ್ಪತ್ರೆಯ ಕ್ರಿಟಿಕಲ್ ಕೇರ್ ಮೆಡಿಸಿನ್ ಅಧ್ಯಕ್ಷ ಡಾ.ಸುನೀಲ್ ಕಾರಂತ್ ಮಾತನಾಡಿ, ಕರೊನಾ ಎರಡನೇ ಅಲೆ ಮುಗಿಯಿತು ಎಂದು ಅಜಾಗರೂಕರಾಗಿರಬಾರದು, ಇನ್ನೂ 8 ತಿಂಗಳು ಎಚ್ಚರಿಕೆಯಿಂದಿರಬೇಕು. ಕೋವಿಡ್ ಲಸಿಕೆ ಎರಡು ಡೋಸ್ ಪಡೆದವರಲ್ಲಿ ಸೋಂಕಿನಿನ ಸಾವಿನ ಪ್ರಮಾಣ ಶೇ.0.05 ರಷ್ಟು ಮಾತ್ರ. ಬೂಸ್ಟರ್ ಲಸಿಕೆ ಬೇಕೇ ಬೇಡವೇ ಎಂಬುದಕ್ಕೆ ಎರಡು ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ, ಲಸಿಕೆಯಿಂದ ದೇಹದಲ್ಲಿ ಪ್ರತಿರೋಧಕ ಶಕ್ತಿ ಜೀವನಪರ‌್ಯಂತ ಉಳಿಯುತ್ತದೆಯೇ ಎಂಬುದು ದೃಢಪಡಲು ಇನ್ನೂ ಕಾಲಾವಕಾಶ ಬೇಕು ಎಂದರು.

    ಕರೊನಾ ಎರಡನೇ ಅಲೆ ಸಂಬಂಧ 11 ಮಂದಿ ತಜ್ಞರ ಸಮಿತಿ ಪ್ರತಿದಿನದ ಮಾಹಿತಿ ಸಂಗ್ರಹಿಸಿ ಅಧ್ಯಯನ ನಡೆಸುತ್ತಿದೆ. ಇದರ ಆಧಾರದ ಮೇಲೆ ಪ್ರಸ್ತುತ ಸನ್ನಿವೇಶದಲ್ಲಿ ಶಾಲೆ ಆರಂಭಿಸುವ ಬಗ್ಗೆ ಸರ್ಕಾರ ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಬಹುದು ಎಂದರು.

    ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ. ಮುನಿರಾಜು ಮಾತನಾಡಿ, ಕರೊನಾ ಸಂದರ್ಭ, ಹೃದಯ ಸಂಬಂಧಿತ ಕಾಯಿಲೆ ಸೇರಿ ಅನೇಕ ಸಂವಾದ, ಕಾರ್ಯಕ್ರಮಗಳನ್ನು ಮಣಿಪಾಲ್ ಆಸ್ಪತ್ರೆ ಆಯೋಜಿಸಿದೆ. ಪತ್ರಕರ್ತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸಾ ವೆಚ್ಚದಲ್ಲಿ ಶೇ. 15 ರಿಂದ 20 ರಿಯಾಯಿತಿಯನ್ನು ಮುಂದಿನ ಅವಧಿಗೂ ವಿಸ್ತರಿಸಬೇಕು ಎಂದು ಮನವಿ ಮಾಡಿದರು.

    ಮಣಿಪಾಲ್ ಆಸ್ಪತ್ರೆ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಡಾ. ಮದ್ದೂರು ಗೋಪಾಲ್, ಆಸ್ಪತ್ರೆಯ ಅಬ್ದುಲ್ ಅಫೀಜ್, ನಿವೃತ್ತ ಜಿಲ್ಲಾ ಸರ್ಜನ್ ಡಾ.ಎಸ್.ಜಿ.ನಾರಾಯಣಸ್ವಾಮಿ, ಮಣಿಪಾಲ್ ಹಾಸ್ಪಿಟಲ್ ಕೋ ಆರ್ಡಿನೇಟರ್ ಸುನೀಲ್ ಕುಮಾರ್, ಶ್ರೀನಾಥ್, ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಸುರೇಶ್‌ಕುಮಾರ್ ಇತರರಿದ್ದರು.

    ದೇಶಾದ್ಯಂತ ಆ.15ರ ಒಳಗೆ ಜಿಲ್ಲಾ ಮತ್ತು ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಪೂರ್ಣಗೊಳಿಸಬೇಕಿದೆ. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಯಲ್ಲಿ ಘಟಕ ಸ್ಥಾಪನೆ ನಡೆಯುತ್ತಿದೆ. ಈ ಬಾರಿ ಆಮ್ಲಜನಕದ ಸಮಸ್ಯೆ ಎದುರಾಗದು.
    ಡಾ.ಜಗದೀಶ್, ಡಿಎಚ್‌ಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts