More

    ಮುಸ್ಲಿಮರು ಜೆಡಿಎಸ್‌ಗೆ ಬೆನ್ನೆಲುಬಾಗಿದ್ದಾರೆ

    ಬೇಲೂರು: ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯವು ಕಾಂಗ್ರೆಸ್ ಪಕ್ಷ ಬೆಂಬಲಿಸಲಿದೆ ಎಂಬುದು ಶುದ್ಧ ಸುಳ್ಳು. ಸಮುದಾಯದವರು ಜೆಡಿಎಸ್ ಪಕ್ಷದ ಬೆನ್ನೆಲುಬಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಲಿದ್ದಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.


    ಬೇಲೂರು ವಿಧಾನಸಭಾ ಕ್ಷೇತ್ರದ ನಾಗೇನಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಬಂಟೇನಹಳ್ಳಿಯಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ಎಸ್.ಲಿಂಗೇಶ್ ಪರ ರೋಡ್ ಶೋ ಮೂಲಕ ಮತಯಾಚಿಸಿ ಮಾತನಾಡಿದ ಅವರು. ಬೇಲೂರು ವಿಧಾನಸಭಾ ಚುನಾವಣೆ ಪ್ರಚಾರವನ್ನು ಮೊದಲಿಂದಲೂ ಈಶಾನ್ಯ ಭಾಗದಲ್ಲಿರುವ ಬಂಟೇನಹಳ್ಳಿಯಿಂದಲೇ ಪ್ರಾರಂಭಿಸುವುದು ಪ್ರತೀತಿ. ಈ ಭಾಗವು ಜೆಡಿಎಸ್ ಪಕ್ಷಕ್ಕೆ ನೆಲೆ ತಂದು ಕೊಟ್ಟಿರುವ ಗ್ರಾಮವಾಗಿದೆ ಎಂದರು.


    ರಾಜ್ಯದಲ್ಲಿ ಜೆಡಿಎಸ್ ಪಕ್ಷ ದೇವೇಗೌಡರ ಆಡಳಿತದಿಂದಲೂ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡು ಬಂದಿದೆ. ಆದರೆ, ಬಿಜೆಪಿಯವರು ಮುಸಲ್ಮಾನರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಾರೆ. ಮುಸ್ಲಿಮರು ಮಾರುವ ಯಾವುದೇ ವಸ್ತುಗಳನ್ನು ಖರೀದಿಸಬಾರದು, ಅವರನ್ನು ದೇಶದಿಂದಲೇ ಓಡಿಸಬೇಕೆಂಬ ಹೇಳಿಕೆಗಳನ್ನು ನೀಡುತ್ತಾ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಮುಸಲ್ಮಾನರು ಹೆದರುವ ಅಗತ್ಯವಿಲ್ಲ. ನಿಮ್ಮ ಜತೆಗೆ ಜೆಡಿಎಸ್ ಪಕ್ಷವಿದೆ. ನಿಮಗೆ ಯಾವುದೇ ರೀತಿ ನೋವಾಗದಂತೆ ನಿರ್ಭೀತಿಯಿಂದ ಬದುಕುವಂತೆ ಮಾಡಲು ಎಚ್.ಡಿ.ಕುಮಾರಸ್ವಾಮಿ ಇದ್ದಾರೆ. ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಲು ಬೇಲೂರು ಕ್ಷೇತ್ರದಲ್ಲಿ ಕೆ.ಎಸ್.ಲಿಂಗೇಶ್ ಅವರನ್ನು ಗೆಲ್ಲಿಸಲು ಎಲ್ಲರೂ ಶ್ರಮಿಸಬೇಕೆಂದು ಮನವಿ ಮಾಡಿದರು.


    ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ನಾನು 5 ವರ್ಷ ಅಧಿಕಾರದಲ್ಲಿದ್ದೆ. ಅದರಲ್ಲಿ ಎರಡು ವರ್ಷ ಕರೊನಾ ನಂತರ ಸಮ್ಮಿಶ್ರ ಸರ್ಕಾರವನ್ನು ಬಿಜೆಪಿಯವರು ಬೀಳಿಸಿದರು. ಇದರ ಜತೆಗೆ ಕುಮಾರಸ್ವಾಮಿ ಅವರು ಬೇಲೂರು ಕ್ಷೇತ್ರಕ್ಕೆ ಮೀಸಲಿಟ್ಟಿದ್ದ ಅನುದಾನವನ್ನು ಬಿಜೆಪಿ ಸರ್ಕಾರದಲ್ಲಿ ಹಿಂಪಡೆಯಲಾಯಿತು. ಆದರೂ, ನಾನು ಹಗಲು ರಾತ್ರಿ ಎನ್ನದೆ ಅನುದಾನ ತರುವಲ್ಲಿ ಯಶಸ್ವಿಯಾದೆ. ನನ್ನ ಕ್ಷೇತ್ರಕ್ಕೆ 1800 ಕೋಟಿ ರೂ.ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಇನ್ನೂ ಅಭಿವೃದ್ಧಿ ಮಾಡಬೇಕಿದೆ. ಅದಕ್ಕಾಗಿ ಮತ್ತೊಮ್ಮೆ ನನಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.


    ಜಿಲ್ಲಾ ಸಹಕಾರ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಂ.ಎ.ನಾಗರಾಜ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರವಿ ಕುಮಾರ್, ಜೆಡಿಎಸ್ ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಎಚ್.ಮಹೇಶ್, ಜೆಡಿಎಸ್ ಮುಖಂಡರಾದ ಮಹದೇವ್, ರಫೀಕ್, ದಿಲೀಪ, ಗ್ರಾಪಂ ಮಾಜಿ ಅಧ್ಯಕ್ಷ ನಾಗೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts