More

    ಮುಳಬಾಗಿನತ್ತ ಕಾಡಾನೆಗಳ ಹಿಂಡು

    ಮುಳಬಾಗಿಲು : ಬಂಗಾರಪೇಟೆ, ಕೆಜಿಎಫ್, ಮಾಲೂರು ತಾಲೂಕುಗಳ ಗಡಿಗ್ರಾಮಗಳಿಗೆ ಬರುತ್ತಿದ್ದ ಆನೆಗಳ ಹಿಂಡು ಬುಧವಾರ ಮುಳಬಾಗಿಲು ತಾಲೂಕಿನ ಆಂಧ್ರ ಗಡಿಯ ತಾಯಲೂರು ಸಮೀಪದ ಮದ್ದೇರಿ ಮತ್ತಿತರ ಕಡೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿವೆ.
    ಪಕ್ಕದ ಆಂಧ್ರ, ತಮಿಳುನಾಡು ಗಡಿಭಾಗಗಳ ಅರಣ್ಯಗಳಿಂದ ಬಂದ 17ಕ್ಕೂ ಹೆಚ್ಚು ಆನೆಗಳ ಹಿಂಡು ಬುಧವಾರ ಮದ್ದೇರಿ ಕೆರೆಯಲ್ಲಿ ಕಾಣಿಸಿಕೊಂಡಿವೆ. ಪಕ್ಕದ ಸೋಮರಸನಹಳ್ಳಿಯ ರೆಡ್ಡಪ್ಪ ಎಂಬುವರ 5 ಎಕರೆ ಬಾಳೆ ತೋಟ ನಾಶಪಡಿಸಿವೆ, ಇದಲ್ಲದೆ ಇನ್ನೂ ಅನೇಕ ತೋಟಗಳಿಗೆ ನುಗ್ಗಿ ದಾಂಧಲೆ ಮಾಡಿವೆ.
    ತಹಸೀಲ್ದಾರ್ ಕೆ.ಎನ್.ರಾಜಶೇಖರ್, ಸಿಪಿಐ ಎನ್.ಗೋಪಾಲ್‌ನಾಯಕ್, ಗ್ರಾಮಾಂತರ ಠಾಣೆ ಪಿಎಸ್‌ಐ ಆರ್.ಪ್ರದೀಪ್‌ಸಿಂಗ್, ಅರಣ್ಯ ಇಲಾಖೆ ಎಸಿಎಫ್ ಅಶ್ವತ್ಥಪ್ಪ, ಆರ್‌ಎಫ್‌ಒ ಟಿ.ಎನ್.ರವಿಕೀರ್ತಿ ಸೇರಿ ಬಂಗಾರಪೇಟೆ ಮತ್ತು ಮುಳಬಾಗಿಲಿನ ಅರಣ್ಯ ಇಲಾಖೆಯ 30ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ರಾತ್ರಿ ವೇಳೆಯಲ್ಲಿ ಆನೆಗಳನ್ನು ಆಂಧ್ರದ ಕೌಂಡಿನ್ಯ ನದಿವ್ಯಾಪ್ತಿಯ ಅರಣ್ಯಕ್ಕೆ ಓಡಿಸಲು ತಯಾರು ಮಾಡಿಕೊಂಡಿದ್ದಾರೆ. ಸಂಜೆ ಎಸಿ ಸೋಮಶೇಖರ್ ಸ್ಥಳಕ್ಕೆ ಭೇಟಿ ನೀಡಿ ನಂತರ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದಿದ್ದಾರೆ.
    ತಾಲೂಕು ಆಡಳಿತ, ಅರಣ್ಯ ಮತ್ತು ಪೊಲೀಸ್ ಇಲಾಖೆ, ಗ್ರಾಪಂನಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಡಂಗುರ ಬಾರಿಸಿ ಆನೆಗಳು ಬಂದಿರುವ ಬಗ್ಗೆ ಜಾಗೃತಿ ಮೂಡಿಸಿ ರಾತ್ರಿ ವೇಳೆ ಯಾರೂ ಸಂಚರಿಸದಂತೆ ಎಚ್ಚರಿಕೆ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts