More

    ಮುಖ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

    ಹಿರೇಕೆರೂರ:ಕುಡಿಯುವ ನೀರು ಸರಬರಾಜಿನ ವಿದ್ಯುತ್ ಪರಿವರ್ತಕದ ದುರಸ್ತಿ, ಅಳವಡಿಕೆ ಕುರಿತು ತಪ್ಪು ಮಾಹಿತಿ ನೀಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ಕೃಷಿ ಸಚಿವ ಬಿ.ಸಿ. ಪಾಟೀಲ ಸೂಚನೆ ನೀಡಿದರು.

    ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಯಿತು.

    ಪಪಂ ಮುಖ್ಯಾಧಿಕಾರಿ ರಾಜಾರಾಮ ಪವಾರ, ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಟಿಸಿ ರಿಪೇರಿಗೆ 3.5 ಲಕ್ಷ ರೂ. ಹಾಗೂ ಅಲ್ಲಿಯೇ ಹೊಸ ಟಿಸಿ ಅಳವಡಿಕೆಗೆ 2 ಲಕ್ಷ ರೂ. ವ್ಯಯಿಸಲಾಗಿದೆ ಎಂದು ವರದಿ ನೀಡಿದರು.

    ಟಿಸಿ ಕುರಿತು ಪ್ರಶ್ನಿಸಿದಾಗ ಹೆಸ್ಕಾಂ ಅಧಿಕಾರಿಗಳೂ ಸರಿಯಾದ ಉತ್ತರ ನೀಡಲಿಲ್ಲ. ಇದರಿಂದ ಕೆರಳಿದ ಸಚಿವರು, ಪ.ಪಂ. ಮುಖ್ಯಾಧಿಕಾರಿ ತಪ್ಪು ಮಾಹಿತಿ ನೀಡಿ ಸಭೆಯ ದಿಕ್ಕು ತಪ್ಪಿಸುವ ಕಾರ್ಯ ಮಾಡಿದ್ದಾರೆ. ತಪ್ಪು ಉತ್ತರ ನೀಡಿರುವುದರಿಂದ ಅವರ ಮೇಲೆ ಕರ್ತವ್ಯ ನಿರ್ಲಕ್ಷ್ಯಆರೋಪದಡಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಪತ್ರ ಬರೆಯಿರಿ ಎಂದು ತಾಪಂ ಇಒ ಶ್ರೀನಿವಾಸ ಎಚ್.ಜಿ. ಅವರಿಗೆ ಸೂಚಿಸಿದರು.

    ಪಟ್ಟಣದ ಸರ್ವಜ್ಞ ವೃತ್ತದ ಬಳಿ ನಿಯಮ ಬಾಹಿರವಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡ ಮಾಲೀಕರ ವಿರುದ್ಧ ಶಿಸ್ತು ಕ್ರಮ, ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿ ಇಟ್ಟಿರುವ ಗೂಡಂಗಡಿಗಳನ್ನು ತೆರವುಗೊಳಿಸಿ ಕೈಗಾಡಿಯಲ್ಲಿ ವ್ಯಾಪಾರಕ್ಕೆ ಅನುವು ಮಾಡಿಕೊಡುವಂತೆ ಹಾಗೂ ಹಂದಿಗಳನ್ನು ಸ್ಥಳಾಂತರ ಮಾಡುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.

    ತಾಲೂಕಿನ ಕೆಲವು ಹಳ್ಳಿಗಳಲ್ಲಿ ನಿರ್ವಿುಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಸಾರ್ವಜನಿಕರಿಗೆ ನೀರು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ ಎಂಬ ದೂರು ಬರುತ್ತಿವೆ. ಚನ್ನಳ್ಳಿ ಗ್ರಾಮದಲ್ಲಿ ನಾನೇ ಖುದ್ದು ಪರಿಶೀಲನೆ ನಡೆಸಿದ್ದು, ಅಲ್ಲಿಯೂ ನೀರು ದೊರಕುತ್ತಿಲ್ಲ. ಕೂಡಲೆ ಅದನ್ನು ಸರಿಪಡಿಸಬೇಕು ಎಂದು ಜಿ.ಪಂ. ಕುಡಿಯುವ ನೀರು ವಿಭಾಗದ ಅಧಿಕಾರಿಗಳಿಗೆ ಸಚಿವ ಬಿ.ಸಿ.ಪಾಟೀಲ ಸೂಚಿಸಿದರು.

    ತೋಟಗಾರಿಕೆ, ಆಹಾರ, ಲೋಕೋಪಯೋಗಿ, ಕಂದಾಯ, ಶಿಕ್ಷಣ, ಅರಣ್ಯ, ಹೆಸ್ಕಾಂ, ಆರೋಗ್ಯ, ಸಮಾಜ ಕಲ್ಯಾಣ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.

    ಹಿರೇಕೆರೂರು ತಾಲೂಕಿನಲ್ಲಿ ಇಲ್ಲಿಯವರೆಗೂ ಒಂದೇ ಒಂದು ಕರೊನಾ ಪ್ರಕರಣ ದಾಖಲಾಗದಂತೆ ತಾಲೂಕಿನ ಜನತೆಯ ಆರೋಗ್ಯ ರಕ್ಷಣೆ ಮಾಡಿದ ತಾಲೂಕು ಆಡಳಿತಕ್ಕೆ ಸಭೆ ಧನ್ಯವಾದ ಸಲ್ಲಿಸಿತು.

    ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ. ಬಣಕಾರ, ತಾ.ಪಂ. ಅಧ್ಯಕ್ಷ ರಾಜು ಬಣಕಾರ, ಜಿ.ಪಂ. ಸದಸ್ಯರಾದ ಎಸ್.ಕೆ. ಕರಿಯಣ್ಣನವರ, ಸುಮಿತ್ರಾ ಪಾಟೀಲ, ಮಹದೇವಕ್ಕ ಗೋಪಕ್ಕಳ್ಳಿ, ಶಿವರಾಜ ಹರಿಜನ, ಉಪವಿಭಾಗಾಧಿಕಾರಿ ಡಾ.ದಿಲಿಸ್ ಶಶಿ, ತಹಸೀಲ್ದಾರರಾದ ರಿಯಾಜುದ್ದಿನ್ ಬಾಗವಾನ, ಗುರುಬಸವರಾಜ ಇತರರು ಇದ್ದರು.

    ಗುತ್ತಿಗೆದಾರ ಕಪ್ಪುಪಟ್ಟಿಗೆ:ಜಿ.ಪಂ. ಇಲಾಖೆಯಿಂದ ಹರಿಹರ ಸಮ್ಮಸಗಿ-ಯಲವದಹಳ್ಳಿ ರಸ್ತೆ ಡಾಂಬರೀಕರಣಕ್ಕಾಗಿ 10 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಮಂಜೂರಾಗಿದ್ದು, ಗುತ್ತಿಗೆದಾರರ ನಿರ್ಲಕ್ಷ್ಯಂದಾಗಿ ಅದು ನನೆಗುದ್ದಿಗೆ ಬಿದ್ದಿದೆ. ಕೂಡಲೆ ಜಿಲ್ಲಾಧಿಕಾರಿಗೆ ಸೂಚಿಸಿ, ಆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಸಭೆಯಲ್ಲಿ ಠರಾವು ಮಾಡಲಾಯಿತು.

    ನಂತರ ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಇನ್ನು ಮುಂಗಾರು ಪ್ರಾರಂಭವಾಗುತ್ತದೆ. ತಾಲೂಕಿನಲ್ಲಿ ಯಾವುದೇ ರೀತಿಯ ಬೀಜ, ಗೊಬ್ಬರ ಹಾಗೂ ಕೃಷಿ ಸಲಕರಣೆ ಕೊರತೆಯಾದಂತೆ ನೋಡಿಕೊಳ್ಳಬೇಕು. ಅಲ್ಲದೆ, ಅಧಿಕಾರಿಗಳು ಕಚೇರಿ ಬಿಟ್ಟು ರೈತರ ಹೊಲಗಳಿಗೆ ಭೇಟಿ ನೀಡಬೇಕು. ಅಂದಾಗ ಮಾತ್ರ ರೈತರ ಸಮಸ್ಯೆಗಳು ಗೊತ್ತಾಗುತ್ತವೆ ಎಂದು ಸಲಹೆ ನೀಡಿದರು.

    ಕಿಸಾನ್ ಸಮ್ಮಾನ್ ಹಣ ಮಂಜೂರು : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಹಾಗೂ ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಫಲಾನುಭವಿಗಳಿಗೆ ಹಣ ಮಂಜೂರಾಗಿದ್ದು, ಇನ್ನು ಕೆಲವು ರೈತರಿಗೆ ದಾಖಲಾತಿ ಸಮಸ್ಯೆಯಿಂದ ಹಣ ಜಮೆ ಆಗಿಲ್ಲ. ಜಮೆ ಆಗದೆ ಇರುವ ರೈತರು ತಮ್ಮ ಆಧಾರ್ ದಾಖಲಾತಿಯೊಂದಿಗೆ 3 ದಿನದಲ್ಲಿ ಕೃಷಿ ಇಲಾಖೆಗೆ ತೆರಳಿ ಮಾಹಿತಿ ನೀಡಬೇಕು ಹಾಗೂ ದಾಖಲಾತಿಗಳಲ್ಲಿ ಏನಾದರೂ ಲೋಪದೋಷಗಳಿದ್ದಲ್ಲಿ ಪರಿಶೀಲಿಸಿಕೊಳ್ಳಬೇಕು. ಅಧಿಕಾರಿಗಳು ರೈತರಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಒಂದು ವೇಳೆ ರೈತರಿಂದ ದೂರುಗಳು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts