More

    ಮುಖ್ಯರಸ್ತೆ ಸಮಸ್ಯೆಗಿಲ್ಲ ಮುಕ್ತಿ

    ವೀರಯ್ಯಸ್ವಾಮಿ ಚೌಕೀಮಠ ಬ್ಯಾಡಗಿ

    ಪಟ್ಟಣದ ಮುಖ್ಯರಸ್ತೆ (ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ) ಅಕ್ಷರಶಃ ಜನರ ಜೀವ ಹಿಂಡುತ್ತಿದೆ. ರಸ್ತೆ ಸಂಪೂರ್ಣ ಹಾಳಾಗಿದ್ದು, ಧೂಳಿನ ಸಮಸ್ಯೆಯಿಂದ ಜನ ಬೇಸತ್ತಿದ್ದಾರೆ.

    ಮುಖ್ಯ ರಸ್ತೆ ವಿಸ್ತರಣೆಗೆ ಕಳೆದ ಹತ್ತು ವರ್ಷಗಳಿಂದ ಆಗ್ರಹಿಸಲಾಗುತ್ತಿದೆಯಾದರೂ ಕಾಲ ಕೂಡಿಬಂದಿಲ್ಲ. ಸಂಘ, ಸಂಸ್ಥೆಗಳು ರಸ್ತೆ ವಿಸ್ತರಣೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ, ಅರೆಬೆತ್ತಲೆ ಮೆರವಣಿಗೆ ಸೇರಿದಂತೆ ನಾನಾ ಹೋರಾಟ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ. ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಖ್ಯಾತಿ ಇರುವ ಪಟ್ಟಣಕ್ಕೆ ಮುಖ್ಯರಸ್ತೆಯ ಅವ್ಯವಸ್ಥೆ ಕಪ್ಪುಚುಕ್ಕೆಯಾಗಿದೆ.

    ವಾಹನ ಚಾಲಕರಿಗೆ ನರಕಯಾತನೆ: ಹಾವೇರಿ, ರಾಣೆಬೆನ್ನೂರ, ಬ್ಯಾಡಗಿ ರೈಲು ನಿಲ್ದಾಣಕ್ಕೆ ತೆರಳುವ ಪ್ರಮುಖ ಸಂಪರ್ಕ ರಸ್ತೆ ಇದಾಗಿದ್ದು, ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿವೆ. ಈ ರಸ್ತೆ ಮೂಲಕವೇ ಮೆಣಸಿನಕಾಯಿ ಮಾರುಕಟ್ಟೆಗೂ ದೊಡ್ಡ ಪ್ರಮಾಣದ ವಾಹನಗಳು ಬಂದು ಹೋಗುತ್ತಿವೆ. ಎಲ್ಲೆಡೆ ತಗ್ಗು- ಗುಂಡಿಗಳು ಬಿದ್ದಿದ್ದು, ವಾಹನ ಚಾಲಕರಿಗೆ ಕಿರಿಕಿರಿಯಾಗುತ್ತಿದೆ.

    ದುರ್ನಾತಕ್ಕೆ ಸುಸ್ತು: ಹದಗೆಟ್ಟ ರಸ್ತೆಯ ಎರಡು ಬದಿಯ ಚರಂಡಿಯಲ್ಲಿ ಹೂಳು, ತ್ಯಾಜ್ಯ, ಕೊಳಚೆ ನೀರು ನಿಂತು ದುರ್ನಾತ ಹರಡುತ್ತಿದೆ. ಜನ ಮೂಗು ಮುಚ್ಚಿಕೊಂಡು ಓಡಾಡಬೇಕಿದೆ. ಪಟ್ಟಣದ ಕೈಗೊಂಡಿರುವ ಯುಜಿಡಿ ಕಾಮಗಾರಿಯಿಂದಲೂ ಕೆಲವೆಡೆ ಮುಖ್ಯ ರಸ್ತೆ ಹಾಳಾಗಿದೆ.

    ಆರೋಗ್ಯ ಸಮಸ್ಯೆ: ರಸ್ತೆಯ ಎಡ- ಬಲಗಳಲ್ಲಿರುವ ಅಂಗಡಿಗಳ ವರ್ತಕರು ಧೂಳಿನಿಂದ ಪ್ರತಿದಿನ ಪರದಾಡುವಂತಾಗಿದೆ. ಕೆಲದಿನಗಳ ಹಿಂದೆ ವರ್ತಕರು ಧೂಳಿನಿಂದ ರಕ್ಷಣೆಗೆ ಸ್ವಂತ ಖರ್ಚಿನಲ್ಲಿ ರಸ್ತೆಗೆ ನೀರು ಹಾಕಿಸಿದ ಉದಾಹರಣೆಯಿದೆ. ಧೂಳಿನಿಂದ ರಸ್ತೆಯಲ್ಲಿ ಓಡಾಡುವವರ ಹಾಗೂ ಅಕ್ಕಪಕ್ಕದ ನಿವಾಸಿಗಳ ಆರೋಗ್ಯ ಹದಗೆಡುತ್ತಿದೆ. ಕೆಲವರು ಅಸ್ತಮಾ, ಅಲರ್ಜಿ, ಶ್ವಾಸಕೋಶದ ತೊಂದರೆಗಳಿಂದ ಬಳಲುತ್ತಿದ್ದಾರೆ. ಮುಖ್ಯ ರಸ್ತೆಯಲ್ಲಿನ ಸಮಸ್ಯೆ ಕುರಿತು ಪ್ರಶ್ನಿಸಿದರೆ, ಲೋಕೋಪಯೋಗಿ ಹಾಗೂ ಕಂದಾಯ ಇಲಾಖೆ, ಪುರಸಭೆಯವರು ಹಾರಿಕೆ ಉತ್ತರ ನೀಡಿ, ಒಬ್ಬರ ಮೇಲೊಬ್ಬರು ದೂರುತ್ತಾರೆ. ಸಮಸ್ಯೆಗೆ ಹೊಣೆ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗದಿರುವುದು ವಿಪರ್ಯಾಸ. ಜನಪ್ರತಿನಿಧಿಗಳಾದರೂ ಇತ್ತ ಗಮನ ಹರಿಸಬೇಕಿದೆ.

    ಮುಖ್ಯ ರಸ್ತೆ ಸಮಸ್ಯೆಗೆ ಲೋಕೋಪಯೋಗಿ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ. ಸರ್ಕಾರ ಹಾಗೂ ಅಧಿಕಾರಿಗಳ ತಪ್ಪಿನಿಂದ ಜನ ಅನುಭವಿಸುತ್ತಿರುವ ತೊಂದರೆ ಹೇಳತೀರದು. ಜಿಲ್ಲಾಧಿಕಾರಿ ಈಗಲಾದರೂ ಗಮನಹರಿಸಿ ಸಾರ್ವಜನಿಕರ ಹಿತ ಕಾಯಲಿ. ನಿರ್ಲಕ್ಷಿಸಿದರೆ ಲೋಕೋಪಯೋಗಿ ಇಂಜಿನಿಯರ್​ಗಳ ಕಾರ್ಯ ವಿಳಂಬ ವಿರೋಧಿಸಿ ಪ್ರತಿಭಟನೆ ಮಾಡಲಾಗುವುದು. | ಮಲ್ಲೇಶಪ್ಪ ಚಿಕ್ಕಣ್ಣನವರ, ಭ್ರಷ್ಟಾಚಾರ ನಿಮೂಲನೆ ಸಮಿತಿ ಸಂಚಾಲಕ

    ಮುಖ್ಯ ರಸ್ತೆ ವಿಸ್ತರಣೆಗೆ 15.60 ಕೋಟಿ ರೂ. ಯೋಜನೆಯ ಪ್ರಸ್ತಾವನೆ ಸಲ್ಲಿಸಿದ್ದು, 10 ಕೋಟಿ ರೂ. ಪರಿಹಾರ ನೀಡಲು ಅಪೆಂಡಿಕ್ಸ್-ಇ ಯೋಜನೆಯಲ್ಲಿ ಹಣವಿದೆ. ಉಪವಿಭಾಗಾಧಿಕಾರಿ, ತಹಸೀಲ್ದಾರ್ ಮುಂದಿನ ಕ್ರಮ ಕೈಗೊಳ್ಳಬೇಕಿದೆ. ಮೇಲಧಿಕಾರಿಗಳ ಆದೇಶ ನಾವು ಪಾಲಿಸಲಿದ್ದೇವೆ. | ಸುಧೀಂದ್ರ ದೊಡ್ಡಮನಿ, ಲೋಕೋಪಯೋಗಿ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts