More

    ಮುಂದುವರಿದ ವೋಲ್ಟೇಜ್ ಸಮಸ್ಯೆ

    ಶಿರಸಿ: ತಾಲೂಕಿನಲ್ಲಿ ವಿದ್ಯುತ್ ವೋಲ್ಟೇಜ್ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ರೂಪಿಸಲಾಗಿರುವ ಹೊಸ ಉಪಕೇಂದ್ರಗಳ ಸ್ಥಾಪನೆ ಯೋಜನೆಯು ಅನುಷ್ಠಾನದ ಹಂತದಲ್ಲೇ ವಿಳಂಬವಾಗುತ್ತಿದೆ. ಇದರಿಂದ ಸಾರ್ವಜನಿಕರು ಅನಿವಾರ್ಯವಾಗಿ ಸಮಸ್ಯೆಯ ಜತೆಗೇ ಜೀವನ ನಡೆಸುವಂತಾಗಿದೆ.

    ತಾಲೂಕಿನ ಬನವಾಸಿ ಭಾಗಕ್ಕೆ ಎಸಳೆ ಗ್ರಿಡ್​ನಿಂದ ವಿದ್ಯುತ್ ಪೂರೈಕೆಯಾದರೆ, ಹತ್ತರಗಿ ಹಾಗೂ ಸಿದ್ದಾಪುರ ತಾಲೂಕಿನ ಕಾನಸೂರು ಭಾಗಕ್ಕೆ ಶಿರಸಿ ಗ್ರಿಡ್​ನಿಂದ ವಿದ್ಯುತ್ ಪೂರೈಕೆಯಾಗುತ್ತದೆ. 30ರಿಂದ 35 ಕಿ.ಮೀ. ದೂರದಿಂದ ವಿದ್ಯುತ್ ಹೋಗುವುದರಿಂದ ಅಲ್ಲಿನ ಜನರಿಗೆ ಪ್ರತಿದಿನವೂ ಲೋ ವೋಲ್ಟೇಜ್ ಸಮಸ್ಯೆ ತಪ್ಪಿದ್ದಲ್ಲ. ಹೀಗಾಗಿ, ಈ ಮೂರು ಭಾಗಗಳಲ್ಲಿ ಹೊಸ ಗ್ರಿಡ್ ನಿರ್ವಿುಸಬೇಕು ಎಂಬುದು ಈ ಭಾಗದ ಜನರ ದಶಕಗಳ ಹಿಂದಿನ ಬೇಡಿಕೆಯಾಗಿದೆ. ಆದರೆ, ಗ್ರಿಡ್ ನಿರ್ವಣಕ್ಕೆ ಜಾಗ ಮಂಜೂರಾತಿ ವಿಷಯದಲ್ಲಿನ ಗೊಂದಲ ದಶಕ ಕಳೆದರೂ ಬಗೆಹರಿದಿಲ್ಲ. ಇದರಿಂದ ಈ ಉಪಕೇಂದ್ರಗಳ ವ್ಯಾಪ್ತಿಯ ಗ್ರಾಮೀಣ ಭಾಗದ 1 ಲಕ್ಷಕ್ಕೂ ಹೆಚ್ಚಿನ ಜನರು ಲೋ ವೋಲ್ಟೇಜ್ ಸಮಸ್ಯೆ ಎದುರಿಸುತ್ತಿದ್ದಾರೆ.

    ಈ ವರ್ಷವೂ ತಪ್ಪದ ಸಮಸ್ಯೆ: ಬನವಾಸಿಯಲ್ಲಿ ಹೊಸ ಉಪಕೇಂದ್ರ ನಿರ್ವಿುಸುವ ಸಂಬಂಧ ಸರ್ಕಾರದಿಂದ ಅನುಮತಿ ದೊರೆತಿದೆ. 2012ರಲ್ಲಿ ರಾಜ್ಯ ಅರಣ್ಯ ಇಲಾಖೆ ಕಡಕೋಡದಲ್ಲಿ ಒಂದು ಹೆಕ್ಟೇರ್ ಅರಣ್ಯ ಭೂಮಿ ಮಂಜೂರಿ ಮಾಡಿತ್ತು. ಈ ಸಂದರ್ಭದಲ್ಲಿ ಚಂದ್ರಗುತ್ತಿಯಿಂದ ಯೋಜಿತ ಉಪಕೇಂದ್ರಕ್ಕೆ ಲೈನ್ ಎಳೆಯುವ ಯೋಜನೆ ರೂಪಿಸಲಾಗಿತ್ತು. ಆದರೆ, ಕಾಮಗಾರಿ ಆರಂಭಿಸುವಲ್ಲಿ ವಿಳಂಬವಾಯಿತು. ಇದೇ ಸಂದರ್ಭದಲ್ಲಿ ಉಪ ಕೇಂದ್ರ ನಿರ್ವಣಕ್ಕೆ ಒಂದು ಹೆಕ್ಟೇರ್ ಹಾಗೂ ಲೈನ್ ಎಳೆಯಲು ಹೆಚ್ಚುವರಿ ಜಾಗ ಬೇಕಾಗಿರುವ ಕಾರಣ, ಕೇಂದ್ರ ಅರಣ್ಯ ಪರಿಸರ ಮಂತ್ರಾಲಯವು, ರಾಜ್ಯ ಅರಣ್ಯ ಇಲಾಖೆಗೆ ಜಾಗ ಮಂಜೂರಾತಿ ಅಧಿಕಾರ ಇಲ್ಲವೆಂದು ಹೇಳಿ, ವಾಪಸ್ ಪಡೆಯುವಂತೆ ಆದೇಶಿಸಿತ್ತು.

    2018ರ ಜನವರಿಯಲ್ಲಿ ಅರಣ್ಯ ಇಲಾಖೆ ಜಾಗ ವಾಪಸ್ ಪಡೆದ ಮೇಲೆ, 10.29 ಕೋಟಿ ರೂ. ವೆಚ್ಚದ ಉಪ ಕೇಂದ್ರ ನಿರ್ಮಾಣ ಯೋಜನೆ ನನೆಗುದಿಗೆ ಬಿದ್ದಿತು. ಅನಂತರ ಹೆಸ್ಕಾಂ, ಜಡೆ ಕೇಂದ್ರದಿಂದ ವಿದ್ಯುತ್ ಲೈನ್ ಎಳೆಯುವ ಹೊಸ

    ಪ್ರಸ್ತಾವ ಸಿದ್ಧಪಡಿಸಿ, ಜಾಗ ಮಂಜೂರು ಮಾಡುವಂತೆ ಕೇಂದ್ರ ಅರಣ್ಯ ಪರಿಸರ ಮಂತ್ರಾಲಯಕ್ಕೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿ ವರ್ಷ ಕಳೆದಿದೆ. ಆದರೆ, ಇನ್ನೂ ಅನುಮತಿ ಬಂದಿಲ್ಲ. ಹೀಗಾಗಿ, ಈ ಬಾರಿಯೂ ಬನವಾಸಿಗರಿಗೆ ಲೋ ವೋಲ್ಟೇಜ್ ಸಮಸ್ಯೆ ತಪ್ಪಿದ್ದಲ್ಲ.

    ಅರಣ್ಯ ಭವನಕ್ಕೆ ಸಲ್ಲಿಕೆಯಾಗಿಲ್ಲ: ತಾಲೂಕಿನ ಹತ್ತರಗಿಯ ಬೆಟ್ಟದ ಜಾಗ ಮಂಜೂರಾತಿ ವಿಷಯವಾಗಿ ಹೆಸ್ಕಾಂನ ಕಾಮಗಾರಿ ವಿಭಾಗದಿಂದ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. 1.22 ಹೆಕ್ಟೇರ್ ಜಾಗವನ್ನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವ ನೀಡಲಾಗಿದೆ. ಆದರೆ, ಆ ಪ್ರಸ್ತಾವ ಸರ್ಕಾರಕ್ಕೆ ಈವರೆಗೆ ಸಲ್ಲಿಕೆಯಾಗಿಲ್ಲ. ಹೀಗಾಗಿ, ಯೋಜನೆ ಅನುಷ್ಠಾನ ನಿಂತ ನೀರಾಗಿದೆ. ಇದರ ಜತೆಗೆ ಶಿರಸಿ, ಸಿದ್ದಾಪುರ ತಾಲೂಕುಗಳ ಗಡಿಯ ಅಡಕಳ್ಳಿ ಸಮೀಪ ಗ್ರಿಡ್ ನಿರ್ವಿುಸಲು 1.33 ಹೆ. ಅರಣ್ಯ ಜಾಗ ಗುರುತಿಸಲಾಗಿದೆ. ಆದರೆ, ಯೋಜನೆ ಅನುಷ್ಠಾನವಾಗಲು ಅರಣ್ಯ ಇಲಾಖೆಗೆ (ಅಂಡರ್​ಟೇಕ್) ಹಸ್ತಾಂತರ ಪತ್ರ ಸಲ್ಲಿಕೆ ಆಗಬೇಕಿದೆ. ಈ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಹಸ್ತಾಂತರ ಪತ್ರ ಸಲ್ಲಿಕೆಯಾದರೆ ಮಾತ್ರ ಜಾಗ ಮಂಜೂರಾಗಲಿದೆ.

    ಶಿರಸಿ, ಸಿದ್ದಾಪುರ ತಾಲೂಕಿನಲ್ಲಿ 3 ವಿದ್ಯುತ್ ಉಪಕೇಂದ್ರ ಅನುಷ್ಠಾನ ಮಾಡಲು ಇಲಾಖೆ ವತಿಯಿಂದ ಅಗತ್ಯ ಪ್ರಯತ್ನ ಮುಂದುವರಿದಿದೆ. ಯೋಜಿತ ಯೋಜನೆಗಳು ಪೂರ್ಣಗೊಂಡರೆ ಶಿರಸಿ, ಸಿದ್ದಾಪುರ ತಾಲೂಕಿನ ಹಲವು ಹಳ್ಳಿಗಳ ವಿದ್ಯುತ್ ಸಮಸ್ಯೆ ಪರಿಹಾರ ಆಗಲಿದೆ. ಜನಪ್ರತಿನಿಧಿಗಳ ಗಮನಕ್ಕೆ ಈ ವಿಷಯ ತರಲಾಗಿದೆ. ತ್ವರಿತವಾಗಿ ಜಾಗ ಮಂಜೂರಾಗುವ ವಿಶ್ವಾಸವಿದೆ.
    | ದೀಪಕ ಕಾಮತ್ ಹೆಸ್ಕಾಂ ಶಿರಸಿ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್

    ಸಾಕಷ್ಟು ವರ್ಷಗಳಿಂದ ಬನವಾಸಿ ಹೋಬಳಿಯಲ್ಲಿ ಲೋ ವೋಲ್ಟೇಜ್ ಸಮಸ್ಯೆ ಕಾಡುತ್ತಿದೆ. ಬೇಸಿಗೆಯಲ್ಲಂತೂ ಕೃಷಿ ಮಾಡಲು ಆಗದ ಸ್ಥಿತಿ ರೈತರದ್ದಾಗಿದೆ. ಎರಡ್ಮೂರು ವರ್ಷಗಳಿಂದ ಹೊಸ ಗ್ರಿಡ್ ಸ್ಥಾಪನೆ ಮಾಡುವುದಾಗಿ ಭರವಸೆ ನೀಡುತ್ತಿದ್ದಾರೆ ಹೊರತು ಅನುಷ್ಠಾನವೇ ಆಗಿಲ್ಲ. ಇದೇ ರೀತಿ ಲೋ ವೋಲ್ಟೇಜ್ ಸಮಸ್ಯೆಯಾಗುತ್ತಿದ್ದರೆ ಹೋಬಳಿಯಲ್ಲಿ ಕೃಷಿ ಮಾಡುವವರೇ ಇಲ್ಲದಂತಾಗುತ್ತಾರೆ.
    | ಶಿವಾಜಿ ಬಿ. ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts