More

    ಮುಂಗಾರು ಬೆಳೆ ವಿಮೆ ಕಂತು ಪಾವತಿಸಲು ರೈತರಿಗೆ ಸಲಹೆ

    ಹಾನಗಲ್ಲ: ಫಸಲ್​ಬಿಮಾ ಯೋಜನೆಯಡಿ ಮುಂಗಾರು ಹಂಗಾಮಿನ ಬೆಳೆ ವಿಮೆ ಯೋಜನೆಯ ಕಂತು ತುಂಬುವ ಅವಧಿ ಆರಂಭಗೊಂಡಿದ್ದು, ರೈತ ಸಮುದಾಯ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ತಾಲೂಕಿನ ಹಾನಗಲ್ಲ, ಅಕ್ಕಿಆಲೂರು, ಬೊಮ್ಮನಹಳ್ಳಿ ಮೂರು ಹೋಬಳಿಗಳಿಗೊಳಪಟ್ಟು ವಿವಿಧ ಬೆಳೆಗಳಿಗೆ ವಿಮಾ ಯೋಜನೆ ಜಾರಿಗೊಂಡಿದೆ. ಹಾನಗಲ್ಲ ಹೋಬಳಿಗೆ ಭತ್ತ (ಮಳೆಯಾಶ್ರಿತ), ಗೋವಿನಜೋಳ (ನೀರಾವರಿ), ರಾಗಿ, ಸೋಯಾ ಅವರೆ, ಹತ್ತಿ (ಮಳೆಯಾಶ್ರಿತ). ಅಕ್ಕಿಆಲೂರು ಹೋಬಳಿಯಲ್ಲಿ ಜೋಳ, ಶೇಂಗಾ, ಭತ್ತ, ರಾಗಿ, ಸೋಯಾ ಅವರೆ (ಮಳೆಯಾಶ್ರಿತ), ಗೋವಿನಜೋಳ (ನೀರಾವರಿ). ಬೊಮ್ಮನಹಳ್ಳಿ ಹೋಬಳಿಯಲ್ಲಿ ಜೋಳ, ಶೇಂಗಾ, ಭತ್ತ, ಸೋಯಾ ಅವರೆ, ಹತ್ತಿ (ಮಳೆಯಾಶ್ರಿತ), ಶೇಂಗಾ ಹಾಗೂ ಗೋವಿನಜೋಳ ಮತ್ತು ಹತ್ತಿ (ನೀರಾವರಿ) ಕ್ಷೇತ್ರಗಳ ಬೆಳೆಗಳು ಒಳಗೊಳ್ಳಲಿವೆ. ವಿಮಾ ಕಂತು ಕಟ್ಟಲು ಜುಲೈ-31 ಕೊನೆಯ ದಿನಾಂಕವಾಗಿದೆ. ಸ್ಥಳೀಯ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಸಹಕಾರಿ ಸಂಘಗಳಲ್ಲಿ ಕಂತು ತುಂಬಬಹುದಾಗಿದೆ. ತಮ್ಮ ಹೊಲದಲ್ಲಿ ಬೆಳೆದಂಥ ಬೆಳೆಯನ್ನೇ ಯೋಜನೆಯಲ್ಲಿ ದಾಖಲಿಸಬೇಕು. ಇಲ್ಲದಿದ್ದಲ್ಲಿ ಮುಂದೆ ಸಮೀಕ್ಷೆಯಲ್ಲಿ ಬೆಳೆ ತಾಳೆ ಹೊಂದದೇ ರೈತರು ಪರಿಹಾರದಿಂದ ವಂಚಿತರಾಗುವ ಅಪಾಯವಿದೆ ಎಂದು ರೈತರಿಗೆ ಮನವಿ ಮಾಡಿದರು.

    2018-19ರ ಮುಂಗಾರು ಹಂಗಾಮಿನಲ್ಲಿ ತಾಲೂಕಿನ 15117 ರೈತರಿಗೆ 35.76 ಕೋಟಿ ರೂ. ಬೆಳೆ ವಿಮೆ ಮಂಜೂರಾಗಿದ್ದು, ಇದರಲ್ಲಿ 13797 ರೈತರಿಗೆ 32.15 ಕೋಟಿ ರೂ. ಮೊತ್ತ ರೈತರ ಖಾತೆಗಳಿಗೆ ಜಮಾ ಆಗಿದೆ. 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಗೊಳಗಾದ ರೈತರಿಗೆ ಶೇ. 25ರಷ್ಟು ತಾತ್ಕಾಲಿಕ ಪರಿಹಾರ ಬಿಡುಗಡೆಗೊಳಿಸಲಾಗಿದ್ದು, 16609 ರೈತರಿಗೆ 15.11 ಕೋಟಿ ರೂ. ಮಂಜೂರಾಗಿದೆ. ಇದರಲ್ಲಿ 14.75 ಕೋಟಿ ರೂ. ಪರಿಹಾರ ಮೊತ್ತ ರೈತರ ಖಾತೆಗಳಿಗೆ ಜಮಾ ಆಗಿದೆ. ಇನ್ನುಳಿದ ಶೇ. 75ರಷ್ಟು ಪರಿಹಾರ ಮೊತ್ತವು ಬೆಳೆ ಕಟಾವು ಸಮೀಕ್ಷಾ ವರದಿಯನ್ನಾಧರಿಸಿ ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಶಾಸಕ ಸಿ.ಎಂ. ಉದಾಸಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts