More

    ಮುಂಗಾರು ಪೂರ್ವ ಮಳೆಗೆ ತಲ್ಲಣ

    ಧಾರವಾಡ: ನಗರದಲ್ಲಿ ಶುಕ್ರವಾರ ಸಂಜೆ ಬೀಸಿದ ಭಾರಿ ಗಾಳಿ ಹಾಗೂ ಬಿರುಸಿನ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮುಂಗಾರು ಪೂರ್ವ ಮಳೆ ನಗರದ ಜನತೆಯನ್ನು ತಲ್ಲಣಗೊಳಿಸಿದ್ದು, ಅಲ್ಲಲ್ಲಿ ಅವಘಡಗಳು ಸಂಭವಿಸಿವೆ.

    ಇಲ್ಲಿನ ಸಂಗೊಳ್ಳಿ ರಾಯಣ್ಣನಗರದಲ್ಲಿ ಭಾರಿ ಗಾತ್ರದ ಬೇವಿನ ಮರವೊಂದು ಉರುಳಿಬಿದ್ದಿದ್ದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

    ನಗರದ ಹಳೇ ಬಸ್ ನಿಲ್ದಾಣ ಬಳಿಯ ಎಚ್​ಡಿಎಂಸಿ ಹೆರಿಗೆ ಆಸ್ಪತ್ರೆ ಆವರಣದಲ್ಲಿ ಮರದ ಮೇಲೆ ವಿದ್ಯುತ್ ಕಂಬ ಉರುಳಿ ಬಿದ್ದಿದೆ. ಮಳೆಯಾಗುತ್ತಿದ್ದ ವೇಳೆ ಜನಸಂಚಾರ ಇರಲಿಲ್ಲ. ಕೂಡಲೆ ವಿದ್ಯುತ್ ಕಡಿತಗೊಳಿಸಿದ್ದರಿಂದ ಪ್ರಾಣಹಾನಿ ಸಂಭವಿಸಿಲ್ಲ. ಇದೇ ಆಸ್ಪತ್ರೆ ಆವರಣದಲ್ಲಿ ಬೃಹತ್ ಬೇವಿನ ಮರವೊಂದು ಉರುಳಿ ಬಿದ್ದಿದೆ.

    ಕೆಲಗೇರಿಯ ಆಂಜನೇಯನಗರದ ಮೊದಲ ಕ್ರಾಸ್​ನಲ್ಲಿ ಸೈಯದ್ ಹೆಬ್ಬಳ್ಳಿ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಹೆಂಚುಗಳು ಛಿದ್ರಗೊಂಡಿದ್ದು, ಯಾರಿಗೂ ಅಪಾಯವಾಗಿಲ್ಲ.

    ಮಾಳಮಡ್ಡಿಯ ರಾಯರ ಮಠದ ಬಳಿ ಗಾಳಿಯ ರಭಸಕ್ಕೆ ಮನೆಯೊಂದರ ತಗಡುಗಳು ಹಾರಿ ಬಿದ್ದಿವೆ.

    ಸೈದಾಪುರದ ಗೌಡರ ಓಣಿಯಲ್ಲಿ ನಾಗರಾಜ ಸವದತ್ತಿ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಮನೆ ಬಳಿ ನಿಲ್ಲಿಸಿದ್ದ ವ್ಯಾನ್ ಹಾಗೂ ಬೈಕ್​ಗಳು ಜಖಂಗೊಂಡಿವೆ.

    ಮುಂದುವರಿದ ಬಿಆರ್​ಟಿಎಸ್ ರಾದ್ಧಾಂತ

    ಮಳೆಯಿಂದಾಗಿ ನಗರದ ಟೋಲ್ ನಾಕಾ ಬಳಿ ಬಿಆರ್​ಟಿಎಸ್​ನ ರಾದ್ಧಾಂತ ಮತ್ತೊಮ್ಮೆ ಬಯಲಾಯಿತು. ಮೇಲ್ಭಾಗದಿಂದ ಹರಿದು ಬಂದ ಭಾರಿ ಪ್ರಮಾಣದ ನೀರು ಮುಂದೆ ಸಾಗದೆ ರಸ್ತೆ ತುಂಬ ನಿಂತಿತ್ತು. ಇದರಿಂದ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಟೋಲ್ ನಾಕಾ ಮೇಲ್ಭಾಗದ ಪ್ರದೇಶದಿಂದ ತ್ಯಾಜ್ಯ, ಸೈಕಲ್ ತೇಲಿ ಬಂದಿದ್ದವು. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚಾರಕ್ಕೆ ಪರದಾಡಿದರು.

    ಪಕ್ಕದ ಮನೆ ಗೋಡೆ ಕುಸಿದು ಇಬ್ಬರಿಗೆ ಗಾಯ

    ಧಾರವಾಡ: ನಗರದ ಹೊಸಯಲ್ಲಾಪುರ ಶುಕ್ರವಾರಪೇಟೆಯ ಆರೇರ ಓಣಿಯಲ್ಲಿ ರೋಖಡೆ ಎಂಬುವರ ಮನೆ ಮೇಲೆ ಪಕ್ಕದ ಮನೆಯ ಗೋಡೆ ಬಿದ್ದಿದೆ. ಬಸವರಾಜ ಹರಿಶ್ಚಂದ್ರ ರೋಖಡೆ ಹಾಗೂ ಸರಸ್ವತಿ ರೋಖಡೆ ಎಂಬುವರು ಗಾಯಗೊಂಡಿದ್ದಾರೆ. ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಸೈಯದ ಬನ್ನಿಮಟ್ಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಹುಬ್ಬಳ್ಳಿಯಲ್ಲೂ ಒಂದೂವರೆ ತಾಸು ಸುರಿದ ಮಳೆಗೆ ತಗ್ಗು ಪ್ರದೇಶಗಳು ನೀರಿನಿಂದ ಆವೃತವಾಗಿದ್ದವು. ವಿದ್ಯಾನಗರ, ಉಣಕಲ್, ನವನಗರ ಮೊದಲಾದ ಕಡೆ ರಸ್ತೆಯಲ್ಲಿ ನೀರು ನಿಂತು ಕೆಲವು ನಿಮಿಷ ಸಂಚಾರಕ್ಕೆ ತೊಂದರೆಯಾಗಿತ್ತು. ಮಳೆಯಿಂದಾಗಿ ನಗರದ ರಾಜ ಕಾಲುವೆಗಳಲ್ಲಿ ಮಳೆಗಾಲದ ರೀತಿಯಲ್ಲೇ ನೀರು ಹರಿಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts