More

    ಮೀಸಲಾತಿ ವಿಷಯದಲ್ಲಿ ಸಿದ್ದರಾಮಯ್ಯ ನಿಲುವು ಪ್ರಕಟಿಸಲಿ

    ಹುಬ್ಬಳ್ಳಿ: ಪಂಚಮಸಾಲಿ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡುವ ವಿಷಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ನಿಲುವು ಪ್ರಕಟಿಸಲಿ. ಅದು ಬಿಟ್ಟು ಟ್ವಿಟ್ ಮಾಡಿ ಪ್ರಚಾರ ಪಡೆಯುವುದು ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು.

    ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮೀಸಲಾತಿ ಸಂಬಂಧ ಸುದೀರ್ಘ ಚರ್ಚೆ ನಡೆಯಲಿದೆ. ಅಲ್ಲಿ ಮಾತನಾಡಲಿ ಎಂದು ಹೇಳಿದರು.

    ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಇದುವರೆಗೆ 40 ಪರ್ಸೆಂಟ್ ಕಮಿಷನ್ ಬಗ್ಗೆ ದಾಖಲೆಗಳನ್ನು ಕೊಟ್ಟಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದರು ಅಷ್ಟೇ. ಅಲ್ಲಿಗೂ ದಾಖಲೆಗಳನ್ನು ಕೊಟ್ಟಿರಲಿಲ್ಲ. ಆರೋಪಗಳಿಗೆ ಪೂರಕ ದಾಖಲೆಗಳನ್ನು ಕೊಟ್ಟಿದ್ದರೆ ಸರ್ಕಾರ ನ್ಯಾಯಾಂಗ ತನಿಖೆ ನಡೆಸಲು ಸಿದ್ಧವಾಗಿತ್ತು. ಮಾನನಷ್ಟ ಮೊಕದ್ದಮೆಯಲ್ಲಿ ಅವರನ್ನು ಬಂಧಿಸಲಾಗಿದೆ. ಕೋರ್ಟ್​ನಲ್ಲಿಯಾದರೂ ದಾಖಲೆಗಳು ಇದ್ದರೆ ಕೊಡಲಿ. ಇವರಿಗೆ ಕಾಂಗ್ರೆಸ್ ಬೆಂಬಲ ಇದೆ ಎಂದರು.

    ಮಹದಾಯಿ ವಿಷಯ ಕುರಿತು ಕಾಂಗ್ರೆಸ್​ಗೆ ಮಾತನಾಡುವ ನೈತಿಕತೆ ಇಲ್ಲ. ಬಿಜೆಪಿ ಸರ್ಕಾರ ಸದಾ ರೈತರ ಜತೆಗೆ ಇದೆ. ಕಾನೂನು ಹೋರಾಟ ಮಾಡುವ ಮೂಲಕ ನ್ಯಾಯಾಧೀಕರಣ ತೀರ್ಪು ಬಂದಿದೆ. ಕಳಸಾ-ಬಂಡೂರಿ ಯೋಜನೆ ಜಾರಿಗೆ ನಾವು ಬದ್ಧರಾಗಿದ್ದೇವೆ. ಕರ್ನಾಟಕಕ್ಕೆ ಒಂದು ಹನಿ ನೀರು ಕೊಡುವುದಿಲ್ಲ ಎಂದು ಸೋನಿಯಾಗಾಂಧಿ ಗೋವಾದಲ್ಲಿ ಹೇಳಿದ್ದರು. ಈಗ ಮಹದಾಯಿ ವಿಷಯ ಇಟ್ಟುಕೊಂಡು ಕಾಂಗ್ರೆಸ್ ಹೋರಾಟ ಮಾಡುತ್ತಿರುವುದು ನಗೆಪಾಟಲು ಎಂದರು.

    ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅವರ ನಡುವಿನ ವಿಷಯದಲ್ಲಿ ನಾನು ಭಾಗವಹಿಸುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts