More

    ಮಿನಿ ಬಾರ್‌ಗಳಾದ ಚಿಲ್ಲರೆ ಅಂಗಡಿಗಳು, ಅಕ್ರಮಕ್ಕೆ ಕಡಿವಾಣ ಹಾಕದ ಅಧಿಕಾರಿಗಳು, ದೂರು ನೀಡಿದರೂ ಕ್ರಮಕೈಗೊಳ್ಳದ ಆರೋಪ

    ಎಂ.ರಾಮೇಗೌಡ ನಂದಗುಡಿ
    ಹೊಸಕೋಟೆ ತಾಲೂಕಿನ ಹಲವು ಹಳ್ಳಿಗಳ ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಅಬಕಾರಿ ಇಲಾಖೆ ಅಕ್ರಮಕ್ಕೆ ಕಡಿವಾಣ ಹಾಕದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

    ತಾಲೂಕಿನ ಹಲವು ಹಳ್ಳಿಗಳಲ್ಲಿ ರಾಜಾರೋಷವಾಗಿ ದಿನವಿಡೀ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಹೊಸಕೋಟೆ ತಾಲೂಕಿನಾದ್ಯಂತ ವಿವಿಧ ಮಾದರಿಯ 43 ಮದ್ಯದ ಅಂಗಡಿಗಳು ಪರವಾನಗಿ ಪಡೆದಿವೆ. ಆದರೆ ಅನೇಕ ಡಾಬಾ, ಕಿರಾಣಿ ಅಂಗಡಿ, ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ.

    ಹೆದ್ದಾರಿ ಬದಿಯ ಅಂಗಡಿಗಳಲ್ಲಿ ರಾಜಾರೋಷವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಕೆಲವೆಡೆ ಕಳಪೆ ಮದ್ಯದ ಮಾರಾಟವೂ ನಿರಾತಂಕವಾಗಿದೆ. ಪರವಾನಗಿ ಪಡೆದ 43 ಮದ್ಯದಂಗಡಿಗಳ ಪೈಕಿ 21 ಲಿಕ್ಕರ್ ಶಾಪ್‌ಗಳು ಗ್ರಾಮೀಣ ಭಾಗದಲ್ಲಿದ್ದು, ಇಲ್ಲಿನ ಕೆಲವು ಬಾರ್ ಮಾಲೀಕರೇ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿದ್ದು, ಈ ಪರಿಣಾಮ ಚಿಲ್ಲರೆ ಅಂಗಡಿಗಳು ಮಿನಿ ಬಾರ್‌ಗಳಾಗುತ್ತಿವೆ.

    ಅಂಗಡಿಗಳಲ್ಲೇ ಮದ್ಯ ದೊರಕುವುದರಿಂದ ಗ್ರಾಮೀಣ ಭಾಗದ ಬಹುತೇಕ ಯುವಕರು ವ್ಯಸನಕ್ಕೆ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಬದಲಿಗೆ ಬಾರ್ ಮಾಲೀಕರೇ ಮದ್ಯ ಸರಬರಾಜು ಮಾಡಲು ನಾಯಕತ್ವ ವಹಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.

    ಗ್ರಾಮದಲ್ಲಿ ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದು ನಿನ್ನೆ ಮೊನ್ನೆಯ ಕಥೆಯಲ್ಲ. ಹಲವು ವರ್ಷಗಳಿಂದ ಮಾರಾಟ ಮಾಡಲಾಗುತ್ತಿದೆ. ಲಾಕ್‌ಡೌನ್‌ನಿಂದ ಹೆಚ್ಚು ಮಾರಾಟ ಮಾಡುತ್ತಿದ್ದಾರೆ. ಅಂಗಡಿಗಳಲ್ಲಿ ಮಕ್ಕಳು ಮದ್ಯ ಕೇಳಿದರೂ ಕೊಡುತ್ತಿರುವುದರಿಂದ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಬಗ್ಗೆ ಗ್ರಾಪಂಗೆ ಎರಡು-ಮೂರು ಬಾರಿ ಅರ್ಜಿ ಕೊಟ್ಟು ಅಬಕಾರಿ ಇಲಾಖೆ ಅಧಿಕಾರಿಗಳ ಗಮನಕ್ಕೂ ತಂದಿದ್ದೇನೆ. ಈವರೆಗೂ ಯಾರ ಸುಳಿವು ಇಲ್ಲ.
    ಆರ್. ಬಾಬು
    ಇಟ್ಟಸಂದ್ರ ಗ್ರಾಮಸ್ಥ

    ಕೆಂಬಿಗಾನಹಳ್ಳಿಯ ಎರಡು ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಪಂಚಾಯಿತಿ ಅಧಿಕಾರಿಗಳಿಗೆ, ಅಬಕಾರಿ ಅಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನ ಆಗಲಿಲ್ಲ.
    ಮುನಿದ್ಯಾವಪ್ಪ
    ಕೆಂಬಿಗಾನಹಳ್ಳಿ, ಜಡಿಗೇನಹಳ್ಳಿ ಹೋಬಳಿ

    ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಪಂಚಾಯಿತಿಗೆ ದೂರು ಬಂದಿದೆ. ಈ ಬಗ್ಗೆ ಅಬಕಾರಿ ಇಲಾಖೆಗೆ ಮಾಹಿತಿ ನೀಡಲಾಗಿದೆ. ಈವರೆಗೂ ಯಾವ ಗ್ರಾಮಕ್ಕೂ ಭೇಟಿ ನೀಡಿಲ್ಲ.
    ಬಿಂದು ದೇವೇಗೌಡ
    ಉಪಾಧ್ಯಕ್ಷೆ , ಇಟ್ಟಸಂದ್ರ ಗ್ರಾಪಂ

    ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದು, ಸಂಬಂಧಪಟ್ಟ ಅಬಕಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ.
    ಜಿ. ಪುಷ್ಪಲತಾ
    ಪಿಡಿಒ, ಇಟ್ಟಸಂದ್ರ ಗ್ರಾಪಂ

    ಅಕ್ರಮ ಮದ್ಯ ಮಾರಾಟದ ಬಗ್ಗೆ ಖಚಿತವಾದ ದೂರು ಬಂದರೆ, ಸರಬರಾಜು ಮಾಡುತ್ತಿರುವ ಬಾರ್ ಮಾಲೀಕರ ಮೇಲೆ ಹಾಗೂ ಅಂಗಡಿ ಮಾಲೀಕನ ಮೇಲೆ ದೂರು ದಾಖಲು ಮಾಡಲಾಗುವುದು. ನಂದಗುಡಿ ಹೋಬಳಿ ಜಡಿಗೇನಹಳ್ಳಿ ಹೋಬಳಿ ಕೆಲವು ಗ್ರಾಮಗಳಲ್ಲಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲಿಸಿ ದೂರು ದಾಖಲಿಸಲಾಗುವುದು.
    ರಾಜಶೇಖರ್
    ಸಿಪಿಐ, ಅಬಕಾರಿ ಇಲಾಖೆ, ಹೊಸಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts