More

    ಮಿದುಳು ರಕ್ತಸ್ರಾವದಿಂದ ಬಾಲಕ ಸಾವು: ಏಳು ವರ್ಷದ ಪುತ್ರನ ನೇತ್ರದಾನ; ಅಂಗಾಂಗ ದಾನ ಮಾಡುವ ಪಾಲಕರ ಪ್ರಯತ್ನ ವಿಫಲ

    ರಿಪ್ಪನ್‌ಪೇಟೆ: ತಾಯಿ ಶಾಲೆಯಲ್ಲಿ ಬಿಸಿಯೂಟ ಯೋಜನೆಯ ಸಹಾಯಕಿ, ತಂದೆ ಕೂಲಿ ಕಾರ್ಮಿಕ. ಈ ದಂಪತಿಯ ಏಳು ವರ್ಷದ ಪುತ್ರ ಮಿದುಳು ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದು, ಅವನ ಕಣ್ಣುಗಳನ್ನು ದಾನ ಮಾಡಿದ್ದಾರೆ. ಮಗನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ, ಬದುಕುವುದಿಲ್ಲ ಎಂದಾದರೆ ಅವನ ದೇಹದ ಅಂಗಾಂಗಳನ್ನು ದಾನ ಮಾಡೋಣ ಎಂದು ದಂಪತಿ ಬಯಸಿದ್ದರು. ಆದರೆ ಅವರಿಗೆ ಮಗನನ್ನೂ ಉಳಿಸಿಕೊಳ್ಳಲಾಗಲಿಲ್ಲ, ಅವನ ದೇಹದ ಅಂಗಾಂಗಗಳನ್ನೂ ದಾನ ಮಾಡಲು ಸಾಧ್ಯವಾಗಲಿಲ್ಲ.
    ಇಲ್ಲಿಗೆ ಸಮೀಪದ ಬಸವಾಪುರ ಗ್ರಾಮದ ಜಗನ್ನಾಥ್ ಮತ್ತು ಆಶಾ ದಂಪತಿಗೆ ಇಬ್ಬರು ಗಂಡು ಮಕ್ಕಳು. ಎರಡನೇ ಪುತ್ರ ಬಿ.ಜೆ. ಆರ್ಯನ್(7) ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 2ನೆ ತರಗತಿ ಓದುತ್ತಿದ್ದು, ಗುರುವಾರ ಮಧ್ಯಾಹ್ನ ಶಾಲೆಯಲ್ಲಿ ವಾಂತಿ ಮಾಡಿಕೊಂಡು ಅಸ್ವಸ್ಥನಾದ್ದ. ತಕ್ಷಣ ಶಿಕ್ಷಕರು ಸಮೀಪದ ಮಂಡಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
    ತಪಾಸಣೆ ವೇಳೆ ಮಿದುಳಿನಲ್ಲಿ ತೀವ್ರ ರಕ್ತಸ್ರಾವ ಆಗಿರುವುದು ಗೊತ್ತಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ಕರೆದೊಯ್ಯುವುದು, ಬದುಕುವ ಸಾಧ್ಯತೆಗಳಿಲ್ಲ ಎಂದಾದರೆ ದೇಹದ ಅಂಗಾಂಗಗಳನ್ನು ದಾನ ಮಾಡಬೇಕು ಎಂದು ಪಾಲಕರು ನಿರ್ಧರಿಸಿದ್ದರು. ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾಗಲೇ ಆರ್ಯನ್ ಕೊನೆಯುಸಿರೆಳೆದ. ಹೀಗಾಗಿ ಅವನ ದೇಹದ ಅಂಗಾಂಗಗಳನ್ನು ದಾನ ಮಾಡುವ ಆಸೆ ಫಲಿಸಲಿಲ್ಲ. ಕಣ್ಣುಗಳನ್ನು ಮಾತ್ರ ದಾನ ಮಾಡಲು ಸಾಧ್ಯವಾಯಿತು. ಶುಕ್ರವಾರ ಆರ್ಯನ್ ಅಂತ್ಯಕ್ರಿಯೆ ಬಸವಾಪುರದಲ್ಲಿ ನೆರವೇರಿತು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts