More

    ಮಾಸ್ಕ್ ಧರಿಸದಿದ್ದರೆ ದಂಡ, ಕರೊನಾ ಟೆಸ್ಟ್

    ಧಾರವಾಡ: ಜಿಲ್ಲೆಯಲ್ಲಿ ಕರೊನಾ ನಿಯಂತ್ರಿಸಲು ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಪಾಡುವುದು ಕಡ್ಡಾಯ. ಈ ನಿಯಮ ಪಾಲನೆ ಮಾಡದಿದ್ದಲ್ಲಿ ದಂಡವೂ ನಿಶ್ಚಿತ ಎಂಬ ಸಂದೇಶವನ್ನು ಜಿಲ್ಲಾಡಳಿತ ಸಾರಿದೆ.

    ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಜಿಲ್ಲಾಧಿಕಾರಿ ನಿತೇಶ ಪಾಟೀಲ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ನಗರದ ವಿವಿಧೆಡೆ ಮಾಸ್ಕ್ ಧರಿಸದವರಿಗೆ ದಂಡ, ಕೋವಿಡ್ ತಪಾಸಣೆಗೆ ಒಳಪಡಿಸುವ ಕಾರ್ಯ ನಡೆಸಿದರು.

    ಸಿಬಿಟಿ, ಅಕ್ಕಿಪೇಟೆ, ಸುಭಾಷ್ ರಸ್ತೆ, ಗಾಂಧಿಚೌಕ, ವಿವೇಕಾನಂದ ವೃತ್ತ, ಮಾರುಕಟ್ಟೆ, ಇತರ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದರು.

    ಜಿಪಂ ಸಿಇಒ ಡಾ. ಬಿ.ಸಿ. ಸತೀಶ, ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ ಬಿ., ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ ಅವರು ಸಾರ್ವಜನಿಕರಿಗೆ ಮಾಸ್ಕ್ ಧರಿಸುವುದು ಸೇರಿ ಇತರ ಮುನ್ನೆಚ್ಚರಿಕೆ ಕ್ರಮಗಳ ಮಹತ್ವ ಮನವರಿಕೆ ಮಾಡಿಕೊಟ್ಟರು.

    ಇದೇ ಸಂದರ್ಭದಲ್ಲಿ ಮಾಸ್ಕ್ ಇಲ್ಲದೆ ಸಂಚರಿಸುತ್ತಿದ್ದ ವಾಹನ ಸವಾರರು, ಆಟೋ, ಮ್ಯಾಕ್ಸಿಕ್ಯಾಬ್ ಚಾಲಕರು, ಪ್ರಯಾಣಿಕರನ್ನು ಸಂಚಾರಿ ಸ್ವ್ಯಾಬ್ ಸಂಗ್ರಹಣಾ ಕೇಂದ್ರಕ್ಕೆ ಕರೆತಂದು ಕೋವಿಡ್ ತಪಾಸಣೆಗೆ ಒಳಪಡಿಸಲಾಯಿತು.

    ನಂತರ ಜಿಲ್ಲಾಧಿಕಾರಿ ಮಾತನಾಡಿ, ಕೋವಿಡ್ ನಿಯಂತ್ರಣ ಜಾಗೃತಿಗೆ ಕ್ರಮಕೈಗೊಳ್ಳಲಾಗಿದೆ. ನಿತ್ಯ ಅಂದಾಜು 600 ಜನರಿಗೆ ಮಾಸ್ಕ್ ಧರಿಸದ ಕಾರಣಕ್ಕೆ ದಂಡ ವಿಧಿಸಲಾಗುತ್ತಿದೆ. ಈವರೆಗೆ 35 ಲಕ್ಷ ರೂ. ದಂಡ ಸಂಗ್ರಹವಾಗಿದೆ. ಲಸಿಕೆ ಕಂಡು ಹಿಡಿಯುವವರೆಗೂ ಮಾಸ್ಕ್ ಬಳಕೆಯೇ ಲಸಿಕೆ ಎಂದು ತಿಳಿದುಕೊಳ್ಳಬೇಕು. ಸರ್ಕಾರ ಮತ್ತು ಆರೋಗ್ಯ ಇಲಾಖೆ ಸೂಚನೆಗಳನ್ನು ಪಾಲಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.

    ಸಹಾಯಕ ಪೊಲೀಸ್ ಆಯುಕ್ತೆ ಜಿ. ಅನುಷಾ, ತಹಸೀಲ್ದಾರ ಡಾ. ಸಂತೋಷ ಬಿರಾದಾರ, ತಾಲೂಕು ಆರೋಗ್ಯಾಧಿಕಾರಿ ಡಾ. ಅಯ್ಯನಗೌಡ ಪಾಟೀಲ, ಪಾಲಿಕೆಯ ವಲಯ ಸಹಾಯಕ ಆಯುಕ್ತ ಶ್ರೀನಿವಾಸ ಶಾಸ್ತ್ರಿ, ಆರ್.ಎಚ್. ಕುಲಕರ್ಣಿ, ಸರೋಜಾ ಪೂಜಾರ, ಮಹಾಂತೇಶ ಮ್ಯಾಗೇರಿ, ಇತರರು ಇದ್ದರು.

    10 ಲಕ್ಷ ರೂ. ದಂಡ ವಸೂಲಿ

    ಹುಬ್ಬಳ್ಳಿ: ಮಾಸ್ಕ್ ಧರಿಸದ, ಪರಸ್ಪರ ಅಂತರ ಕಾಯ್ದುಕೊಳ್ಳದವರಿಂದ ಇದುವರೆಗೆ 10 ಲಕ್ಷ 30 ಸಾವಿರ ರೂ. ದಂಡ ಸಂಗ್ರಹಿಸಲಾಗಿದೆ. ಪೊಲೀಸ್ ಆಯುಕ್ತರ ಕಚೇರಿ, ಧಾರವಾಡ ಎಸ್​ಪಿ ಕಚೇರಿ, ಜಿಪಂ ಸಿಇಒ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ನೇತೃತ್ವದಲ್ಲಿ ದಂಡ ಸಂಗ್ರಹಿಸಲಾಗುತ್ತಿದೆ. ಪರಸ್ಪರ ಅಂತರ ಕಾಯ್ದುಕೊಳ್ಳದ 19 ಪ್ರಕರಣದಿಂದ 5 ಸಾವಿರ ರೂ., ಮಾಸ್ಕ್ ಧರಿಸದ 5379 ಪ್ರಕರಣದಿಂದ 10,30,800 ರೂ. ದಂಡ ಸಂಗ್ರಹವಾಗಿದೆ.

    126 ಕರೊನಾ ಪ್ರಕರಣ ಪತ್ತೆ

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ 126 ಜನರಿಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಪ್ರಕರಣ ಸಂಖ್ಯೆ 18,118ಕ್ಕೇರಿದೆ. 101 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಚೇತರಿಸಿಕೊಂಡವರ ಒಟ್ಟು ಸಂಖ್ಯೆ 15063ಕ್ಕೆ ಏರಿದೆ. ಸದ್ಯ 2547 ಪ್ರಕರಣಗಳು ಸಕ್ರಿಯವಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ಇಬ್ಬರು ಸಾವಿಗೀಡಾಗಿದ್ದಾರೆ. ಕರೊನಾದಿಂದ ಮೃತಪಟ್ಟವರ ಒಟ್ಟು ಸಂಖ್ಯೆ 508ಕ್ಕೇರಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts