More

    ಮಾಸ್ಕ್ ಧರಿಸದವರಿಗೆ ದಂಡ

    ಅಣ್ಣಿಗೇರಿ: ಕರೊನಾ ನಿಯಂತ್ರಿಸಲು ಅಣ್ಣಿಗೇರಿ ಪುರಸಭೆ ಅಧಿಕಾರಿಗಳು ಪಟ್ಟಣದಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ಮುಂದಾದಾಗ ಸಾರ್ವಜನಿಕರು ಸಾರಿಗೆ ಸಂಸ್ಥೆ ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆದಿದೆ.

    ಸರ್ಕಾರದ ಆದೇಶದಂತೆ ಕೋವಿಡ್ ಸೋಂಕು ಹರಡುವಿಕೆ ತಡೆಗೆ ಎಲ್ಲರೂ ಮಾಸ್ಕ್ ಧರಿಸುವಂತೆ ಪುರಸಭೆಯವರು ಕಸ ವಿಲೇವಾರಿ ವಾಹನದಲ್ಲಿ ಧ್ವನಿವರ್ಧಕ ಮೂಲಕ ಪಟ್ಟಣದಲ್ಲಿ ನಾಲ್ಕು ದಿನ ಪ್ರಚಾರ ಮಾಡಿ ಜನಜಾಗೃತಿ ಮೂಡಿಸಿದ್ದಾರೆ. ಆದರೆ, ಬದಲಾವಣೆ ಕಾಣದಿದ್ದಾಗ ಪುರಸಭೆಯವರು ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ಆರಂಭಿಸಿದರು. ಅದಕ್ಕೀಗ ಜನಾಕ್ರೋಶ ವ್ಯಕ್ತವಾಗಿದೆ.

    ಪಟ್ಟಣದಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುತ್ತಿದ್ದಾಗ ಪುರಸಭೆ ಅಧಿಕಾರಿಗಳು-ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿ ನಡೆಯಿತು. ರೈತ ಅರುಣ ದಿಡ್ಡಿ ಮಾತನಾಡಿ, ಹೊಲದಾಗ ದುಡಿಯೋ ಮಂದಿ ನಾವು. ಇಂಥ ಸಂದರ್ಭದಲ್ಲಿ ಮಾಸ್ಕ್ ಧರಿಸದವರಿಗೆ ತಿಳಿ ಹೇಳಬೇಕಿತ್ತು. ಅದನ್ನು ಬಿಟ್ಟು ನೀವು ದಂಡ ಹಾಕಿದ್ರೆ ನಾವೆಲ್ಲಿಗೆ ಹೋಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಸ್ಥಳಕ್ಕಾಗಮಿಸಿದ ಪುರಸಭೆ ಮುಖ್ಯಾಧಿಕಾರಿ ಕೆ.ಎಫ್. ಕಟಗಿ ಮಾತನಾಡಿ, ಕರೊನಾ ಹರಡುವುದನ್ನು ನಿಯಂತ್ರಿಸಲು ಸರ್ಕಾರದ ಆದೇಶ ಪಾಲಿಸಬೇಕು. ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಸುವುದು ಮತ್ತಿತರ ಮುಂಜಾಗ್ರತೆ ನಿಯಮಗಳನ್ನು ಅನುಸರಿಸಬೇಕು ಎಂದರು. ನಂತರ ಮಾಸ್ಕ್ ಧರಿಸದವರಿಗೆ ಮಾಸ್ಕ್ ವಿತರಿಸಿ ತಿಳಿಹೇಳಿದರು. ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಷಣ್ಮುಖ ಗುರಿಕಾರ ಮಾತನಾಡಿ, ಸರ್ಕಾರದ ನಿಯಮಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ. ಎಲ್ಲರೂ ಮಾಸ್ಕ್ ಧರಿಸಬೇಕು. ಪುರಸಭೆ ಆಡಳಿತ ಮಂಡಳಿ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

    ಅಳ್ನಾವರ ಪಪಂನಿಂದ ಜನಜಾಗೃತಿ: ಕರೊನಾ ಸೋಂಕು ಹರಡುವಿಕೆ ತಡೆಗಾಗಿ ಅಳ್ನಾವರ ಪಟ್ಟಣ ಪಂಚಾಯಿತಿ ಸಿಬ್ಬಂದಿ ಪಟ್ಟಣದಲ್ಲಿ ಗುರುವಾರ ಸಂಚರಿಸಿ ಮುಂಜಾಗ್ರತೆ ಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಿದರು. 6 ತಿಂಗಳಿಂದ ಇಲ್ಲಿಯವರೆಗೆ ಪಟ್ಟಣದಲ್ಲಿ 100 ಜನರಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಕೋವಿಡ್-19 ಸೋಂಕು ತಗುಲದಂತೆ ಸಾರ್ವಜನಿಕರು ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಪಪಂ ಸಿಬ್ಬಂದಿಯಿಂದ ಅರಿವು ಮೂಡಿಸುವ ಕಾರ್ಯ ಆರಂಭಿಸಲಾಗಿದೆ. ಮಾಸ್ಕ್ ಧರಿಸದವರಿಗೆ 100 ರೂ. ರಂತೆ ಇಲ್ಲಿಯವರೆಗೆ 98 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪಪಂ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ ತಿಳಿಸಿದರು. ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ಪೊಲೀಸ್ ಇಲಾಖೆಯಿಂದ ಇಲ್ಲಿಯವರೆಗೆ 1 ಲಕ್ಷ ರೂ. ಗಿಂತ ಹೆಚ್ಚು ದಂಡ ಹಾಕಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts