More

    ಮಾಸಾಶನ ಪಡೆಯಲು ಪರದಾಟ

    ರೋಣ: ಬಡವರಿಗೆ ಅನುಕೂಲ ಒದಗಿಸಲು ಸರ್ಕಾರ ಅನೇಕ ಯೋಜನೆ ಜಾರಿಗೆ ತಂದರೂ, ಅವುಗಳನ್ನು ಸಮರ್ಪಕವಾಗಿ ತಲುಪಿಸಬೇಕಾದ ವ್ಯವಸ್ಥೆಯಲ್ಲಿನ ಲೋಪದೋಷದಿಂದ ಜನರು ಪರದಾಡಬೇಕಾಗುತ್ತದೆ. ಇದಕ್ಕೆ ಪಟ್ಟಣದ ಅಂಚೆ ಕಚೇರಿ ಸಾಕ್ಷಿಯಾಗಿದೆ.

    ಸರ್ಕಾರದಿಂದ ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕಲ ಮಾಸಾಶನದ ಹಣ ಇಲ್ಲಿನ ಅಂಚೆ ಕಚೇರಿಯಲ್ಲಿ ಫಲಾನುಭವಿಗಳು ಹೊಂದಿರುವ ಖಾತೆಗೆ ಜಮೆಯಾಗುತ್ತದೆ. ಇಲ್ಲಿ ಅಂದಾಜು 350 ಫಲಾನುಭವಿಗಳು ಖಾತೆ ಹೊಂದಿದ್ದಾರೆ. ಮಾಸಾಶನ ಪಡೆಯಲು ಫಲಾನುಭವಿಗಳು ವಾರಗಟ್ಟಲೇ ಕಾಯಬೇಕಾದ ಸ್ಥಿತಿ ಪಟ್ಟಣದ ಅಂಚೆ ಕಚೇರಿಯಲ್ಲಿದೆ. ಅಂಚೆ ಕಚೇರಿಗೆ ನಿತ್ಯ ಬರುವ ವೃದ್ಧರು, ಇತರ ಫಲಾನುಭವಿಗಳು ಹಣಕ್ಕಾಗಿ ಸರದಿಯಲ್ಲಿ ನಿಲ್ಲಬೇಕು. ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ವೃದ್ಧರು ಇಲ್ಲಿನ ವ್ಯವಸ್ಥೆಯಿಂದಾಗಿ ರೋಸಿ ಹೋಗುವಂತಾಗಿದೆ.

    ಈ ಮೊದಲು ವೃದ್ಧರು ನಮ್ಮ ಮಾಸಾಶನ ಹಣ ಜಮೆಯಾಗಿಲ್ಲ. ಮಾಸಾಶನ ಕೊಟ್ಟಿಲ್ಲ ಎಂದು ಅಂಚೆ ಕಚೇರಿ ಎದುರು ಸರದಿಯಲ್ಲಿ ನಿಲ್ಲುವಂತಾಗುತಿತ್ತು. ಆದರೆ, ಈಗ ಮಾಸಾಶನ ಖಾತೆಗೆ ಜಮೆಯಾಗಿದ್ದರೂ, ಅದನ್ನು ಪಡೆದುಕೊಳ್ಳಲು ವಾರಗಟ್ಟಲೇ ಅಂಚೆ ಕಚೇರಿ ಮುಂದೆ ಕುಳಿತುಕೊಳ್ಳುವಂತಾಗಿದೆ. ಮೊದಲೇ ವಯಸ್ಸಾಗಿ ಮುಪ್ಪಾಗಿದ್ದೇವೆ. ವಾರಗಟ್ಟಲೇ ಊಟ, ನೀರು ಇಲ್ಲದೇ ಸರದಿಯಲ್ಲಿ ನಿಲ್ಲಬೇಕಾಗಿದೆ. ಯಾರಿಗೂ ನಮ್ಮ ಗೋಳು ಕೇಳುತ್ತಿಲ್ಲ ಎಂಬುದು ವೃದ್ಧರ ಆರೋಪವಾಗಿದೆ.

    ಅಂಚೆ ಕಚೇರಿಯಲ್ಲಿ ಒಂದೇ ಕೌಂಟರ್ ಇದೆ. ಈ ಒಂದೇ ಕೌಂಟರ್ ಮೂಲಕ ಅಂಚೆ ಕಚೇರಿಯ ಎಲ್ಲ ಕೆಲಸಗಳು ನಡೆಯುತ್ತಿದ್ದರಿಂದ ನಾವು ಮಾಸಾಶನಕ್ಕಾಗಿ ವಾರಗಟ್ಟಲೇ ಕಾಯಬೇಕಾಗಿದೆ. ಹೀಗಾಗಿ ತಿಂಗಳಲ್ಲಿ ಒಂದು ವಾರ ಮಾಸಾಶನ ನೀಡಲು ಪ್ರತ್ಯೇಕ ಕೌಂಟರ್ ತೆರೆಯಬೇಕು ಎಂದು ಮಾಸಾಶನ ಫಲಾನುಭವಿಗಳಾದ ಹುಸೇನಸಾಬ್ ಗಡವಾಲೆ, ಕೆಂಚವ್ವ ಹಿರೇಮನಿ, ನೀಲವ್ವ ಕೋತಬಾಳ ಒತ್ತಾಯಿಸಿದ್ದಾರೆ.

    ಪಟ್ಟಣದ ಅಂಚೆ ಕಚೇರಿಯಲ್ಲಿ ಮೊದಲು ಐದು ಜನ ಸಿಬ್ಬಂದಿ ಇದ್ದರು. ಕೆಲ ತಿಂಗಳ ಹಿಂದೆ ಮೂವರು ನೌಕರರು ವರ್ಗವಾಗಿದ್ದಾರೆ. ಇಬ್ಬರು ಸಿಬ್ಬಂದಿ ಇದ್ದು, ಪೋಸ್ಟ್ ಮಾಸ್ಟರ್ ಹುದ್ದೆಯಲ್ಲಿ ಕೂಡ ಪ್ರಭಾರಿ ಇದ್ದಾರೆ. ಕಚೇರಿಯಲ್ಲಿ ಸಿಬ್ಬಂದಿ ಸಮಸ್ಯೆ ಇರುವುದರಿಂದಲೇ ವೃದ್ದರು ಮಾಸಾಶನ ಪಡೆದುಕೊಳ್ಳಲು ಪರದಾಡುವಂತಾಗಿದೆ.
    | ಎಸ್.ಎಸ್. ಮಾಳಗಿ, ಪೋಸ್ಟ್ ಅಸಿಸ್ಟೆಂಟ್


    ಮಾಸಾಶನ ಪಡೆಯಲು ಇಲ್ಲಿನ ಅಂಚೆ ಕಚೇರಿಗೆ ನಾಲ್ಕು ದಿನಗಳಿಂದ ತಾಲೂಕಿನ ಬಾಚಲಾಪೂರ ಗ್ರಾಮದಿಂದ ಬರುತ್ತಿದ್ದೇನೆ. ಕರೊನಾ ಇರುವುದರಿಂದ ಸಾರಿಗೆ ಬಸ್​ಗಳಿಲ್ಲ. ದಿನಾ 40 ರೂಪಾಯಿ ಖರ್ಚು ಮಾಡಿ ಟಂಟಂಗೆ ಬರುತ್ತೇನೆ.
    | ನಿಂಗವ್ವ ಕಪ್ಪಲಿ ಬಾಚಲಾಪೂರ ಫಲಾನುಭವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts