More

    ಮಾವು ಖರೀದಿಗೆ ಗ್ರಾಹಕರ ಹಿಂದೇಟು

    ರಾಜೇಂದ್ರ ಶಿಂಗನಮನೆ ಶಿರಸಿ

    ಉತ್ತರ ಕನ್ನಡ ಜಿಲ್ಲೆಯ ಮಾವು ಬೆಳೆಯುವ ಪ್ರದೇಶದಲ್ಲಿ ಕರೊನಾ ಲಗ್ಗೆಯಿಟ್ಟ ಪರಿಣಾಮ ಶಿರಸಿಯ ಮಾರುಕಟ್ಟೆಯಲ್ಲಿ ಮಾವು ವ್ಯಾಪಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಮಾರಾಟಗಾರರು ಅರ್ಧ ದರಕ್ಕೆ ಹಣ್ಣು ಮಾರಲು ಮುಂದಾದರೂ ಖರೀದಿಸುವವರೇ ಇಲ್ಲದಂತಾಗಿದೆ.

    ಜಿಲ್ಲೆಯ ಮುಂಡಗೋಡ, ಹಾವೇರಿ ಜಿಲ್ಲೆಯ ಹಾನಗಲ್ಲ ಹಾಗೂ ಸುತ್ತಮುತ್ತಲ ತಾಲೂಕಿನ ಮಾವು ಬೆಳೆಗಾರರಿಗೆ ಶಿರಸಿ, ಸಿದ್ದಾಪುರ, ಯಲ್ಲಾಪುರ ಪ್ರಮುಖ ಮಾರುಕಟ್ಟೆಯಾಗಿದೆ. ಆದರೆ, ಹಾವೇರಿ ಜಿಲ್ಲೆಯಲ್ಲಿ ಈ ಹಿಂದೆ ಕರೊನಾ ವೈರಸ್ ಕಾಣಿಸಿಕೊಂಡ ಪರಿಣಾಮ ಅಲ್ಲಿಂದ ಬರುವ ಮಾವಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ತಗ್ಗಿತ್ತು. ಜತೆಗೆ, ಆ ಭಾಗದಿಂದ ಮಾವು ಖರೀದಿಸುವವರೂ ಮುಂಡಗೋಡ ಮಾವು ಬೆಳೆಯತ್ತ ಮುಖ ಮಾಡಿದ್ದರು. ಇದೀಗ ಮುಂಡಗೋಡ ತಾಲೂಕಿನಲ್ಲಿ ಕರೊನಾ ಕಾಣಿಸಿಕೊಂಡ ಕಾರಣ ಮಳಗಿ, ಪಾಳಾದ ಮಾವಿಗೂ ಶಿರಸಿಯ ಮಾರುಕಟ್ಟೆಯಲ್ಲಿ ದಿಢೀರ್ ಬೇಡಿಕೆ ತಗ್ಗಿದೆ.

    ಖರೀದಿಗೆ ಆಸಕ್ತಿಯಿಲ್ಲ: ಪ್ರಸಕ್ತ ವರ್ಷ ಶಿರಸಿ, ಸಿದ್ದಾಪುರ, ಯಲ್ಲಾಪುರ ಮಾರುಕಟ್ಟೆಯಲ್ಲಿ 120ಕ್ಕೂ ಹೆಚ್ಚು ವ್ಯಾಪಾರಿಗಳು ವಾಹನಗಳ ಮೂಲಕ ಮಾವು ವ್ಯಾಪಾರ ಮಾಡುತ್ತಿದ್ದಾರೆ. ಕೆಲವರು ನಗರದಲ್ಲಾದರೆ ಇನ್ನು ಕೆಲವರು ಹಳ್ಳಿಗೆ ತೆರಳುತ್ತಿದ್ದಾರೆ. ಆದರೆ, ವ್ಯಾಪಾರ ಮಾತ್ರ ನಿರಾಶದಾಯಕವಾಗಿದೆ. ಹಂಗಾಮಿನಲ್ಲಿ ಯಾವುದೇ ತಳಿಯ ಮಾವು ಪ್ರತಿ ಕೆಜಿಗೆ ಕನಿಷ್ಠ 80 ರೂ. ಇರುತ್ತಿತ್ತು. ಆದರೆ, ಈ ಬಾರಿ ಆಪೂಸ್ ಗರಿಷ್ಠ ದರ 70 ರೂ., ಬೇಗನ್​ಪಲ್ಲಿ 50 ರೂ., ಬೆನೆಟ್ ಆಪೂಸ್ 30 ರೂ.ಗೆ ಮಾರಲಾಗುತ್ತಿದೆ. ಆದರೂ ಗ್ರಾಹಕರು ಮಾವಿನ ಖರೀದಿಗೆ ಆಸಕ್ತಿ ತೋರುತ್ತಿಲ್ಲ. ಈ ನಡುವೆ ಸೋಮವಾರ ಮುಂಡಗೋಡದ ಇಬ್ಬರಿಗೆ ಕರೊನಾ ಸೋಂಕು ದೃಢವಾಗುತ್ತಿದ್ದಂತೆ ಏಕಾಏಕಿ ಮಾವು ಮಾರಾಟಕ್ಕೆ ಮತ್ತಷ್ಟು ಸಮಸ್ಯೆ ಎದುರಾಗಿದೆ. ನಗರದಲ್ಲಿನ ಎಲ್ಲ ಮಾವು ವ್ಯಾಪಾರಿಗಳು ಗ್ರಾಹಕರಿಲ್ಲದೆ ಕಂಗಾಲಾಗಿದ್ದಾರೆ.

    20 ಟನ್ ಆಮದು ಇಳಿಕೆ : ಈ ಭಾಗದ ಬಹುತೇಕ ವ್ಯಾಪಾರಿಗಳು ಮಳಗಿ, ಪಾಳಾ, ಕಾತೂರು, ತಡಸ ಭಾಗದ ಮಾವು ಬೆಳೆಗಾರರಿಂದ ಮಾವನ್ನು ಸಟ್ಟಾ ಖರೀದಿಸುತ್ತಾರೆ. ಹೀಗೆ ಕಳೆದ ವರ್ಷ ನಿತ್ಯವೂ 25ರಿಂದ 30 ಟನ್ ಮಾವು ಹೊರ ತಾಲೂಕುಗಳಿಂದ ಈ ತಾಲೂಕುಗಳಿಗೆ ಆಮದಾಗುತ್ತಿತ್ತು. ಆದರೆ, ಈ ಬಾರಿ 8ರಿಂದ 9 ಟನ್​ಗೆ ಇಳಿಕೆಯಾಗಿದೆ. ಪ್ರಸ್ತುತ ವ್ಯಾಪಾರಿಗಳು ಖರೀದಿಸಿದ ಈ ಮಾವಿನಲ್ಲಿ ಶೇಕಡಾ 20ರಷ್ಟು ಗ್ರಾಹರಿಲ್ಲದೆ ಹಾಗೂ ಏಕಾಏಕಿ ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಹಾಳಾಗುತ್ತಿದೆ. ಹೀಗಾಗಿ ವ್ಯಾಪಾರಿಗಳು ವ್ಯಾಪಾರವನ್ನೇ ಕೈಬಿಡುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮಾವು ಬೆಳೆಯುವ ಕೆಲ ತಾಲೂಕುಗಳಲ್ಲಿ ಕರೊನಾ ವೈರಸ್ ಸೋಂಕಿತರು ಕಂಡುಬಂದಿದ್ದಾರೆ. ಹೀಗಾಗಿ ಸಹಜವಾಗಿಯೇ ಭಯ ಕಾಡುತ್ತಿದ್ದು, ಮಾವಿನ ಹಣ್ಣು ತಿನ್ನುವ ಬಯಕೆ ದೂರ ಮಾಡಿದೆ. ದರ ತೀರಾ ಕಡಿಮೆಯಿದ್ದರೂ ಖರೀದಿಸುವ ಧೈರ್ಯ ಬರುತ್ತಿಲ್ಲ. | ವಿನೋದಾ ನಾಯ್ಕ ಶಿರಸಿ ನಿವಾಸಿ

    ಕಳೆದ ವರ್ಷದ ಮಾವು ಮಾರುಕಟ್ಟೆಗೆ ಹೋಲಿಸಿದರೆ ಈ ಬಾರಿ ಆರಂಭದಲ್ಲಿಯೇ ಕಡಿಮೆ ದರಕ್ಕೆ ಮಾರಲಾಗುತ್ತಿದೆ. ಆದರೂ ಗ್ರಾಹಕರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಸಾಕಷ್ಟು ಸುರಕ್ಷತಾ ಕ್ರಮ ಕೈಗೊಂಡರೂ ದಿನವೊಂದಕ್ಕೆ ನಗರ ಪ್ರದೇಶದಲ್ಲಿ ಸಾವಿರ ರೂಪಾಯಿ ವ್ಯಾಪಾರ ಮಾಡುವುದು ಕಷ್ಟವಾಗಿದೆ. ಕರೊನಾ ಭಯವು ಇಡೀ ಮಾವು ಮಾರುಕಟ್ಟೆಗೆ ಭಾರಿ ಹೊಡೆತ ನೀಡಿದೆ. | ಇಸ್ಮಾಯಿಲ್ ಬೋಗಿ ಮಾವು ವ್ಯಾಪಾರಿ

    ಪ್ರಸಕ್ತ ವರ್ಷ ಶೇ. 50ರಷ್ಟು ಬೆಳೆ ಕಡಿಮೆಯಿದೆ. ದರವೂ ಕಡಿಮೆಯಿದೆ. ಹೀಗಾಗಿ, ರಾಜ್ಯ, ಹೊರರಾಜ್ಯಗಳ ಮಾವು ಖರೀದಿದಾರರ ಮಾಹಿತಿ ಕಲೆ ಹಾಕಿ ರೈತರಿಗೆ ನೀಡಲಾಗಿದೆ. ಸ್ಥಳೀಯ ವ್ಯಾಪಾರಿಗಳಿಗೆ ನೀಡುವ ಬದಲು ಹೊರ ರಾಜ್ಯದವರಿಗೆ ನೀಡಿದರೆ ದರ ಹೆಚ್ಚಿಗೆ ಲಭಿಸುತ್ತದೆ. ಅಲ್ಲದೆ, ಮಾವು ಬೆಳೆ ಹಾನಿ ಸಂಬಂಧ ಹೆಕ್ಟೇರ್​ಗೆ 15 ಸಾವಿರ ರೂ. ಪರಿಹಾರ ನೀಡಲು ಸರ್ಕಾರ ಕ್ರಮ ವಹಿಸಲಿದೆ. | ಸತೀಶ ಹೆಗಡೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts