More

    ಮಾವಿನ ಗಿಡ ನೆಲಕ್ಕುರುಳಿಸಿದ ರೈತ

    ಹಾನಗಲ್ಲ: ಅಂದಾಜು 16 ಎಕರೆಯಲ್ಲಿ 12 ವರ್ಷಗಳಿಂದ ನೀರುಣಿಸಿ ಬೆಳೆಸಿದ್ದ ರತ್ನಾಗಿರಿ ಆಪೂಸ್ ತಳಿಯ ನೂರಾರು ಮಾವಿನಗಿಡಗಳನ್ನು ತಾಲೂಕಿನ ಮಾಸನಕಟ್ಟಿ ಗ್ರಾಮದ ರೈತನೊಬ್ಬ ಬುಧವಾರ ನೆಲಕ್ಕುರುಳಿಸಿದ್ದಾನೆ.

    ರೈತ ಗುಡ್ಡನಗೌಡ ಹೊಸಗೌಡ್ರ ಎಂಬುವವರು ಲಕ್ಷಾಂತರ ರೂ. ಖರ್ಚು ಮಾಡಿ ಮಾವಿನಗಿಡಗಳನ್ನು ನಾಟಿ ಮಾಡಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇಳುವರಿ ಕುಂಠಿತಗೊಂಡಿದ್ದರಿಂದ ಬೇಸರಗೊಂಡು ಗಿಡಗಳನ್ನೆಲ್ಲ ಕಿತ್ತು ಹಾಕುವ ನಿರ್ಣಯ ಕೈಗೊಂಡಿದ್ದಾರೆ. ಅದರಂತೆ ಕಟ್ಟಿಗೆ ಬೇಕಾದವರು ಗಿಡಗಳನ್ನು ಕಟಾವ್ ಮಾಡಿಕೊಂಡು ಹೋಗಬೇಕೆಂದು ಗ್ರಾಮಸ್ಥರಿಗೆ ಬುಧವಾರ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಮಗೆ ಅಗತ್ಯವಿರುವಷ್ಟು ಗಿಡಗಳನ್ನು ಕತ್ತರಿಸಿಕೊಂಡು ಹೋಗಿದ್ದಾರೆ.

    ಇತ್ತೀಚಿನ ವರ್ಷಗಳಲ್ಲಿ ಮಾವಿನ ಇಳುವರಿ ಕುಂಠಿತಗೊಂಡಿದ್ದಲ್ಲದೆ, ಮಾವಿನಹಣ್ಣಿನ ಬೆಲೆಯೂ ನೆಲ ಕಚ್ಚಿತ್ತು. ಮೂರು ವರ್ಷಗಳಿಗೆ ಗುತ್ತಿಗೆ ಪಡೆದ ಮಧ್ಯವರ್ತಿಗಳು ಮಾವಿನಹಣ್ಣಿನ ದರ ಕುಸಿತದಿಂದಾಗಿ ತೋಟಗಳತ್ತ ಬರಲೇ ಇಲ್ಲ. ಈ ವರ್ಷವೂ ಮಾವಿನ ಫಸಲು ಕೈಕೊಟ್ಟಿದ್ದರಿಂದ ಲಕ್ಷಾಂತರ ರೂ. ಆದಾಯವೂ ಕೈತಪ್ಪಿದೆ. ಇದರಿಂದ ಈ ಭಾಗದ ರೈತರು ಬೇಸರಗೊಂಡಿದ್ದಾರೆ. ಉಳಿದೆಲ್ಲ ಫಸಲಿಗಿಂತ ಮಾವು ಬೆಳೆಯ ಆದಾಯ ಕಡಿಮೆಯಾಗುತ್ತಿದ್ದಂತೆ ಮಾವಿನ ಗಿಡಗಳನ್ನು ಕಿತ್ತುಹಾಕಿ ಅದೇ ಪ್ರದೇಶದಲ್ಲಿ ಅಡಕೆ, ಬಾಳೆ, ಮೆಣಸಿನಗಿಡ, ಗೋವಿನಜೋಳ ಸೇರಿ ಪರ್ಯಾಯ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿದ್ದಾರೆ.

    ಇತ್ತೀಚಿನ ವರ್ಷಗಳಲ್ಲಿ ಮಾವಿನಹಣ್ಣಿನ ದರ ಕುಸಿಯುತ್ತಿದೆ. ಬೇರೆ ಬೆಳೆಗಳನ್ನು ಬೆಳೆದರೆ ಮಾತ್ರ ರೈತ ಉಳಿಯಬಹುದಾಗಿದೆ. ಪ್ರತಿವರ್ಷ ಮಾವಿನಗಿಡಗಳಿಗೆ ಮಾಡಿದ ಖರ್ಚು ಕೂಡ ವಾಪಸ್ ಬರುತ್ತಿಲ್ಲ. ಮಾವಿಗಿಂತ ಹೆಚ್ಚು ಆದಾಯ ಬರುವ ಬೆಳೆ ಬೆಳೆಯುವುದು ಅನಿವಾರ್ಯವಾಗಿದೆ. ಸರ್ಕಾರ ಈ ಸಂದರ್ಭದಲ್ಲಿ ಮಾವಿನ ತೋಟದ ರೈತರಿಗೆ ಹಾನಿಯನ್ನು ತುಂಬಿಕೊಡಬೇಕು.

    | ಗುಡ್ಡನಗೌಡ ಹೊಸಗೌಡ್ರ, ಮಾಸನಕಟ್ಟಿ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts