More

    ಮಾಲೂರು ಆಸ್ಪತ್ರೆ ಮೇಲ್ದರ್ಜೆಗೇರಿಸಲು ಕ್ರಮ

    ಮಾಲೂರು: ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ಕೆಪಿಟಿಸಿಎಲ್‌ನ 10 ಗುಂಟೆ ಜಾಗವನ್ನು ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಪಡೆಯಲು ಶೀಘ್ರದಲ್ಲೇ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.

    ಪಟ್ಟಣದ ಮಾರುತಿ ಬಡಾವಣೆಯಲ್ಲಿ ಜಿಲ್ಲಾಡಳಿತ ಮತ್ತು ನಗರ ಯೋಜನಾ ಪ್ರಾಧಿಕಾರದ ವತಿಯಿಂದ ನೂತನವಾಗಿ ನಿರ್ಮಿಸಿರುವ ನಗರ ಯೋಜನಾ ಪ್ರಾಧಿಕಾರದ ಕಟ್ಟಡವನ್ನು ಗುರುವಾರ ಲೋಕಾರ್ಪಣೆ ಮಾಡಿ ಮಾತನಾಡಿ, ಮಾಲೂರು ಬೆಸ್ಕಾಂಗೆ ಪರ್ಯಾಯ ಜಾಗ ಗುರುತಿಸಿ ನೀಡಲಾಗುವುದು. ಆಸ್ಪತ್ರೆ ಕಟ್ಟಡಕ್ಕೆ ಶೀಘ್ರ ಭೂಮಿಪೂಜೆ ನೆರವೇರಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮಾಲೂರು ಬೆಂಗಳೂರಿಗೆ ಸಮೀಪವಿರುವುದರಿಂದ ಅಭಿವೃದ್ಧಿಗೆ ಬೇಕಿರುವ ಎಲ್ಲ ಸವಲತ್ತುಗಳನ್ನು ಸರ್ಕಾರ ಒದಗಿಸಲು ಬದ್ಧವಾಗಿದೆ. ಮುಖ್ಯಮಂತ್ರಿಗಳು ಜಿಲ್ಲೆಯ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ವಿಶೇಷ ಕೊಡುಗೆ ಪ್ರಕಟಿಸಲಿದ್ದಾರೆ ಎಂದರು.

    ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಮಾತನಾಡಿ, ಮಾಲೂರು ತಾಲೂಕಿನ ಲೆಕ್ಕೇನಹಳ್ಳಿ ನಮ್ಮ ತಾಯಿಯ ತವರುಮನೆ. ನಾನು 4 ವರ್ಷದ ಹುಡುಗನಾಗಿದ್ದಾಗ ಮಾಲೂರಿಗೆ ಬರುತ್ತಿದ್ದೆ. ತಾಲೂಕಿನಲ್ಲಿ ಹೆಚ್ಚು ಕೈಗಾರಿಕೆಗಳು ಬರುತ್ತಿರುವುದರಿಂದ ಅವುಗಳಿಗೆ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಕರ್ತವ್ಯ. ಬೆಳೆಯುತ್ತಿರುವ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಅಗತ್ಯವಿದ್ದು, ಸರ್ಕಾರದಲ್ಲಿ ಚರ್ಚಿಸಿ ಶೀಘ್ರ ಕ್ರಮ ಕೈಗೊಳಲಾಗುವುದು ಎಂದರು.

    ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಯೋಜನಾ ಪ್ರಾಧಿಕಾರ ಹಾಗೂ ತಾಲೂಕು ಕಚೇರಿಯಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅಧಿಕಾರಿಗಳು ಅವಕಾಶ ನೀಡಬಾರದು. ಅಧಿಕಾರಿಗಳು ಜನರಿಗೆ ಅನುಕೂಲ ಮಾಡಿಕೊಡಬೇಕು. ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಕಡ್ಡಾಯವಾಗಿ ಲಸಿಕೆ ಹಾಕಬೇಕು. ಸಿಎಸ್‌ಆರ್ ಅನುದಾನವನ್ನು ಮಾಲೂರು ತಾಲೂಕಿಗೆ ನೀಡುವಂತೆ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರಲ್ಲದೆ 8 ಕೋಟಿ ರೂ. ವೆಚ್ಚದಲ್ಲಿ ಮಾಲೂರಿನ ದೊಡ್ಡಕೆರೆ ಅಭಿವೃದ್ಧಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದರು.

    ಎಮ್ಮೆಲ್ಸಿ ಗೋವಿಂದರಾಜು ಮಾತನಾಡಿ, ಜ್ಞಾನಪೀಠ ಪುರಷ್ಕೃತರಾದ ಮಾಸ್ತಿ ವೆಂಕಟೇಶ್ ಐಯ್ಯಂಗಾರ್ ಸಂಶೋಧನಾ ಕ್ಷೇಂದ್ರ ಸ್ಥಾಪಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕೋಲಾರ ಮತ್ತು ಮಾಲೂರು ನಗರಗಳಲ್ಲಿ ವರ್ತುಲ ರಸ್ತೆ ನಿರ್ಮಿಸಬೇಕು, ಜಿಲ್ಲೆಯಲ್ಲಿ 62 ರೀತಿಯ ವಿವಿಧ ತರಕಾರಿ ಹಣ್ಣುಗಳನ್ನು ಬೆಳೆಯುತ್ತಾರೆ. ತರಕಾರಿ ಸಂಗ್ರಹಿಸಲು ಕೋಲಾರದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪಿಸಬೇಕು ಎಂದರು.

    ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು, ಈಗಾಗಲೆ ಮಾಸ್ತಿಯಲ್ಲಿ 8 ಎಕರೆ ಪ್ರದೇಶದಲ್ಲಿ ವೆಂಕಟೇಶ್ ಐಯ್ಯಂಗಾರ್ ವಸತಿ ಶಾಲೆಗೆ ಕಟ್ಟಡ ನಿರ್ಮಾಣಕ್ಕೆ ಹಿಂದಿನ ಸರ್ಕಾರ 8 ಕೋಟಿ ರೂ. ಬಿಡುಗಡೆ ಮಾಡಿದೆ, ಕಟ್ಟಡ ಕಾಮಗಾರಿ ಪ್ರಾರಂಭಿಸಲು ಸಹಕರಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.

    ಅಭಿವೃದ್ಧಿ ವಿಚಾರಕ್ಕೆ ಸಿಎಂ ದೆಹಲಿಗೆ: ರಾಜ್ಯದ ಅಭಿವೃದ್ಧಿ ಕುರಿತು ಚರ್ಚಿಸಲು ಸಿಎಂ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಂಡಿದ್ದಾರೆ, ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದರು.
    ಮಾಲೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಅಭಿವೃದ್ಧಿ ಜತೆಗೆ ಅವಶ್ಯವಿರುವ ಕರೊನಾ ಲಸಿಕೆ ಸರಬರಾಜು ಸಂಬಂಧ ಚರ್ಚಿಸಲು ದೆಹಲಿಗೆ ತೆರಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ವಿಚಾರ, ಅಸಮಾಧಾನ ಎಲ್ಲವೂ ತಿಳಿಯಾಗಿ ಗೊಂದಲ ನಿವಾರಣೆಯಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಪಕ್ಷ ಸಂಘಟನೆ ಉದ್ದೇಶದಿಂದ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ, ಅದರಲ್ಲಿ ಬೇರೆ ಉದ್ದೇಶವಿಲ್ಲ ಎಂದರು.

    ಉಸ್ತುವಾರಿ ಸಚಿವ ಮುನಿರತ್ನ ಮಾತನಾಡಿ, ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಮುಂದೆ ಎಲ್ಲವೂ ಸರಿ ಹೋಗಲಿದೆ. ಶ್ರೀನಿವಾಸಪುರದಲ್ಲಿ ತಾಲೂಕು ಆರೋಗ್ಯ ಕೇಂದ್ರ ಉದ್ಘಾಟನೆಗೆ ಸಚಿವ ಸುಧಾಕರ್‌ಗೆ ಬರಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಕಾರ್ಯಕ್ರಮ ರದ್ದಾಗಿದೆ. ಸಚಿವರಿಗೆ ಯಾವುದೇ ಅಸಮಾಧಾನ ಇಲ್ಲ, ನಾವೆಲ್ಲ ಒಂದೇ ಎಂದರು.
    ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಮಾಲೂರು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಪಿ.ಸತೀಶ್ ಆರಾಧ್ಯ, ಸದಸ್ಯ ಕಾರ್ಯದರ್ಶಿ ಎಚ್.ಆರ್.ಕೃಷ್ಣಪ್ಪ, ಸದಸ್ಯರಾದ ಎಂ.ಸಿ.ರವಿ, ಇಮ್ತಿಯಾಜ್, ಪ್ರಭಾಕರ್, ಅಮರಾವತಿ, ತಹಸೀಲ್ದಾರ್ ರಮೇಶ್, ಪುರಸಭೆ ಅಧ್ಯಕ್ಷ ಎನ್.ವಿ.ಮುರುಳೀಧರ್, ರಾಜ್ಯ ಬಿಜೆಪಿ ಫಲಾನುಭವಿಗಳ ಪ್ರಕೋಷ್ಠ ಸದಸ್ಯ ಹೂಡಿ ವಿಜಯ್‌ಕುಮಾರ್, ಬಿಜೆಪಿ ಮುಖಂಡರಾದ ಆರ್.ಪ್ರಭಾಕರ್ ಎಸ್.ಕೃಷ್ಣಾರೆಡ್ಡಿ ಇದ್ದರು.

    ಕರೊನಾ 3ನೇ ಅಲೆಯಲ್ಲಿ ಮಕ್ಕಳ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂಬ ತಜ್ಞರ ವರದಿಯಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ಬಾರಿ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಸಮಸ್ಯೆಗಳನ್ನು ಶೀಘ್ರ ಹಂತ-ಹಂತವಾಗಿ ಬಗೆಹರಿಸಲು ಕ್ರಮ ವಹಿಸಲಾಗುತ್ತಿದೆ.
    ಮುನಿರತ್ನ, ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts