More

    ಮಾರ್ಗಸೂಚಿ ಕಡೆಗಣನೆ, ಸೋಂಕು ಹೆಚ್ಚಳ

    ಕುಮಟಾ: ಜಿಲ್ಲೆಯಲ್ಲಿ ಕರೊನಾ ಸೋಂಕಿತರು ಹಾಗೂ ಮರಣ ಹೊಂದಿದವರಲ್ಲಿ ಹೆಚ್ಚಿನ ಪಾಲು ಪುರುಷರದ್ದಾಗಿದೆ. ಸ್ತ್ರೀಯರಿಗಿಂತ ಪುರುಷರು ಹೆಚ್ಚೆಚ್ಚು ಸಾಮಾಜಿಕವಾಗಿ ಕರೊನಾ ಮಾರ್ಗಸೂಚಿ ಕಡೆಗಣಿಸಿ ಅಸುರಕ್ಷಿತವಾಗಿ ಬೆರೆಯುತ್ತಿರುವುದೇ ಇದಕ್ಕೆ ಕಾರಣ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಹೇಳಿದರು.

    ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಆರೋಗ್ಯ ದೃಷ್ಟಿಯಿಂದ ದುರ್ಬಲರು ತೀರಾ ಅನಿವಾರ್ಯವಾದರೆ ಮಾತ್ರ ಸಾಮಾಜಿಕವಾಗಿ ಬೆರೆಯಬೇಕು. ಎಲ್ಲ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆದರೆ, ದುರಾದೃಷ್ಟವಶಾತ್ ಇದು ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿಲ್ಲ ಎಂದರು.

    ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಪಿಡಿಒಗಳಿಗೆ ಮನೆ ಮನೆಗೆ ಹೋಗಿ ಸರ್ವೆ ಮಾಡಿ ಎಂದು ಹೇಳಿಲ್ಲ. ಅವರ ಕಾರ್ಯ ವ್ಯಾಪ್ತಿಯಲ್ಲಿ ಆರೋಗ್ಯ ದೃಷ್ಟಿಯಿಂದ ದುರ್ಬಲವಾಗಿರುವವರ ಯಾದಿ ಇದೆ. ಆ ಪ್ರಕಾರ ನಿಗಾವಹಿಸಲು ತಿಳಿಸಿದ್ದೇವೆ. ಮುಖ್ಯವಾಗಿ ಆರೋಗ್ಯ ದುರ್ಬಲರು ಯಾವುದೇ ಚಿಕಿತ್ಸೆ ಬೇಕಾದಾಗ ಆರೋಗ್ಯ ಇಲಾಖೆ ಅಥವಾ ತಾಲೂಕಾಡಳಿತ ಸಂರ್ಪಸಬೇಕು. ಇದರಿಂದ ಸಮಸ್ಯೆಯ ಆರಂಭದಲ್ಲೇ ಚಿಕಿತ್ಸೆಗೆ ಅನುಕೂಲವಾಗುತ್ತದೆ. ಕೊನೆ ಗಳಿಗೆಯವರೆಗೂ ಕಾಯಬಾರದು ಎಂದರು.

    ಕರೊನಾ ಪರೀಕ್ಷೆ ಬಗ್ಗೆ ವದಂತಿಗಳಿಗೆ ಕಿವಿಗೊಡಬಾರದು, ಬಹಳಷ್ಟು ಪ್ರಕರಣಗಳಲ್ಲಿ ವೈದ್ಯರ ಬಳಿ ಬರುವಾಗ ಆಮ್ಲಜನಕದ ಅಗತ್ಯ ಉಂಟಾಗಿರುತ್ತದೆ. ಮಂಗಳೂರಿಗೆ ಕಳುಹಿಸುವಷ್ಟು ಸಮಯ ಕೂಡ ಇರುವುದಿಲ್ಲ. ಆಗ ಅನಗತ್ಯವಾಗಿ ಜೀವ ಕಳೆದುಕೊಳ್ಳಬೇಕಾಗುತ್ತದೆ ಎಂದು ಡಿಸಿ ವಿವರಿಸಿದರು.

    ಕರೊನಾ ಲಕ್ಷಣ ಉಳ್ಳವರಿಗೆ ಮಾತ್ರ ಹೋಮ್ ಐಸೋಲೇಷನ್​ಗೆ ಅವಕಾಶ ಕೊಡುತ್ತಿದ್ದೇವೆ. ಪಕ್ಕದ ಜಿಲ್ಲೆಗಳಲ್ಲಿ ಹಾಸಿಗೆ ತುಂಬಿದೆ. ಹೀಗಾಗಿ ಇಂದಿನಿಂದ ಕುಮಟಾದಲ್ಲಿ ಕರೊನಾ ಗಂಭೀರ ಪ್ರಕರಣಗಳಿಗೂ ಚಿಕಿತ್ಸೆ ನಡೆಯಲಿದೆ. ಕ್ರಿಮ್್ಸ ತಜ್ಞರು ಇಲ್ಲಿಗೂ ಬರಲಿದ್ದಾರೆ ಎಂದರು.

    ಜನ ಸಹಕಾರ ಕೊಟ್ಟರೆ ಮಾತ್ರ ನಾವು ಕರೊನಾವನ್ನು ತಡೆಗಟ್ಟಲು ಸಾಧ್ಯ. ಲಾಕ್​ಡೌನ್ ಶೇ. 90ರಷ್ಟು ತೆರೆದಿದ್ದರಿಂದ ಜನರ ಓಡಾಟ ಜಾಸ್ತಿಯಾಗಿದೆ. ಹೀಗಾಗಿ ಸೋಂಕಿನ ಪ್ರಕರಣ ಹೆಚ್ಚಲು ಕಾರಣವಾಗಿರಬಹುದು. ಜನರಲ್ಲಿ ಜಾಗೃತಿ ಮೂಡಬೇಕು ಎಂದು ಹೇಳಿದರು.

    ಸರ್ಕಾರಿ ಕಚೇರಿಯಲ್ಲಿ ಸೇವೆಗಾಗಿ ಹಣ ಕೇಳಿದರೆ ಹಣ ಕೊಡಬೇಡಿ, ಹಣ ಪಡೆದವನಷ್ಟೇ ಕೊಡುವವನೂ ಶಿಕ್ಷಾರ್ಹ ಆಗುತ್ತಾರೆ. ಎಸಿಬಿಗೆ ದೂರು ಕೊಡಬಹುದು. ಆದರೂ ಮೊದಲು ಜಿಲ್ಲಾಡಳಿತದ ಗಮನಕ್ಕೆ ತಂದರೆ ಉತ್ತಮ ಜಿಲ್ಲಾಧಿಕಾರಿ ಹೇಳಿದರು.

    ಸಾಮಾಜಿಕ ಜಾಲತಾಣಗಳಲ್ಲಿ ಬಂದ ಅನಧಿಕೃತ ಸುದ್ದಿಗಳನ್ನು ದಯವಿಟ್ಟು ಪತ್ರಿಕಾ ಮಾಧ್ಯಮದಲ್ಲಿ ಸತ್ಯಾಸತ್ಯತೆ ಪರಿಶೀಲಿಸಿದೇ ಪ್ರಕಟಿಸಬೇಡಿ, ಏಕೆಂದರೆ ಮುದ್ರಣ ಮಾಧ್ಯಮಕ್ಕೆ ಸುದ್ದಿ ಖಚಿತತೆ ತಿಳಿದುಕೊಳ್ಳಲು ಬೇಕಾದಷ್ಟು ಸಮಯಾವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ತಿಳಿಸಿದರು. ಉಪವಿಭಾಗಾಧಿಕಾರಿ ಅಜಿತ್ ಎಂ. ರೈ., ತಾಪಂ ಇಒ ಸಿ.ಟಿ. ನಾಯ್ಕ, ಸಿಪಿಐ ಪರಮೇಶ್ವರ ಗುನಗಾ ಇದ್ದರು.

    ಸರ್ಕಾರಿ ಕಚೇರಿಗಳಲ್ಲಿ ಮಾಸ್ಕ್ ಕಡ್ಡಾಯ
    ಮಾಸ್ಕ್ ಧರಿಸದವರಿಗೆ ಸರ್ಕಾರಿ ಕಚೇರಿಗಳಿಗೆ ಪ್ರವೇಶವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಆದೇಶ ಹೊರಡಿಸಿದ್ದಾರೆ. ಬಹುತೇಕರು ಮಾಸ್ಕ್ ಧರಿಸದೆ ಓಡಾಡುವುದು ಕಂಡುಬರುತ್ತಿದೆ. ಪರಸ್ಪತ ಅಂತರ ಇಲ್ಲದೆ ಓಡಾಡುವುದು ಸಾಮಾನ್ಯವಾಗಿಬಿಟ್ಟಿದೆ. ಈ ಹಂತದಲ್ಲಿ ಕರೊನಾ ನಿಯಂತ್ರಣದಲ್ಲಿದೆಯೆಂದು ನಾವು ಮೈಮರೆಯುವ ಹಾಗಿಲ್ಲ. ಅಲ್ಲದೆ, ಮಾರ್ಗಸೂಚಿಯ ಪ್ರಕಾರ ಪರಸ್ಪರ ಅಂತರ ಕಾಯ್ದುಕೊಳ್ಳದೇ ಇರುವುದು ಮಾಸ್ಕ್ ಧರಿಸದೇ ಇರುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದು ದಂಡನೀಯ ಅಪರಾಧವಾಗಿರುತ್ತದೆ ಎಂದಿದ್ದಾರೆ. ಮಾಸ್ಕ್ ಧರಿಸದವರಿಗೆ ನಗರ ಪ್ರದೇಶದಲ್ಲಿ 200 ಗ್ರಾಮೀಣ ಪ್ರದೇಶದಲ್ಲಿ 100 ರೂ. ದಂಡ ವಿಧಿಸಲಾಗುವುದು. ವ್ಯಾಪಾರದ ಸ್ಥಳದಲ್ಲಿ ಮಾಸ್ಕ್ ಧರಿಸದೆ ಇದ್ದರೆ, ಅಂಗಡಿ ಮಾಲೀಕರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಈ ನಿಟ್ಟಿನಲ್ಲಿ ಕ್ರಮ ವಹಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts