More

    ಮಾರಿಕಾಂಬಾ ಜಾತ್ರಾ ಮಹೋತ್ಸವ ಸಿದ್ಧತೆ

    ಶಿರಸಿ: ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದಾದ ಶಿರಸಿಯ ಮಾರಿಕಾಂಬಾ ದೇವಿಯ ದ್ವೈವಾರ್ಷಿಕ ಜಾತ್ರಾ ಮಹೋತ್ಸವದ ಸಿದ್ಧತೆಗಳು ಭರದಿಂದ ಸಾಗಿದ್ದು, ಆಹ್ವಾನ ಪತ್ರಿಕೆಯನ್ನು ಬುಧವಾರ ದೇವಾಲಯದಲ್ಲಿ ಬಿಡುಗಡೆ ಮಾಡಲಾಯಿತು.

    ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಡಾ. ವೆಂಕಟೇಶ ನಾಯ್ಕ ಮಾತನಾಡಿ, ಸಂಪ್ರದಾಯದಂತೆ ಮಾ. 3ರಿಂದ 11ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ದೇವಾಲಯದಲ್ಲಿ ಈಗಾಗಲೇ ಜಾತ್ರಾ ಪೂರ್ವ ವಿವಿಧ ಧಾರ್ವಿುಕ ಚಟುವಟಿಕೆಗಳು ಆರಂಭವಾಗಿವೆ ಎಂದರು.

    ಮಂಟಪ ಕಳಚುವ ಕಾರ್ಯ ಪೂರ್ಣಗೊಂಡಿದೆ. ಫೆ. 11ರಂದು ಮೊದಲ ಹೊರಬೀಡು ಪ್ರಾರಂಭವಾಗಲಿದೆ. 25ರಂದು ರಥ ಮರ ತರುವ ಸಂಪ್ರದಾಯ, ನಂತರ ಅಂಕೆಯ ಹೊರಬೀಡು, 26ರಂದು ಅಂಕೆ ಹಾಕುವುದು ಹಾಗೂ ದೇವಿಯ ವಿಗ್ರಹ ವಿಸರ್ಜನೆ, ಮಾ. 3ರಂದು ರಥದ ಕಲಶ ಪ್ರತಿಷ್ಠೆ, ರಾತ್ರಿ 11.11ಕ್ಕೆ ದೇವಿಯ ಕಲ್ಯಾಣೋತ್ಸವ. 4ರಂದು ಬೆಳಗ್ಗೆ 7.05ರಿಂದ ರಥಾರೋಹಣ, 8.19ರಿಂದ ಶೋಭಾಯಾತ್ರೆ, ಮಧ್ಯಾಹ್ನ 12.43ರೊಳಗೆ ದೇವಿ ಪ್ರತಿಷ್ಠೆ, ಮಾ. 5ರಿಂದ ಸೇವಾ ಕಾರ್ಯ ಆರಂಭವಾಗಲಿದೆ ಎಂದರು. ಜಾತ್ರೆ ವೇಳೆ ಭಕ್ತರಿಗೆ ಅನುಕೂಲ ಮಾಡಿಕೊಡಲು ಈಗಾಗಲೇ ಸಾಕಷ್ಟು ಸಭೆ ನಡೆಸಿ ಕ್ರಮ ವಹಿಸಲಾಗಿದೆ. ಪ್ರಚಾರ ಉದ್ದೇಶದಿಂದ ಮಂಗಳೂರು, ಗೋವಾ, ದಾವಣಗೆರೆ, ಬೆಳಗಾವಿ ಭಾಗದಲ್ಲಿ ಜಾಹೀರಾತು ಫಲಕ ಅಳವಡಿಸುವ ಕಾರ್ಯ ಸಾಗಿದೆ. ರೆಡಿಯೋ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚಿನ ಪ್ರಚಾರ ನೀಡಲು ತೀರ್ವನಿಸಲಾಗಿದೆ. ದೇವಾಲಯದ ಎಲ್ಲ ಧಾರ್ವಿುಕ ವಿಚಾರಗಳನ್ನು ಜಗತ್ತಿನಾದ್ಯಂತ ಪ್ರಚುರಗೊಳಿಸಿ ಭಕ್ತರಿಗೆ ತಲುಪುವಂತೆ ಕ್ರಮ ವಹಿಸಲಾಗುತ್ತಿದೆ ಎಂದರು.

    ದೇವಾಲಯದ ಅನ್ನಪ್ರಸಾದ ಹಾಗೂ ಪ್ರಸಾದ ವಿತರಣೆ ಸಂಬಂಧ ದೋಷ ಇರದಂತೆ ಕಾರ್ಯ ಮಾಡಲು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ಸಮಕ್ಷಮ ಕ್ರಮ ವಹಿಸಲಾಗುವುದು. ಅಂಗವಿಕಲರು ಹಾಗೂ ವೃದ್ಧರಿಗೆ ಗಾಲಿ ಖುರ್ಚಿ ಮೂಲಕ ದೇವರ ದರ್ಶನ ಪಡೆಯಲು ಸೌಲಭ್ಯ ಒದಗಿಸಲಾಗುವುದು. ಜತೆಗೆ ಮಕ್ಕಳ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗುವುದು ಎಂದರು.

    ದೇವರ ದರ್ಶನ ಸುಲಭವಾಗಲು ಗದ್ದುಗೆ ಸುತ್ತ ಮಳಿಗೆಗಳಿಗೆ ಬಾಡಿಗೆ ನೀಡದೆ ಖಾಲಿ ಬಿಡಲು ತೀರ್ವನಿಸಲಾಗಿದೆ. ಜಾತ್ರೆಯ ಭದ್ರತೆ ದೃಷ್ಟಿಯಿಂದ ದೇವಾಲಯ ಹಾಗೂ ಜಾತ್ರೆ ಕಾರ್ಯಕ್ಕೆ ಸಂಬಂಧಿಸಿದವರಿಗೆ ಕಡ್ಡಾಯವಾಗಿ ಗುರುತಿನ ಚೀಟಿ ನೀಡಲಾಗುವುದು ಎಂದರು.

    ಉಪಾಧ್ಯಕ್ಷ ಮನೋಹರ ಮಲ್ಮನೆ, ಧರ್ಮದರ್ಶಿ ಲಕ್ಷ್ಮಣ ಕಾನಡೆ, ಶಶಿಕಲಾ ಚಂದ್ರಾಪಟ್ಟಣ, ಶಾಂತಾರಾಮ ಹೆಗಡೆ, ದೇವಾಲಯದ ವ್ಯವಸ್ಥಾಪಕ ನರೇಂದ್ರ ಜಾಧವ ಇದ್ದರು.

    2018ರ ಜಾತ್ರೆಯಲ್ಲಿ ದೇವಾಲಯದ ಎಲ್ಲ ಆದಾಯ ಮೂಲಗಳಿಂದ 4.26 ಕೋ.ರೂ. ಸಂಗ್ರಹವಾಗಿತ್ತು. ಅದರಲ್ಲಿ 2.50 ಕೋ.ರೂ. ವೆಚ್ಚವಾಗಿದೆ. ಜಾತ್ರೆ ಸಮಯದಲ್ಲಿ ಭಕ್ತರು ನೀಡಿದ ಕಾಣಿಕೆ ಹಣದಲ್ಲೇ ದೇವಸ್ಥಾನ ಅಭಿವೃದ್ಧಿ ಮಾಡಬೇಕು. ದೇವಾಲಯದ ಆಡಳಿತ ವ್ಯವಸ್ಥೆ ಸರಳೀಕರಣ ಮಾಡಲು ಪೂರಕವಾಗಿ ಜಾತ್ರೆ ಪೂರ್ವ ದೇವಾಲಯದ ಸಮಗ್ರ ಅಭಿವೃದ್ಧಿ ಸಂಬಂಧ ಮಾಸ್ಟರ್ ಪ್ಲಾನ್ ಬಿಡುಗಡೆ ಮಾಡಲಾಗುವುದು. ದೇವಾಲಯ ಸುರಕ್ಷತೆ ಅಂಗವಾಗಿ ಫೇಸ್ ರೀಡಿಂಗ್ ಮೆಟಲ್ ಡಿಟೆಕ್ಟರ್ ಅಳವಡಿಸುವ ಜತೆಗೆ ಗನ್​ವ್ಯಾನ್​ಗಳನ್ನು ನೇಮಕ ಮಾಡಲಾಗುವುದು.
    | ಡಾ. ವೆಂಕಟೇಶ ನಾಯ್ಕ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts